ನರಕ ಯಾತನೆಗೆ ಕೊನೆ; 163 ವರ್ಷಗಳ ಬಳಿಕ ರೈಲ್ವೆ ಎಂಜಿನ್‌ಗಳಲ್ಲಿ ಜೈವಿಕ ಶೌಚಾಲಯ
ವಿಶ್ವದ ಅತ್ಯಂತ ಪುರಾತನ ಮತ್ತು ಇತಿಹಾಸ ಪ್ರಸಿದ್ಧ ಭಾರತೀಯ ರೈಲ್ವೆ ಆರಂಭವಾದ 163 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರೈಲು ಎಂಜಿನ್ ಗಳಲ್ಲಿ ಜೈವಿಕ ಶೌಚಾಲಯಗಳ (ಬಯೋ ಟಾಯ್ಲೆಟ್) ಸೇವೆಯನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ರೈಲು ಎಂಜಿನ್ ಚಾಲಕರಾದ 'ಲೊಕೊ ಪೈಲಟ್' ಗಳು ನಿಟ್ಟುಸಿರು ಬಿಡುವಂತಾಗಿದೆ.
ಪ್ರಯಾಣಿಕರನ್ನು ತಮ್ಮ ಗಮ್ಯಸ್ಥಾನ ತಲುಪಿಸುವಲ್ಲಿ ಸದಾ ಬದ್ಧರಾಗಿರುವ ಲೊಕೊ ಪೈಲಟ್ ಗಳ ಜೀವನ ಮಾತ್ರ ಅತ್ಯಂತ ಶೋಚನೀಯ ಅವಸ್ಥೆಗೆ ಬಂದು ತಲುಪಿದೆ. ಈಗ ಕೊನೆಗೂ ಲೊಕೊ ಪೈಲಟ್ ಗಳ ಅಳಲಿಗೆ ರೈಲ್ವೆ ಸಚಿವಾಲಯ ಓಗೊಟ್ಟಿದೆ.

ಸ್ತ್ರೀಯರು ಸೇರಿದಂತೆ ದೇಶಾದ್ಯಂತ ಒಟ್ಟಾರೆ 70,000 ಲೊಕೊ ಪೈಲಟ್ ಗಳು ದುಡಿಯುತ್ತಿದ್ದಾರೆ. ಸರಾಸರಿ 72 ಗಂಟೆಗಳಷ್ಟು ಕಾಲ ದುಡಿಯುವ ಲೊಕೊ ಪೈಲಟ್ ಗಳಿಗೆ ನಿಯಮಿತ 30 ತಾಸುಗಳ ಆರಾಮ ಮಾತ್ರ ದೊರಕುತ್ತಿದೆ.

ರೈಲ್ವೆ ವೇಳಾಪಟ್ಟಿ ವಿಳಂಬವಾದ್ದಲ್ಲಿ ಲೊಕೊ ಪೈಲಟ್ ಗಳ ಪರಿಸ್ಥಿತಿ ಮತ್ತಷ್ಟು ದುಸ್ತರವೆನಿಸುತ್ತದೆ. ಇದರಿಂದಾಗಿ ತಮ್ಮ ಕುಟುಂಬದ ಜೊತೆ ಸಮಯ ಕಳೆಯಲು ಪರದಾಡಬೇಕಾಗುತ್ತದೆ.

ದೇಶದಲ್ಲಿ 9,000ದಷ್ಟು ಲೊಕೊಮೋಟಿವ್ ಎಂಜಿನ್ ಗಳಿಂದ ದೈನಂದಿನ 25 ದಶಲಕ್ಷ ಪ್ರಯಾಣಿಕರು ಮತ್ತು ಮೂರು ಮಿಲಿಯನ್ ಟನ್ ಸರಕುಗಳನ್ನು ಹೊತ್ತೊಯ್ಯಲಾಗುತ್ತಿದೆ.

ಪರಿಣಿತ ಲೊಕೊ ಪೈಲಟ್ ಗಳ ಜೊತೆ 6000 ಕೀ.ಮೀ. ಗಳಷ್ಟು ತರಬೇತಿಯ ಬಳಿಕ ತಮ್ಮ ವೃತ್ತಿ ಜೀವನ ಆರಂಭಿಸುವ ಲೊಕೊ ಪೈಲಟ್ ಗಳು ತದಾ ಬಳಿಕ ಅನಿಯಮಿತವಾಗಿ ದುಡಿಯಬೇಕಾಗುತ್ತದೆ.

ಪ್ರಯಾಣಿಕ ಲೊಕೊ ಪೈಲಟ್ ಗಳನ್ನು ಹೊರತುಪಡಿಸಿದರೆ ಇತರೆ ಲೊಕೊ ಪೈಲಟ್ ಗಳಿಗೆ ನಿಗದಿತ ಸಮಯದ ವೇಳಾಪಟ್ಟಿಯಿರುವುದಿಲ್ಲ. ಅಲ್ಲದೆ ಯಾವುದೇ ರೀತಿ ವಿಳಂಬ ಅಥವಾ ಅಪಘಾತ ಘಟಿಸಿದ್ದಲ್ಲಿ ಮೇಲಾಧಿಕಾರಿಗಳಿಗೆ ಸ್ಪಷ್ಟ ಉತ್ತರ ಕೊಡಬೇಕಾಗುತ್ತದೆ.

ಗಾಳಿ, ಮಳೆ, ಬಿಸಿಲು, ಶೀತ ಸೇರಿದಂತೆ ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ದುಡಿಯಲು ಲೊಕೊ ಪೈಲಟ್ ತಯಾರಾಗಿರಬೇಕು.

ಇವೆಲ್ಲದಕ್ಕೂ ಮಿಗಿಲಾಗಿ ಅನಿಯಮಿತ ಆಹಾರ ಸೇವೆನೆ, ನಿದ್ರಾಹೀನತೆ, ಏಕಾಂಗಿತನ ಮತ್ತು ಒತ್ತಡ ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಈಗ 163 ವರ್ಷಗಳ ಬಳಿಕ ಭಾರತೀಯ ರೈಲ್ವೆ ಮೊಟ್ಟ ಮೊದಲ ಬಾರಿಗೆ ಲೊಕೊ ಎಂಜಿನ್ ಗಳಲ್ಲಿ ಜೈವಿಕ ಶೌಚಾಲಯಗಳನ್ನು ಘೋಷಿಸಿದೆ.

ರೈಲ್ವೆ ಸಚಿವಾಲಯದ ಮಾಹಿತಿಗಳ ಪ್ರಕಾರ ಬಯೋ ಟಾಯ್ಲೆಟ್ ಗಳಲ್ಲಿ ಹಲವು ವಿಧದ ಸೆನ್ಸಾರ್ ಮತ್ತು ತಂತ್ರಜ್ಞಾನಗಳನ್ನು ಆಳವಡಿಸಲಾಗುತ್ತದೆ. ಉದಾಹರಣೆಗೆ ರೈಲಿನ ವೇಗ ಶೂನ್ಯ ಆಗಿದ್ದಲ್ಲಿ ಮಾತ್ರ ಜೈವಿಕ ಶೌಚಾಲಯದ ಬಾಗಿಲು ತೆರೆದುಕೊಳ್ಳಲಿದೆ.

ಹಾಗೆಯೇ ರೈಲು ಸಂಚರಿಸುತ್ತಿರುವಾಗ ಬಯೋ ಟಾಯ್ಲೆಟ್ ಗಳನ್ನು ಬಳಕೆ ಮಾಡಲು ಸಾಧ್ಯವಿಲ್ಲ. ಅಂತೆಯೇ ಬಯೋ ಟಾಯ್ಲೆಟ್ ಒಳಗಡೆ ಪೈಲಟ್ ಇದ್ದಲ್ಲಿ ಎಂಜಿನ್ ಬ್ರೇಕ್ ಗಳು ಲಾಕ್ ಆಗುವ ವ್ಯವಸ್ಥೆಯನ್ನು ಕೊಡಲಾಗಿದೆ.

ಪ್ರಸ್ತುತ ರೈಲ್ವೆ ಇಲಾಖೆಯ ನಿರ್ಧಾರವನ್ನು ಭಾರತೀಯ ರೈಲ್ವೆ ಲೊಕೊ ರನ್ನಿಂಗ್ ಮೆನ್ಸ್ ಓರ್ಗನೈಸೇಷನ್ (ಐಆರ್‌ಎಲ್‌ಆರ್‌ಒ) ಸ್ವಾಗತಿಸಿದೆ.

ಯಾವುದೇ ವಿರಾಮವಿಲ್ಲದೆ 12 ತಾಸುಗಳ ನಿರಂತರ ಪ್ರಯಾಣವನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








