ಬೋಯಿಂಗ್ ಪಾಲಾಗಲಿದೆ ವಿಶ್ವದ ಅತಿ ದೊಡ್ಡ ಜೆಟ್ ಎಂಜಿನ್
ಇದೇ ಮೊದಲ ಬಾರಿಗೆ ವಿಶ್ವದ ಅತಿ ದೊಡ್ಡ ಜೆಟ್ ಎಂಜಿನ್ ಪ್ರಯೋಗವನ್ನು ಆರಂಭಿಸಲಾಗಿದೆ. ಪ್ರತಿಷ್ಠಿತ ಬೋಯಿಂಗ್ ಸಂಸ್ಥೆಯ ಬೇಡಿಕೆಯ ಪ್ರಕಾರ ಹೆಸರಾಂತ ಜನರಲ್ ಎಲೆಕ್ಟ್ರಿಕ್ ಎವಿಯೇಷನ್ ಸಂಸ್ಥೆಯು 'ಜಿಇ9ಎಕ್ಸ್' ಎಂಬ ವಿಶ್ವದ ಅತಿ ದೊಡ್ಡ ವಾಣಿಜ್ಯ ವಿಮಾನದ ಬೃಹತ್ ಜೆಟ್ ಎಂಜಿನ್ ಪರೀಕ್ಷೆಯನ್ನು ಆರಂಭಿಸಿದೆ.
ತಂತ್ರಜ್ಞಾನದ ನೆರವಿನಿಂದ ಸಂಪೂರ್ಣ ಚಾಲನಾ ವ್ಯವಸ್ಥೆಯೊಂದಿಗೆ ವಿಶ್ವದ ಅತಿ ದೊಡ್ಡ ಜೆಟ್ ಎಂಜಿನ್ ಪ್ರಯೋಗವನ್ನು ನಡೆಸಲಾಗಿದೆ. ಇದನ್ನು ನಿಕಟ ಭವಿಷ್ಯದಲ್ಲಿ ಬೋಯಿಂಗ್ 777ಎಕ್ಸ್ 'ಮಿನಿ ಜಂಬೋ' ವಿಮಾನಗಳಲ್ಲಿ ಬಳಕೆ ಮಾಡಲಾಗುವುದು.

3.4 ಮೀಟರ್ ವ್ಯಾಸದ ಅತಿ ದೊಡ್ಡ ಫ್ರಂಟ್ ಫ್ಯಾನ್ ಗಳನ್ನು ಹೊಂದಿರುವ ಜೆಟ್ ಎಂಜಿನ್ ನಲ್ಲಿ ನಾಲ್ಕನೇ ತಲೆಮಾರಿನ 16 ಕಾರ್ಬನ್ ಫೈಬರ್ ಕಾಂಪೊಸಿಟ್ ಫ್ಯಾನ್ ಬ್ಲೇಡ್ ಗಳನ್ನು ಬಳಕೆ ಮಾಡಲಾಗಿದೆ.

ಆಧುನಿಕ ಕಡಿಮೆ ಒತ್ತಡದ ಟರ್ಬೈನ್ ಮೊಡ್ಯುಲ್ ಗಳಾದ ತ್ರಿಡಿ ಪ್ರಿಂಟಡ್ ಇಂಧನ ನಳಿಕೆಗಳು, ಆಕ್ಸೆಸರಿ ಡ್ರೈವ್ ಟ್ರೈನ್ ಕಿಟ್, ಇನ್ಲೆಟ್ ಗೇರ್ ಬಾಕ್ಸ್, ಟ್ರಾನ್ಸ್‌ಫರ್ ಗೇರ್ ಬಾಕ್ಸ್ ಮತ್ತು ಆಕ್ಸೆಸರಿ ಗೇರ್ ಬಾಕ್ಸ್ ಗಳನ್ನು ಪಡೆದಿದೆ.

ಜಿಇ9ಎಕ್ಸ್ ಎಂಜಿನ್ ಪಾಲಿಗೆ 2017-2018ನೇ ಸಾಲು ಅತಿ ಮಹತ್ವಪೂರ್ಣವೆನಿಸಲಿದ್ದು, 71.8 ಮೀಟರ್ ಅಗಲವಾದ ರೆಕ್ಕೆಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ವಾಣಿಜ್ಯ ವಿಮಾನ ಬೋಯಿಂಗ್ 777ಎಕ್ಸ್ ವಿಮಾನದಲ್ಲಿ ಟೆಸ್ಟಿಂಗ್ ಪ್ರಕ್ರಿಯೆ ನಡೆಯಲಿದೆ.

ಓಹಿಯೋದಲ್ಲಿರುವ ಜಿಇ ಘಟಕದಲ್ಲಿ ಜಿಇ9ಎಕ್ಸ್ ಮೊದಲ ಮಾದರಿಯ ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿ ನೆರವೇರಿದೆ. ಬೃಹತ್ತಾದ ಎರಡು ಕಾಂಕ್ರೀಟ್ ಬ್ಲಾಕ್ ಗಳ ಮಧ್ಯದಲ್ಲಿ ಇದರ ಪರೀಕ್ಷೆಯನ್ನು ನಡೆಸಲಾಗಿತ್ತು.

ಮಿನಿ ಜಂಬೋ ವಿಮಾನವೆಂದೇ ಖ್ಯಾತಿ ಪಡೆದಿರುವ 406 ಪ್ರಯಾಣಿಕರನ್ನು ಹೊತ್ತೊಯ್ಯಲು ಸಾಮರ್ಥ್ಯದ ಬೋಯಿಂಗ್ 777 ಎಕ್ಸ್ ವಾಣಿಜ್ಯ ವಿಮಾನದಲ್ಲಿ ಜಿಇ9ಎಕ್ಸ್ ಎಂಜಿನ್ ಗಳನ್ನು ಆಳವಡಿಸಲಾಗುವುದು.

ಜಿಇ9ಎಕ್ಸ್ ಎಂಜಿನ್ 1,00,000 ಪೌಂಡ್ ಗಳಷ್ಟು ಒತ್ತಡ (Thrust) ಉತ್ಪಾದಿಸುವಷ್ಟು ಸಮರ್ಥವಾಗಿದೆ. ಇಂತಹ ಒಟ್ಟು 700ರಷ್ಟು ಎಂಜಿನ್ ಗಳ ನಿರ್ಮಾಣಕ್ಕೆ ಆದೇಶ ಲಭಿಸಿದೆ.

ಸೆರಮಿಕ್ ಮ್ಯಾಟ್ರಿಕ್ಸ್ ಕಾಂಪೊಸಿಟ್ (ಸಿಎಂಸಿ) ಗಳೆಂಬ ಹಗುರ ಭಾರದ ಶಾಖ ನಿರೋಧಕ ವಸ್ತುಗಳಿಂದ ಜಿಇ9ಎಕ್ಸ್ ವಿಮಾನ ಎಂಜಿನ್ ನಿರ್ಮಿಸಲಾಗಿದೆ. ಇದು 2400 ಫ್ಯಾರನ್ಹೀಟ್ ತಾಪಮಾನ ಉತ್ಪಾದಿಸುವಷ್ಟು ಸಮರ್ಥವಾಗಿದೆ.

ಸದ್ಯ ವಿಶ್ವದ ಅತಿ ದೊಡ್ಡ ಟರ್ಬೊ ಫ್ಯಾನ್ ಜೆಟ್ ಎಂಜಿನ್ ಹೊಂದಿರುವ ಖ್ಯಾತಿ ರೋಲ್ಸ್ ರಾಯ್ಸ್ ಸಂಸ್ಥೆಗಿದೆ. ನಿಸ್ಸಂಶಯವಾಗಿಯೂ ಜನರಲ್ ಎಲೆಕ್ಟ್ರಿಕ್ ಇದಕ್ಕೆ ಪ್ರತಿಸ್ಪರ್ಧೆಯಾಗಲಿದೆ.


Click it and Unblock the Notifications








