ತಾಕತ್ತಿದ್ದರೆ ಚೀನಾದ ಗಾಜಿನ ಸೇತುವೆ ಒಡೆಯಿರಿ ನೋಡೋಣ?
ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವ ಜಗತ್ತಿನ ಅತಿ ವಿಸ್ಮಯಕಾರಿ, ಆಶ್ಚರ್ಯಕರ ಚೀನಾ ಗಾಜಿನ ಸೇತುವೆ ಜಗತ್ತಿನ ಅತ್ಯಂತ ರೋಚಕ ಸೇತುವೆಗಳಲ್ಲಿ ಒಂದೆನಿಸಿಕೊಂಡಿದೆ. ಚೀನಾದ ಝಾಂಗ್ಜಿಯಾಂಜಿ ರಾಷ್ಟ್ರೀಯ ಉದ್ಯಾನವನದ ಮೇಲ್ಗಡೆಯಲ್ಲಿ ಎರಡು ಬೃಹತ್ ಪರ್ವತ ಶಿಖರಗಳ ನಡುವೆ ಇದನ್ನು ಕಟ್ಟಲಾಗಿದೆ.
ಗಾಜಿನ ಸೇತುವೆ ಎಂದ ಮೇಲೆ ಸೇತುವೆಯ ಭದ್ರತೆಯ ಬಗ್ಗೆ ಗೊಂದಲ ಮೂಡುವುದು ಸಹಜ. ಆದರೆ ತಮ್ಮ ಸೇತುವೆ ಎಷ್ಟೊಂದು ಭದ್ರ ಎಂಬುದನ್ನು ಸಾಬೀತುಪಡಿಸಲು ಅಲ್ಲಿನ ಆಡಳಿತ ವರ್ಗವು ವಿನೂತನ ಪ್ರಯೋಗವೊಂದನ್ನು ಮಾಡಿ ತೋರಿಸಿದೆ.

ವಿಶ್ವದ ಅತಿ ಉದ್ದ ಹಾಗೂ ಎತ್ತರದ ಗಾಜಿನ ಸೇತುವೆಯನ್ನು ಒಡೆಯುವುದಕ್ಕಾಗಿ ಪತ್ರಕರ್ತರನ್ನೇ ಕರೆಯಿಸಿಕೊಳ್ಳಲಾಗಿತ್ತು. ಅಲ್ಲದೆ ಅವರ ಕೈಗೆ ಗಾಜನ್ನು ಒಡೆಯುವ ಸಲುವಾಗಿ ಬೃಹತ್ತಾದ ಭಾರವಾದ ಸುತ್ತಿಗೆಯನ್ನು ಹಸ್ತಾಂತರಿಸಿದ್ದರು.

ಚೀನಾ ಗಾಜಿನ ಸೇತುವೆ ಭದ್ರತೆ ಬಗ್ಗೆ ಎದ್ದಿರುವ ಸಂಶಯವನ್ನು ನಿವಾರಿಸುವುದು ಪ್ರಮುಖ ಗುರಿಯಾಗಿತ್ತು. ಪತ್ರಕರ್ತ ಎಷ್ಟೇ ಬಲವಾಗಿ ಒಡೆಯಲು ಪ್ರಯತ್ನಸಿದರೂ ಗಾಜು ಒಡೆಯುತ್ತಿರಲಿಲ್ಲ.

ಚೀನಾದ ಹುನಾನ್ ಪ್ರಾಂತ್ಯದ ಝಾಂಗ್ಜಿಯಾಂಜಿ ಎಂಬ ಪ್ರದೇಶದಲ್ಲಿ ವಿಶ್ವದ ಅತಿ ದೊಡ್ಡ ಗಾಜಿನ ಸೇತುವೆಯಾಗಿರುವ ಝಾಂಗ್ಜಿಯಾಂಜಿ ಗ್ರಾಂಡ್ ಕ್ಯಾನಾನ್ ನೆಲೆಗೊಂಡಿದೆ.

ಸಮುದ್ರ ತಲದಿಂದ 900 ಅಡಿ ಮೇಲ್ಗಡೆಯಾಗಿ ಹಾದು ಹೋಗುವ ಪ್ರಸ್ತುತ ಸೇತುವೆ, ಜಗತ್ತಿನ ಅತಿ ಉದ್ದದ ಹಾಗೂ ಎತ್ತರದಲ್ಲಿರುವ ಗ್ಲಾಸ್ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

0.27 ಮೈಲು (1,410 ಅಡಿ) ಉದ್ದದ ಇಲ್ಲಿನ ಗಾಜಿನ ಸೇತುವೆಯಲ್ಲಿ ಏಕಕಾಲಕ್ಕೆ 800ರಷ್ಟು ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುವುದು.

ಗಾಜಿನ ನಿರ್ಮಾಣದಲ್ಲಿ ವಿಶೇಷ ರೀತಿಯ ಎಂಜಿನಿಯರಿಂಗ್ ತಂತ್ರಗಾರಿಕೆಯನ್ನು ಪಾಲಿಸಲಾಗಿದೆ. ಇದರಿಂದಾಗಿ ಇತರ ಸೇತುವೆಗಿಂತ ಗಾಜಿನ ಸೇತುವೆಯನ್ನು ಪ್ರತ್ಯೇಕಿಸುತ್ತದೆ.

ಗಾಜಿನ ಪಾರದರ್ಶಕತೆಯೇ ಸೇತುವೆಯ ಆಕರ್ಷಣೆಯಾಗಿದೆ. ಸೇತುವೆಯ ಮೇಲೆ ನಿಂತಾಗ ಸಿಗುವ ರೋಚಕತೆಯನ್ನು ವರ್ಣಿಸಲು ಅಸಾಧ್ಯ ಎಂದು ಪ್ರವಾಸಿಗರು ಅಭಿಪ್ರಾಯಪಡುತ್ತಾರೆ.

ಇಸ್ರೇಲ್ ವಾಸ್ತುಶಿಲ್ಪಿ ಹೈಮ್ ಡೋಟನ್ (Haim Dotan) ಎಂಬವರು 19 ಅಡಿ ಅಗಲದ ಈ ವಿಸ್ಮಯಕಾರಿ ಗಾಜಿನ ಸೇತುವೆಯ ಸೂತ್ರಧಾರಿ ಎನಿಸಿಕೊಂಡಿದ್ದಾರೆ.

ಪ್ರಕೃತಿ, ಸಾಮರಸ್ಯ, ಸಮತೋಲನದ ಸೌಂದರ್ಯಯುತವಾದ ಸ್ಕೈವಾಕ್ ವಿನೋದ ಸಂಚಾರಿಗಳಿಗೆ ಸ್ಮರಣೀಯ ನಿಮಿಷಗಳನ್ನು ಸನ್ಮಾನಿಸಲಿದೆ.

ಎರಡು ಬದಿಗಳಲ್ಲಿ ಸ್ಟೀಲ್ ಬೀಮ್ ಗಳನ್ನು ಹೊಂದಿರುವ ಸಸ್ಪೆನ್ಷನ್ ವ್ಯವಸ್ಥೆ, ಬದಿಯಲ್ಲಿ ಬೃಹತ್ತಾದ ಕೇಬಲ್ ಗಳನ್ನು ಲಗತ್ತಿಸಲಾಗಿದೆ. ಇದು ಬಲವಾಗಿ ಬೀಸುವ ಗಾಳಿ, ಭೂಕಂಪ ಹಾಗೂ ಹಿಮಪಾತಗಳನ್ನು ಎದುರಿಸುವಷ್ಟು ಸಮರ್ಥವಾಗಿದೆ.


Click it and Unblock the Notifications








