ಶ್..! ದೇಶದ ರಸ್ತೆಗೆ ಬರಲಿವೆ ಲಕ್ಷುರಿ ಬೈಕ್ ವಿಕ್ಟರಿ ಕ್ರೂಷರ್ರ್ಸ್
ಅಮೆರಿಕ ಮೂಲದ ಬೈಕ್ ತಯಾರಿಕಾ ಕಂಪನಿ "ವಿಕ್ಟರಿ ಮೋಟರ್ ಸೈಕಲ್ಸ್" ದೇಶದಲ್ಲಿ ಮುಂದಿನ ವರ್ಷ ಪ್ರೀಮಿಯಂ ಬೈಕ್ ಗಳನ್ನು ಹೊರತರಲು ಉದ್ದೇಶಿಸಿದೆ. ವಿಕ್ಟರಿ ಕಂಪನಿಯು ಐಷಾರಾಮಿ ಟೂರಿಂಗ್ ಬೈಕ್, ಕ್ಲಾಸಿಕ್ ವಿನ್ಯಾಸದ ಬೈಕ್ ಮತ್ತು ಶಕ್ತಿಶಾಲಿ ಕ್ರೂಷರ್ ಸೇರಿದಂತೆ ಇತರ ಬೈಕ್ ಗಳನ್ನು ತಯಾರಿಸುತ್ತಿದೆ.
ದೇಶದ ವಾಹನ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಪ್ರತಿಸ್ಪರ್ಧಿ ಹರ್ಲೆ ಡೇವಿಡ್ ಸನ್ ಗೆಲುವಿನಿಂದ ಸ್ಪೂರ್ತಿ ಪಡೆದ ವಿಕ್ಟರಿ ಭಾರತದ ರಸ್ತೆಗೆ ಪ್ರವೇಶಿಸಲು ಮನಸ್ಸು ಮಾಡಿದೆ. ಈ ವರ್ಷದ ಆರಂಭದಲ್ಲಿ 12 ಹೊಸ ಹರ್ಲೆ ಡೇವಿಡ್ ಸನ್ ಬೈಕ್ ಗಳು ಇಲ್ಲಿನ ರಸ್ತೆಗಿಳಿದ್ದಿದ್ದು, ಇಲ್ಲಿನ ಗ್ರಾಹಕರಿಗಂದ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದರಿಂದ ಉತ್ತೇಜಿತವಾದ ವಿಕ್ಟರಿಯು ದೇಶದ ಮಾರುಕಟ್ಟೆಗೆ ಪ್ರವೇಶಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಮುಂದಿನ ವರ್ಷ ನವದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ವಿಕ್ಟರಿ ಮೋಟರ್ ಸೈಕಲ್ ತನ್ನ ಬೈಕ್ ಗಳನ್ನು ಸರದಿ ಸಾಲಿನಲ್ಲಿ ನಿಲ್ಲಿಸುವ ನಿರೀಕ್ಷೆಯಿದೆ. ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಕಂಪನಿಯು ದೇಶದಲ್ಲಿ ತನ್ನ ಬೈಕ್ ಅನಾವರಣ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿ ಘಟಕ ನಿರ್ಮಿಸುವ ವೆಚ್ಚ ಉಳಿಸಲು ಮತ್ತು ಮಾರುಕಟ್ಟೆಯ ಪ್ರತಿಕ್ರಿಯೆ ಗಮನಿಸುವ ಉದ್ದೇಶದಿಂದ ಕಂಪನಿ ಆರಂಭಿಕವಾಗಿ ಬೈಕ್ ಗಳನ್ನು ಇಲ್ಲಿಗೆ ರಫ್ತು ಮಾಡಲಿದೆ.
ಹರ್ಲೆ ಡೇವಿಡ್ ಸನ್ ತನ್ನ ಬೈಕ್ ದರವನ್ನು ಕಮ್ಮಿ ಮಾಡಿದೆ. ಅಂದ್ರೆ ಸುಮಾರು 7.54 ಲಕ್ಷ ರೂ.ನಷ್ಟಿದ್ದ ದರವನ್ನು 5.5 ಲಕ್ಷ ರೂ.ಗೆ ಇಳಿಕೆ ಮಾಡಿದೆ. ಅಮೆರಿಕ ಮತ್ತು ಬ್ರೆಝಿಲ್ ನಂತರದ ಮೂರನೇ ಘಟಕವನ್ನು ಕಂಪನಿ ಹರ್ಯಾಣದಲ್ಲಿ ಸ್ಥಾಪಿಸಿದೆ. ಅಮೆರಿಕದಲ್ಲಿ ವಿಕ್ಟರಿ ಬೈಕ್ ದರಗಳು 12,499 ಡಾಲರ್(ಸುಮಾರು 5.69 ಲಕ್ಷ ರೂ.)ನಿಂದ 27,994 ಡಾಲರ್ (12.73 ಲಕ್ಷ ರೂ.)ವರೆಗಿದೆ.
ಸ್ಥಳೀಯ ವಾಹನ ಕಂಪನಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತ ಸರಕಾರ ಆಮದು ಸುಂಕ ಇತ್ಯಾದಿಗಳನ್ನು ಹೆಚ್ಚು ಮಾಡುತ್ತಿದೆ. ಇದರಿಂದಾಗಿ ವಿದೇಶಿ ಬೈಕ್ ದರಗಳು ಭಾರತದಲ್ಲಿ ಹೆಚ್ಚು ದುಬಾರಿಯಾಗುತ್ತಿದೆ ಎನ್ನಲಾಗಿದೆ. ಏತನ್ಮಧ್ಯೆ ಕವಾಸಕಿ, ಕೆಟಿಎಂ ಪವರ್ ಸ್ಪೋರ್ಟ್ಸ್ ಎಜಿ, ಹೋಂಡಾ ಮೋಟರ್ ಕಂಪನಿ, ಹರ್ಲೆ ಡೇವಿಡ್ ಸನ್, ಸುಜುಕಿ ಮೋಟರ್ ಕಾರ್ಪೊರೇಷನ್ ಮುಂತಾದ ಜಾಗತಿಕ ವಾಹನ ತಯಾರಿಕಾ ಕಂಪನಿಗಳು ಭಾರತದಲ್ಲಿ ಅಸೆಂಬ್ಲಿ ಘಟಕಗಳನ್ನು ತೆರೆಯಲು ಹೆಚ್ಚು ಆಸಕ್ತವಾಗಿವೆ. ಕೆಲವು ಕಂಪನಿಗಳು ಈಗಾಗಲೇ ಇಂತಹ ಘಟಕಗಳನ್ನು ತೆರೆದಿವೆ.
ದೇಶದಲ್ಲಿ ಲಕ್ಷುರಿ ಬೈಕ್ ಸೆಗ್ಮೆಂಟ್ ವರ್ಷಕ್ಕೆ ಸುಮಾರು 2 ಸಾವಿರ ಯೂನಿಟ್ ಗಳಷ್ಟು ಮಾರಾಟ ಕಾಣುವ ನಿರೀಕ್ಷೆಯಿದೆ. ಇತ್ತೀಚೆಗೆ ಇಟಲಿಯ ಡುಕಾಟಿ ಮತ್ತು ಅಪ್ರಿಲಿಯಾ, ಥೈವಾನ್ ನ ಹ್ಯೋಸಂಗ್ ದೇಶದಲ್ಲಿ ಬೈಕ್ ಬಿಡುಗಡೆ ಮಾಡಿದ್ದವು. ಜರ್ಮನಿಯ ಬಿಎಂಡಬ್ಲ್ಯು ಮತ್ತು ಇಂಗ್ಲೆಂಡ್ ನ ಟ್ರಿಯೂಂಪ್ ದೇಶದಲ್ಲಿ ತಮ್ಮ ಉತ್ಪನ್ನಗಳನ್ನು ಹೊರತರಲು ಸೂಕ್ತ ಸಮಯಕ್ಕಾಗಿ ಕಾಯುತ್ತಿವೆ.


Click it and Unblock the Notifications









