ದಿನದ ಬೈಕ್: ಯುವಕರ ಮೆಚ್ಚಿನ ಹೀರೊ ಹೋಂಡಾ ಹಂಕ್

ಮುಖ್ಯವಾಗಿ ಯುವಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ತಿಂಗಳ ಹಿಂದೆ ಪರಿಷ್ಕೃತ ಹಂಕ್ ಆವೃತ್ತಿ ರಸ್ತೆಗಿಳಿದಿತ್ತು. ತನ್ನ ಲುಕ್ ನಿಂದ ಹೆಚ್ಚಿನವರ ಮೆಚ್ಚುಗೆ ಪಡೆದ ಹಂಕ್ ಮತ್ತಷ್ಟು ಸ್ಮಾರ್ಟಾಗಿತ್ತು. ಕಂಪನಿ ತನ್ನಲ್ಲಿರುವ ಎಲ್ಲ ಬೈಕ್ ಗಳನ್ನು ಆಗಾಗ ಪರಿಷ್ಕರಿಸುತ್ತಲೇ ಇರುತ್ತದೆ. ಹಬ್ಬದ ಸೀಸನ್ ಗೆ, ವಿಶೇಷ ದಿನಗಳಲ್ಲಿ ಒಂದಿಷ್ಟು ಸ್ಟಿಕರ್ ಬದಲಾಯಿಸಿ ಮಾರುಕಟ್ಟೆಗೆ ಬಿಡುತ್ತಿತ್ತು. ಆದರೆ ಹಂಕ್ ಗೆ ಮಾತ್ರ ಒಂದಿಷ್ಟು ಸ್ನಾಯು ಶಕ್ತಿಯನ್ನು ಜಾಸ್ತಿ ಮಾಡಿತ್ತು. ಜೊತೆಗೆ ಹಿಂದಿನ ಚಕ್ರಕ್ಕೂ ಡಿಸ್ಕ್ ಬ್ರೇಕ್ ಹಾಕಿತ್ತು. ಉಳಿದಂತೆ ಡಿಜಿಟಲ್ ಕನ್ಸೊಲ್, ಹಿಂಬದಿಗೆ ಎಲ್ ಇಡಿ ಲೈಟ್ ಗಳು ಎಲ್ಲವೂ ಇದ್ದವು.
ಹಂಕ್ ಅಂದ್ರೆ ಕಂಪನಿಯ ಸಿಬಿಝಡ್ ಎಕ್ಸ್ ಟ್ರೀಮ್ ನ ಸಹೋದರನಂತೆ. ಅದೇ ಎಂಜಿನ್ ಅಳವಡಿಸಲಾಗಿದ್ದು ಹೆಚ್ಚಿನ ಫೀಚರ್ ಗಳು ಕೂಡ ಸಿಬಿಝಡ್ ನ ಪಡಿಯಚ್ಚು. ಆದರೆ ಈ 150 ಸಿಸಿ ಬೈಕ್ ನ ಆಕರ್ಷಕ ವಿನ್ಯಾಸ ಮತ್ತು ಶಕ್ತಿಶಾಲಿ ಎಂಜಿನ್ ಕುರಿತು ಎರಡು ಮಾತಿಲ್ಲ. ಇದೇ ಕಾರಣಕ್ಕೆ ಹೋಂಡಾ ಬೈಕ್ ಗಳು ಹೆಚ್ಚು ಇಷ್ಟವಾಗುತ್ತವೆ.
ಟೆಕ್ ವಿಶೇಷ: 150 ಸಿಸಿ ಸಾಮರ್ಥ್ಯದ ಹಂಕ್ 4 ಸ್ಟ್ರೋಕ್ ಎಂಜಿನ್ ಹೊಂದಿದೆ. ಉಳಿದಂತೆ ಮೈಕ್ರೊ ಪ್ರೊಸೆಸರ್ ಇಗ್ನಿಶನ್ ಸಿಸ್ಟಮ್, 5 ಸ್ಪೀಡ್ ಗೇರ್ ಸಿಸ್ಟಮ್ ಕೂಡ ಇದರಲ್ಲಿದೆ. ಇದರಲ್ಲಿ ಪ್ರತಿಗಂಟೆಗೆ ಗರಿಷ್ಟ 120 ಕಿ.ಮೀ. ವೇಗದಲ್ಲಿ ಸಾಗಬಹುದು. ಹೈಡ್ರಾಲಿಕ್ ಷಾಕ್ ಅಬ್ಸರ್ಬಾರ್ ಮತ್ತು 5 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಗ್ಯಾಸ್ ಚಾಲಿತ ಹಿಂದಿನ ಸಸ್ಪೆನ್ಸನ್ ಸಿಸ್ಟಮ್ ಕೂಡ ಇದರಲ್ಲಿದೆ. ಹಂಕ್ ತೂಕ 146 ಕೆಜಿ ಇದ್ದು ಇಂಧನ ಟ್ಯಾಂಕ್ ಸಾಮರ್ಥ್ಯ 12.40 ಲೀಟರ್ ಆಗಿದೆ.
ಹಂಕ್ ಮೈಲೇಜ್: ಇತ್ತೀಚೆಗೆ ರಸ್ತೆಗಿಳಿದ ಹೀರೋ ಹೋಂಡಾ ಹಂಕ್ ಪ್ರತಿಲೀಟರ್ ಇಂಧನಕ್ಕೆ ಸುಮಾರು 45ರಿಂದ 50 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ. ಇದರ ದರ ಸುಮಾರು 63 ಸಾವಿರ ಇದ್ದು ಕಿಕ್ ಸ್ಟಾರ್ಟ್, ಸೆಲ್ಫ್ ಸ್ಟಾರ್ಟ್ ಮತ್ತು ಲಿಮಿಟೆಡ್ ವರ್ಷನ್ ಗಳೆಂಬ ಮೂರು ಮಾದರಿಗಳಲ್ಲಿ ದೊರಕುತ್ತವೆ. ಕಪ್ಪು, ಕೆಂಪು, ಸಿಲ್ವರ್ ಮತ್ತು ನೀಲಿ ಬಣ್ಣಗಳಲ್ಲಿ ಹಂಕ್ ದೊರಕುತ್ತಿದ್ದು ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.


Click it and Unblock the Notifications








