ಮೊದಲ ಬಾರಿಗೆ ವಿಶ್ವದ 3 ಬೃಹತ್ ವಿಹಾರ ನೌಕೆಗಳು ಒಗ್ಗಟ್ಟಾಗಿ ನೌಕಾಯಾನ!
ವಿಶ್ವದ ಮೂರು ಅತಿ ದೊಡ್ಡ ವಿಹಾರ ನೌಕೆಗಳು ಒಂದಾಗಿ ಸಂಚರಿಸುವ ಮೂಲಕ ಅಚ್ಚರಿ ಮೂಡಿಸಿದೆ.
ಇದೇ ಮೊದಲ ಬಾರಿಗೆ ವಿಶ್ವದ ಮೂರು ಬೃಹತ್ ವಿಹಾರ ನೌಕೆಗಳು ಒಗ್ಗಟ್ಟಾಗಿ ನೌಕಾಯಾನ ನಡೆಸಿರುವುದು ಸಾಗರಯಾನದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿ ಮಾಡಿದೆ. ಫ್ಲೋರಿಡಾದ ಫೋರ್ಟ್ ಲೌಡರ್ ಡೇಲ್ ನಲ್ಲಿ ಈ ಮೂರು ಹಡಗುಗಳು ಒಂದಾಗುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದ್ದವು.

ರಾಯಲ್ ಕೆರೆಬಿಯನ್ ಇಂಟರ್ ನ್ಯಾಷನಲ್‌ನ ಓಯಸೀಸ್ ಶ್ರೇಣಿಯ ಹಡಗುಗಳಾದ ಓಯಸೀಸ್ ಆಫ್ ಸೀಸ್, ಅಲ್ಯೂರ್ ಆಫ್ ದಿ ಸೀಸ್ ಮತ್ತು ಹಾರ್ಮನಿ ಆಫ್ ದಿ ಸೀಸ್ ವಿಹಾರ ನೌಕೆಗಳು ಒಂದಾಗಿ ಈಜಾಟ ನಡೆಸಿದ್ದವು.

2009ರಲ್ಲಿ ಸಾಗರಯಾನವನ್ನು ಆರಂಭಿಸಿರುವ ಓಯಸೀಸ್ ಆಫ್ ದಿ ಸೀಸ್ ಮತ್ತು 2010ರಲ್ಲಿ ಪ್ರಯಾಣ ಆರಂಭಿಸಿದ ಅಲ್ಯೂರ್ ಆಫ್ ದಿ ಸೀಸ್ ಇದುವರೆಗೆ ವಿಶ್ವದ ಅತಿ ದೊಡ್ಡ ವಿಹಾರ ನೌಕೆಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಆದರೆ ತನ್ನ ಸೋದರಿಯರನ್ನು ಹಿಂದಿಕ್ಕಿರುವ 1188 ಅಡಿ ಉದ್ದದ ಉದ್ದದ ಹಾರ್ಮನಿ ಆಫ್ ದಿ ಸೀಸ್ ವಿಶ್ವದ ಅತಿ ದೊಡ್ಡ ವಿಹಾರ ನೌಕೆಯೆಂಬ ಅಧಿಕೃತ ಪಟ್ಟವನ್ನು ಆಲಂಕರಿಸಿದೆ.

2.25 ಲಕ್ಷ ಟನ್ ಭಾರದ ಹಾರ್ಮನಿ ಆಫ್ ದಿ ಸೀಸ್ ಜಗತ್ತಿನ ಐಷಾರಾಮಿ ವಿಹಾರ ನೌಕೆಗಳಲ್ಲಿ ಒಂದಾಗಿದೆ.

ಈ ಎಲ್ಲ ಮೂರು ಹಡಗುಗಳು 2747ಕ್ಕೂ ಹೆಚ್ಚು ಸ್ಟೇಟ್ ರೂಂ ಗಳನ್ನು ಹೊಂದಿದ್ದು, 6700ರಿಂದ 7148 ಪ್ರವಾಸಿಗರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಪಡೆದಿದೆ.

ಫ್ರಾನ್ಸ್ ನಲ್ಲಿರುವ ವಿಶ್ವ ವಿಖ್ಯಾತ ಈಫಲ್ ಗೋಪರಗಿಂತಲೂ ದೊಡ್ಡದಾಗಿರುವ ಹಾರ್ಮನಿ ಆಫ್ ದಿ ಸೀಸ್ ಒಟ್ಟು 362 ಮೀಟರ್ ಗಳಷ್ಟು ಉದ್ದವನ್ನು ಹೊಂದಿದೆ. ಅಲ್ಲದೆ 16 ಡೆಕ್ ಸೌಲಭ್ಯಗಳು ಇದರಲ್ಲಿದೆ.

ವಿಶ್ವದ ಅತಿ ದೊಡ್ಡ ಹಡಗು ಹಾರ್ಮನಿ ಆಫ್ ದಿ ಸೀಸ್, ನಾಲ್ಕು ಫುಟ್ಬಾಲ್ ಮೈದಾನಕ್ಕಿಂತಲೂ ದೊಡ್ಡದಾಗಿದೆ. ಹಾರ್ಮನಿ ಆಫ್ ದಿ ಸೀಸ್ ನಿರ್ಮಾಣಕ್ಕೆ ಬರೋಬ್ಬರಿ 77,099,776,000 ರುಪಾಯಿಗಳನ್ನು (£800m) ವ್ಯಯ ಮಾಡಲಾಗಿದೆ.

ಹಡಗಿನೊಳಗೆ ಎಲ್ಲ ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದ್ದು, ಬೃಹತ್ತಾದ ಲಿವಿಂಗ್ ಪ್ರದೇಶ ಜೊತೆಗೆ ಕೃತಕ ಬಾಲ್ಕನಿ ವ್ಯವಸ್ಥೆಯೂ ಇರುತ್ತದೆ. ಇಂತಹ ವೈಶಿಷ್ಟ್ಯಗಳು ಕ್ವಾಟಂ ದರ್ಜೆಯ ವಿಹಾರ ನೌಕೆಗಳಲ್ಲಿ ಮಾತ್ರ ಕಾಣಸಿಗುತ್ತದೆ.

ಪರಿಸರ ಸ್ನೇಹಿ ಎನಿಸಿಕೊಳ್ಳಲಿರುವ ಹಾರ್ಮನಿ ಆಫ್ ದಿ ಸೀಸ್ ಹಡಗಿನಲ್ಲಿ 10,500ರಷ್ಟು ಸಸ್ಯಗಳನ್ನು ಮತ್ತು 52 ಮರಗಳನ್ನು ನೆಡಲಾಗಿದೆ.

23 ಈಜುಕೊಳ ಮತ್ತು ಇತರ ಜಲಾವೃತ ಆಕರ್ಷಣೆಗಳಿಗಾಗಿ ಐದು ಮಿಲಿಯನ್ ಪೌಂಡುಗಳಷ್ಟು ನೀರನ್ನು ಬಳಕೆ ಮಾಡಲಾಗಿದೆ.

ಫ್ಲೊರೈಡರ್, ಸ್ಪೋರ್ಟ್ಸ್ ಕೋರ್ಟ್, ಸೂಟ್ಸ್, ಯೂತ್ ಝೋನ್, ಪೂಲ್ ಆಂಡ್ ವಾಟರ್ ಪಾರ್ಕ್, ಅಕ್ವಾಥಿಯೇಟರ್, ರೆಸ್ಟೋರೆಂಟ್ ಆಂಡ್ ಬಾರ್, ಸೆಂಟ್ರಲ್ ಪಾರ್ಕ್, ರಾಯಲ್ ಪ್ರೊಮಿನೆಡ್, ಮೈನ್ ಥಿಯೇಟರ್ ಮತ್ತು ಜಿಮ್ ಆಂಡ್ ಸ್ಪಾ ಸೌಲಭ್ಯಗಳು ಇದರಲ್ಲಿರಲಿದೆ.

ಆತಿಥಿಗಳಿಗಾಗಿ ಜಿಪಿಎಸ್ ಉಪಕರಣ, ತ್ರಿಡಿ ಮಂದಿರ, ಅಕ್ವಾ ಥಿಯೇಟರ್, ಬೋರ್ಡ್ ವಾಲ್ಕ್ ಬ್ರೋಡ್ ವೇ ಶೋ, ಡ್ರೀಮ್ ವರ್ಕ್ಸ್ ಎಕ್ಸ್ ಪೀರಿಯನ್ಸ್, ಬೂಟಿಕ್ ಶಾಪ್, ರೋಬೋಟ್ ಪರಿಚಾರಕರು, ಅಡ್ವೆಂಚರ್ ಓಷಿಯನ್, ವೈದಕೀಯ ನೆರವು ಇತ್ಯಾದಿ ಸೇವೆಗಳು ದೊರಕಲಿದೆ.

ತನ್ನ ಸೋದರಿ ಅಲ್ಯೂರ್ ಆಫ್ ದಿ ಸೀಸ್ ಪ್ರವೇಶದ ವರೆಗೂ ಜಗತ್ತಿನ ಅತಿದೊಡ್ಡ ವಿಹಾರ ನೌಕೆಯೆಂಬ ಖ್ಯಾತಿಗೆ ಪಾತ್ರವಾಗಿದ್ದ ಓಯಸೀಸ್ ಆಫ್ ದಿ ಸೀಸ್ 361.6 ಮೀಟರ್ ಉದ್ದ, 72 ಮೀಟರ್ ಎತ್ತರ ಮತ್ತು 22.55 ಮೀಟರ್ ಆಳವನ್ನು ಹೊಂದಿದೆ.

ಓಯಸೀಸ್ ಆಫ್ ದಿ ಸೀಸ್ ಮೇಲಂತಸ್ತು ಕೊಠಡಿಗಳನ್ನು ಹೊಂದಿದ್ದು, ಬಾಲ್ಕನಿಯಲ್ಲಿ ಕುಳಿತುಕೊಂಡು ವಿಶಾಲವಾದ ಸಮುದ್ರದ ವಿಹಾರ ಅನುಭವ ಪಡೆದುಕೊಳ್ಳಬಹುದಾಗಿದೆ.

ಪ್ರಸ್ತುತ ಹಡಗಿನಲ್ಲಿ ಸಾಹಸ ಮಾಡಲಿಚ್ಛಿಸುವವರಿಗಾಗಿ ಜಿಪ್ ಲೈನ್ ವ್ಯವಸ್ಥೆಯಿದೆ. ಅದೇ ರೀತಿ ಕ್ಯಾಸಿನೋ, ಗಾಲ್ಫ್ ಮೈದಾನ, ಅನೇಕ ರಾತ್ರಿ ಕ್ಲಬ್‌ಗಳು, ಹಲವಾರು ಬಾರ್‌ಗಳು, ಕರೋಕೆ ಕ್ಲಬ್, ಕಾಮೆಡಿ ಕ್ಲಬ್, ಐದು ಈಜುಕೊಳ, ವಾಲಿಬಾಲ್ ಮತ್ತು ಬಾಸ್ಕೆಟ್ ಬಾಲ್ ಅಂಗಣಗಳಿವೆ.

ಇನ್ನು ಮಕ್ಕಳ ಮನರಂಜನೆಗಾಗಿ ಥೀಮ್ ಪಾರ್ಕ್‌ಗಳ ವ್ಯವಸ್ಥೆಯಿದೆ. ಅಷ್ಟೇ ಅಲ್ಲದೆ ವಿಶಾಲವಾದ ಹಡಗಿನ ಆಲಂಕಾರವನ್ನು ಪ್ರಸಿದ್ಧ ಕ್ಲಾರಿಸ್ಸಾ ಪ್ಯಾರಿಶ್ ಮಾಡಿದೆ.

ನೇಬರ್‌ವುಡ್ ಎಂದು ಅರಿಯಲ್ಪಡುವ ಏಳು ಥೀಮ್ ಪ್ರದೇಶಗಳಲ್ಲಿ ಅಥ್ಲೆಟಿಕ್ ಮತ್ತು ಮನರಂಜನಾ ಚಟುವಟಿಕೆಗಳು ನಡೆಯುತ್ತದೆ.

7 ಥೀಮ್ ನೇಬರ್‌ವುಡ್ ಇಂತಿದೆ
1. ಸೆಂಟ್ರಲ್ ಪಾರ್ಕ್ - ಬೂಟಿಕ್, ರೆಸ್ಟೋರೆಂಟ್, ಬಾರ್,
2. ಪೂಲ್ ಮತ್ತು ಸ್ಪೋರ್ಟ್ಸ್ - ಬೀಚ್ ಪೂಲ್ ಮುಂತಾದವುಗಳು.
3. ಸೀ ಸ್ಪಾ - ಹದಿಹರೆಯದವರಿಗೆ ಸ್ಪಾ, ಜಿಮ್ ಇನ್ನಿತರ ಸೌಲಭ್ಯ.
4. ಬೋರ್ಡ್‌ವಾಕ್ - ರೆಸ್ಟೋರಂಟ್, ಬಾರ್, ಶಾಪ್, ರಾಕ್ ಕ್ಲೈಂಬಿಂಗ್ ವಾಲ್, ಟ್ಯಾಟೂ ಪಾರ್ಲರ್, ಅಕ್ವಾ ಥಿಯೇಟರ್, ತಾಜಾ ನೀರು ಕೊಳ.
5. ರಾಯಲ್ ವಾಯುವಿಹಾರ - ರೆಸ್ಟೋರೆಂಟ್, ಶಾಪ್
6. ಯೂತ್ ಜೋನ್ - ವಿಜ್ಞಾನ ಲ್ಯಾಬ್, ಕಂಪ್ಯೂಟರ್ ಗೇಮಿಂಗ್.
7. ಮನರಂಜನಾ ಪ್ರದೇಶ.

6,390 ಪ್ರಯಾಣಿಕರನ್ನು ಹೊತ್ತೊಯ್ಯಲು ಸಾಮರ್ಥ್ಯವುಳ್ಳ ಅಲ್ಯೂರ್ ಆಫ್ ದಿ ಸೀಸ್ 2,25,282 ಟನ್ ಭಾರವನ್ನು ಹೊಂದಿದೆ. ಹಾಗೆಯೇ ಗರಿಷ್ಠ 41.9 ಕೀ.ಮೀ. (22.6 ನಾಟ್) ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ.

ಇದರ ಆಂತರಿಕ ಭಾಗಗಳನ್ನು ಅತ್ಯಂತ ಗುಣಮಟ್ಟದ ಮರದ ಕೆತ್ತನೆಯಿಂದ ಆಲಂಕರಿಸಲಾಗಿದೆ. ಇಲ್ಲದೆ ಇದೇ ಮೊದಲ ಬಾರಿಗೆ ಸ್ಟಾರ್‌ಬಕ್ಸ್ ಈ ಹಡಗಿನಲ್ಲಿ ಆಳವಡಿಸಲಾಗಿದೆ.

ನೀವೊಮ್ಮೆ ಈ ಹಡಗಿಗೆ ಪ್ರವೇಶಿಸಿದರೆ ಅನೇಕ ವಿನೋದ ಚಟುವಟಿಕೆಗಳು ನಿಮ್ಮನ್ನು ಹರಸಿಕೊಂಡು ಬರಲಿದೆ. ಇದರಲ್ಲಿ ಸ್ಕೇಟಿಂಗ್, ನೈಟ್ ಕ್ಲಬ್, ಡ್ಯಾನ್ಸ್ ಕ್ಲಾಸ್, ವೈನ್ ಪ್ಯಾಲೇಸ್ ಮುಂತಾದ ಸೌಲಭ್ಯಗಳು ಲಭಿಸಲಿದೆ.

ಇವೆಲ್ಲದರ ಹೊರತಾಗಿ ರೋಕ್ ಕ್ಲೈಬಿಂಗ್ ವಾಲ್ ಕ್ರೀಡೆಯು ಸಾಹಸಿಗರನ್ನು ಕೈಬೀಸಿ ಕರೆಯುತ್ತದೆ. ಇದು ಈ ಹಡಗನ್ನು ಇನ್ನಷ್ಟು ವಿಶಿಷ್ಟವಾಗಿಸಿದೆ.

ಹಡಗನ್ನು ಸಂಪೂರ್ಣ ಹಚ್ಚ ಹಸಿರಾಗಿಡುವ ಪ್ರಯತ್ನ ಕೂಡಾ ಮಾಡಲಾಗಿದ್ದು, ಸೆಂಟ್ರಲ್ ಪಾರ್ಕ್ ಗಿಡ ಮರಗಳಿಂದ ಶೋಭಿಸುತ್ತಿದೆ. ಇಲ್ಲಿ ರೆಸ್ಟೋರೆಂಟ್, ಶಾಪ್‌ಗಳ ಸುತ್ತಲೂ 12,000 ಸಸಿ ಹಾಗೂ 60 ಮರಗಳನ್ನು ನೆಡಲಾಗಿದೆ.


Click it and Unblock the Notifications








