ಪ್ರಪಂಚದ ಅತಿದೊಡ್ಡ ರೊಬೊಟಿಕ್ ಪಾರ್ಕಿಂಗ್ ಟವರ್
ನಗರ ಪ್ರದೇಶದೆಲ್ಲೆಡೆ ವಾಹನಗಳು ಕಿಕ್ಕಿರಿದು ತುಂಬಿ ಹೋಗಿದೆ. ಈ ಎಲ್ಲದರ ನಡುವೆ ವಾಹನ ನಿಲುಗಡೆ ಪ್ರದೇಶವನ್ನು ಹುಡುಕುವುದೇ ಕಷ್ಟಕರ. ಹಾಗಿರುವಾಗ ನಿಮ್ಮೆಲ್ಲ ಪ್ರಯಾಸವನ್ನು ದೂರಮಾಡಿಕೊಂಡು ರೊಬೊಟಿಕ್ ತಂತ್ರಜ್ಞಾನದಲ್ಲೇ ಎಲ್ಲವೂ ಸುಲಲಿತವಾಗಿ ನಡೆಸಿ ಕೊಟ್ಟರೆ ಹೇಗಿರಬಹುದು?
ಹೌದು, ವಿದೇಶದಲ್ಲಿ ಇಂತಹದೊಂದು ತಂತ್ರಜ್ಞಾನ ತಲೆದೋರಿದೆಯಷ್ಟೇ ಅಲ್ಲದೆ ಗಿನ್ನೆಸ್ ದಾಖಲೆ ಪುಟಕ್ಕೂ ಸೇರ್ಪಡೆಯಾಗಿದೆ. ಅಂದ ಹಾಗೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಈ ವಿಶ್ವದ ಅತಿ ದೊಡ್ಡ ಪಾರ್ಕಿಂಗ್ ವ್ಯವಸ್ಥೆಯು ದುಬೈನಲ್ಲಿದೆ.

ವಿಶ್ವದ ಅತಿ ದೊಡ್ಡ ಸ್ವಯಂಚಾಲಿತ ಪಾರ್ಕಿಂಗ್ ವ್ಯವಸ್ಥೆ
ವಿಶ್ವದ ಅತಿ ದೊಡ್ಡ ಸ್ವಯಂಚಾಲಿತ ಪಾರ್ಕಿಂಗ್ ವ್ಯವಸ್ಥೆ ಎಂಬ ಗೌರವಕ್ಕೆ ದುಬೈನ ಎಮಿರೇಟ್ಸ್ ಫಿನಾನ್ಸಿಯಲ್ ಟವರ್ಸ್ ಪಾತ್ರವಾಗಿದೆ. ಇಲ್ಲಿನ ಬೃಹತ್ ಕಟ್ಟಡದಲ್ಲಿ ಏಕಕಾಲಕ್ಕೆ 1191 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ.

ಒಂಬತ್ತು ಮಳಿಗೆ
ಇಲ್ಲಿನ ಬೃಹತ್ ಸ್ವಯಂಚಾಲಿತ ಪಾರ್ಕಿಂಗ್ ಕಟ್ಟಡವು ಒಂಬತ್ತು ಮಳಿಗೆಗಳನ್ನು ಹೊಂದಿದೆ. ಇದು ರೋಬೊಟಿಕ್ ತಂತ್ರಜ್ಞಾನದಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಗಂಟೆಗೆ 360 ಕಾರುಗಳ ನಿಯಂತ್ರಣ
2011 ಜೂನ್ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ಎಮಿರೇಟ್ಸ್ ಫಿನಾನ್ಸಿಯಲ್ ಟವರ್ ಗಂಟೆಗೆ 360 ಕಾರುಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ.

ಸ್ವಯಂಚಾಲಿತ ವ್ಯವಸ್ಥೆ
ಇಲ್ಲಿ ನೀವು ಕಾರಿನೊಳಗೆ ಕುಳಿತುಕೊಂಡು ರಿಯರ್ ವ್ಯೂ ನೋಡುತ್ತಾ ಪಾರ್ಕಿಂಗ್ ಜಾಗ ಹುಡುಕಿಕೊಂಡು ತೆರಳುವ ಅಗತ್ಯವಿಲ್ಲ. ಒಮ್ಮೆ ಹೊರಂಗಣದಲ್ಲಿ ಕಾರು ಬಿಟ್ಟು ತೆರಳಿದರೆ ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಕಟ್ಟಡದೊಳಗೆ ಸ್ವಯಂಚಾಲಿತವಾಗಿ ವಾಹನ ನಿಲುಗಡೆಯಾಗಲಿದೆ.

ಕಾರ್ ವಾಶ್
ಹಾಗೆಯೇ ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ಕಾರು ವಾಶ್ ಸೇವೆಯನ್ನು ಇಲ್ಲಿ ಒದಗಿಸಲಾಗುತ್ತದೆ. ಅಂದರೆ ಏಕಕಾಲದಲ್ಲಿ ವಾಹನ ನಿಲುಗಡೆ ಹಾಗೂ ಕಾರು ವಾಶಿಂಗ್ ಸೌಲಭ್ಯವನ್ನು ನಿಮ್ಮದಾಗಿಸಬಹುದಾಗಿದೆ.

ಎಂಎಜಿ ರಾಯಲ್ ಸೊಲ್ಯೂಷನ್ಸ್ ಇಂತಹದೊಂದು ನಾವೀನ್ಯ ತಂತ್ರಜ್ಞಾನವನ್ನು ಅಭಿವೃದ್ಧಪಡಿಸಿದ್ದು, ಯುರೋಪ್ ಹಾಗೂ ಅಮೆರಿಕ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗಿದೆ.

ಕಾರು ಪಾರ್ಕ್ ಮಾಡುವುದು ಹೇಗೆ?
ಇಲ್ಲಿನ ವ್ಯವಸ್ಥೆ ಬಹಳ ಸರಳವಾಗಿದ್ದು, ಆಟೋಮ್ಯಾಟಡ್ ಪಾರ್ಕಿಂಗ್ ಗ್ಯಾರೇಜ್ ಗೆ ತೆರಳಿ ಅಲ್ಲಿರುವ ಟ್ರಾಫಿಕ್ ಸಿಗ್ನಲ್ ನೋಡಿದರೆ ಸಾಕು. ಒಂದು ವೇಳೆ ಗ್ರೀನ್ ಬೆಳಕು ಉರಿಯುತ್ತಿದ್ದಲ್ಲಿ ನಿಮ್ಮ ಕಾರು ಅಲ್ಲಿ ನಿಲುಗಡೆ ಮಾಡಲು ಮುಕ್ತವಾಗಿದೆ ಎಂಬುದಾಗಿದೆ.

ಬಳಿಕ ನೀವು ನೇರವಾಗಿ ಗೇಟ್ ನೊಳಗೆ ತೆರಳಿ ನಿರ್ದಿಷ್ಟ ಜಾಗದಲ್ಲಿ ವಾಹನ ನಿಲ್ಲಿಸಬೇಕಾಗುತ್ತದೆ. ಅಲ್ಲಿ ಕೊಟ್ಟಿರುವ ಬಹುವಿಧದ ಆಟೋಮ್ಯಾಟಿಕ್ ಸೆನ್ಸಾರುಗಳು ಕಾರು ಸರಿಯಾದ ಜಾಗದಲ್ಲಿ ನಿಲುಗಡೆಯಾಗಿದೆಯೇ ಎಂಬುದನ್ನು ಖಾತ್ರಿಪಡಿಸಲಿದೆ.

ಕಾರನ್ನು ಲಾಕ್ ಮಾಡಿ ಅಲ್ಲಿಂದ ಹೊರಬಂದು ಎಟಿಎಂ ಮಿಷನ್ ಮಾದರಿಯಲ್ಲಿರುವ ಹಣ ಪಾವತಿ ಯಂತ್ರದಲ್ಲಿ ಪಾರ್ಕಿಂಗ್ ವ್ಯಾಲೆಟ್ ಉಜ್ಜಿದರಾಯಿತು. ನಿಮ್ಮ ಕೆಲಸ ಇಲ್ಲಿಗೆ ಮುಗಿಯಿತು. ಉಳಿದ ಕೆಲಸವನ್ನು ಆಟೋಮ್ಯಾಟಿಕ್ ಪಾರ್ಕಿಂಗ್ ಸಿಸ್ಟಂ ನೋಡಿಕೊಳ್ಳುತ್ತದೆ (ಕೊನೆಯಲ್ಲಿ ಕೊಟ್ಟಿರುವ ವೀಡಿಯೊ ವೀಕ್ಷಿಸಲು ಮರೆಯದಿರಿ).

ಇನ್ನು ಕಾರು ಹೊರತೆಗೆಯುವುದು ಸಹ ತುಂಬಾನೇ ಸರಳವಾಗಿದ್ದು, ವೇಟಿಂಗ್ ಜಾಗದಲ್ಲಿ ಮಗದೊಮ್ಮೆ ಪಾರ್ಕಿಂಗ್ ಕಾರ್ಡ್ ನೆರವಿನಿಂದ ಹಣ ಪಾವತಿಸಿದರಾಯಿತು. ಅದರಲ್ಲಿ ಮೂಡಿ ಬರುವ ಪರದೆಯಲ್ಲಿ ಪಾರ್ಕಿಂಗ್ ಸಯಮದ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ನೀಡಲಿದ್ದು, ನಿಮ್ಮ ಕಾರನ್ನು ನಿರ್ಗಮನ ಪ್ರದೇಶಕ್ಕೆ ಸುರಕ್ಷಿತವಾಗಿ ತಲುಪಿಸಲಿದೆ.

ಆಯಾಸರಹಿತ ವಾಹನ ನಿಲುಗಡೆ ಇದರ ಹಿಂದಿರುವ ಪ್ರಮುಖ ಉದ್ದೇಶವಾಗಿದೆ. ಅಲ್ಲದೆ ಕನಿಷ್ಠ ಜಾಗದಲ್ಲಿ ಗರಿಷ್ಠ ಬಳಕೆಯನ್ನು ಗುರಿ ಮಾಡಲಾಗಿದೆ. ಇವೆಲ್ಲದಕ್ಕೂ ಮಿಗಿಲಾಗಿ ಶುಚಿಯಾದ ಹಾಗೂ ಹೆಚ್ಚು ಪರಿಸರ-ಸ್ನೇಹಿ ಎನಿಸಿಕೊಂಡಿದೆ.

ಈಗ ಭಾರತದಲ್ಲೂ ಅಲ್ಲದಿದ್ದಲ್ಲಿ ನಮ್ಮ ಬೆಂಗಳೂರಿನಲ್ಲಿ ಇಂತಹದೊಂದು ತಂತ್ರಜ್ಞಾನ ಅವಿಷ್ಕಾರವಾದರೆ ಹೇಗಿರಬಹುದು? ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








