ಆರಾಮದಾಯಕ ಸವಾರಿಗೆ ಸುಂದರ ಬೈಕ್ ಸುಜುಕಿ ಸ್ಲಿಂಗ್ ಶಾಟ್

ಕಂಪನಿ ಆರಂಭದಲ್ಲಿ ಟಿವಿಎಸ್ ಮೋಟರ್ ನೊಂದಿಗೆ ಮೈತ್ರಿ ಮಾಡಿಕೊಂಡು ಹೊರತಂದದ್ದು ಸುಜುಕಿ ಶೊಗಾನ್ ಎಂಬ ಬೈಕ್. 2001ರಲ್ಲಿ ಸುಜುಕಿ ಫಿಯೆಯೊ ಎಂಬ ಬೈಕನ್ನೂ ಹೊರತಂದಿತ್ತು. 2006ರಲ್ಲಿ ಸ್ವತಂತ್ರವಾಗಿ 125 ಸಿಸಿಯ "ಹೀಟ್" ಮತ್ತು "ಝಿಯೂಸ್" ಎಂಬೆರಡು ಬೈಕ್ ಗಳನ್ನು ಸುಜುಕಿ ಹೊರತಂದಿತ್ತು. ಆದರೆ ಇವ್ಯಾವುದೂ ಭಾರತದಲ್ಲಿ ಸುಜುಕಿ ನಿರೀಕ್ಷಿಸಿದಂತೆ ಮಾರಾಟ ಕಾಣಲೇ ಇಲ್ಲ. ಆಗ ಕಂಪನಿ ಒಂದಿಷ್ಟು ಕಷ್ಟಪಟ್ಟು ಶಿಲ್ಪಿಯಂತೆ ಕೆತ್ತಿದ ಮೂರ್ತಿ 125 ಸಿಸಿಯ "ಸ್ಲಿಂಗ್ ಶಾಟ್". ಏನಿದರ ವಿಶೇಷತೆ ಅಂತಿರಾ?
ಬನ್ನಿ ರೈಡ್ ಮಾಡೋಣ: ಸ್ಟೈಲ್ ವಿಷ್ಯದಲ್ಲಿ ಸ್ಲಿಂಗ್ ಶಾಟ್ ಕುರಿತು ಕೊಂಕು ನುಡಿಯುವಂತಿಲ್ಲ. ಮುಖ್ಯವಾಗಿ ತನ್ನ ಹಳೆಯ ಬೈಕ್ ಮಾಡೆಲ್ ಗಳಿಂದ ಯಾವುದೇ ವಿನ್ಯಾಸ ಫೀಚರ್ ಗಳನ್ನು ಕದ್ದಿಲ್ಲ. ಅಷ್ಟರಮಟ್ಟಿಗೆ ಫ್ರೆಷ್ ಆಗಿದೆ.
ಇದರ ಇಂಧನ ಟ್ಯಾಂಕ್ ಸವಾರನಿಗೆ ರೈಡ್ ಗೆ ಪೂರಕವಾಗಿ ಅನನ್ಯ ಗ್ರಿಪ್ ನೀಡುತ್ತದೆ. ಇದಕ್ಕೆ ಸೀಟ್ ವಿನ್ಯಾಸದ ಕೊಡುಗೆಯೂ ಇದೆ. ಕೆಲವು ಗಂಟೆಗಳ ಕಾಲ ಹಲವು ಕಿ.ಮೀ. ಕೊಸರಾಡದೇ ಆರಾಮವಾಗಿ ಸವಾರಿ ಮಾಡಬಹುದಾಗಿದೆ. ಹೆದ್ದಾರಿ ಮತ್ತು ನಗರ ಎರಡೂ ಕಡೆಯಲ್ಲೂ ರೈಡ್ ಗೆ ಪೂರಕವಾಗಿದೆ. ಗಾಳಿಯನ್ನು ಸೀಳುತ್ತ ವೇಗವಾಗಿ ಸಾಗಲು ಪೂರಕವಾಗಿ ಇದನ್ನು ವಿನ್ಯಾಸ ಮಾಡಲಾಗಿದೆ. ಅಲಾಯ್ ವೀಲ್ ಹೊಂದಿರುವ ಸ್ಲಿಂಗ್ ಶಾಟ್ ಹಗುರವಾಗಿದ್ದು ಆರಾಮವಾಗಿ ರೈಡ್ ಮಾಡಬಹುದಾಗಿದೆ.
ಟೆಕ್ ಮತ್ತು ಮೈಲೇಜ್ ವಿಷ್ಯ: ಎಂಜಿನ್ ಹಳತು. ಈ ಹಳೆಯ ಮಾಡೆಲ್ ಝಿಯೂಸ್ 125 ಆಲ್ಬಿಟ್ ಗೆ ಬಳಸಿದ ಎಂಜಿನ್ ಬಳಸಲಾಗಿದೆ. ಇದು 124 ಸಿಸಿ ಮೋಟಾರಾಗಿದ್ದು 4 ಸ್ಟ್ರೋಕ್ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಹೊಂದಿದೆ. ಹಳೆಯ ಎಂಜನ್ ಅಂತ ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ನೂತನ ಬೈಕ್ ಕಾರ್ಯಕ್ಷಮತೆ ಒಂದಿಷ್ಟು ಹೆಚ್ಚಾಗಿದೆ. ಪ್ರತಿಗಂಟೆಗೆ ಸುಮಾರು 104 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಸ್ಲಂಗ್ ಶಾಟ್ ಮೈಲೇಜ್ ಅತ್ಯುತ್ತಮವಾಗಿದೆ. ಅಂದ್ರೆ ಪ್ರತಿಲೀಟರ್ ಗೆ ಸುಮಾರು 66 ಕಿ.ಮೀ. ಮೈಲೇಜ್ ನೀಡುತ್ತದೆ. 12 ಟ್ಯಾಂಕ್ ಇಂಧನ ಟ್ಯಾಂಕ್ ನ್ನು ಭರ್ತಿಯಾಗಿ ತುಂಬಿಸಿದರೆ ಸುಮಾರು 792 ಕಿ.ಮೀ.ವರೆಗೆ ನಿಶ್ಚಿಂತೆಯಾಗಿ ರೈಡ್ ಮಾಡಬಹುದಾಗಿದೆ.
ಗೇರ್ ಇಂಡಿಕೇಟರ್ ಸುಜುಕಿ ವಿಶೇಷತೆ. ಇದನ್ನು ಈ ಹಿಂದಿನ ಝಿಯೂಸ್ ನಲ್ಲೂ ಬಳಸಲಾಗಿತ್ತು. ಸವಾರನಿಗೆ ಈಗ ಯಾವ ಗೇರ್ ನಲ್ಲಿ ರೈಡ್ ಮಾಡುತ್ತಿದ್ದೇನೆ ಎಂಬುದನ್ನು ತಿಳಿಯಲು ಗೇರ್ ಇಂಡಿಕೇಟರ್ ಸೂಕ್ತವಾಗಿದೆ. ಇದು ಹೊಸದಾಗಿ ರೈಡ್ ಮಾಡುವರಿಗಂತೂ ಬಹಳಷ್ಟು ಉಪಯೋಗಕಾರಿಯಾಗಿದೆ. ಇದು 5-ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿದ್ದು, ಗೇರ್ ಮೇಲೆ ಕೆಳಗೆ ಬದಲಾಯಿಸುವುದು ಸ್ಮೂತ್ ಅನುಭವವಾಗಿದೆ. ಸ್ಲಿಂಗ್ ಶಾಟ್ ತೂಕ 128 ಕೆ.ಜಿ. ಇದೆ.
ಬೈಕ್ ಮೆಕಾನಿಸಂ ಕೆಲಸ ಆಕರ್ಷಕ. ಇದು ರೈಡ್ ಗುಣಮಟ್ಟವನ್ನು ಹೆಚ್ಚಿಸಿದೆ. ಆದರೂ ಬೈಕ್ ಎದುರುಭಾಗ ಒಂದಿಷ್ಟು ಹಗುರವಾಗಿದೆ ಎಂಬ ಭಾವನೆಯನ್ನು ಮೂಡಿಸುತ್ತದೆ. ನೂತನ ಬೈಕ್ 1,265 ಮಿ.ಮಿ. ವೀಲ್ ಬೇಸ್ ಹೊಂದಿದ್ದು ಬೈಕ್ ಗೆ ಸಾಕಷ್ಟು ಸದೃಢತೆ ನೀಡಿದೆ. ಇದರ ದರಕ್ಕೆ ಹೋಲಿಸಿದರೆ ಇದರಲ್ಲಿರುವ ಸಲಕರಣೆ, ಸಾಮಗ್ರಿಗಳ ಕುರಿತು ಎರಡು ಮಾತು ಆಡುವಾಗಿಲ್ಲ. ಆದರೆ ಬಂಪರ್ ಒಂದಿಷ್ಟು ದೊಡ್ಡದಾಯ್ತು ಎಂದೆನಿಸುತ್ತದೆ.
ಸ್ವಿಚ್ ಗೇರ್ ಆಕರ್ಷಕವಾಗಿದೆ. ಇದು ಪ್ಲಾಸ್ಟಿಕ್ ಮತ್ತು ಲೋಹದಿಂದ ಕೂಡಿದ್ದು ಗುಣಮಟ್ಟ ಹೆಚ್ಚಾಗಿದೆ. ನೀಟಾದ ವೆಲ್ಡಿಂಗ್ ನಿಂದಾಗಿ ಯಾವುದೇ ಬಿಡಿಭಾಗ ಚೆನ್ನಾಗಿಲ್ಲ ಎಂದೆನಿಸುವುದಿಲ್ಲ. ಹೆಡ್ ಲೈಡ್ ವಿಶಾಲವಾಗಿದ್ದು ರಾತ್ರಿ ವೇಳೆಯಲ್ಲಿ ಅತ್ಯುತ್ತಮ ಬೆಳಕು ನೀಡುವಲ್ಲಿ ಸಹಕರಿಸುತ್ತದೆ. ಹಗುರ, ಅಲಾಯ್ ವೀಲ್ ಗಳ ವಿನ್ಯಾಸ ಉತ್ತಮವಾಗಿದ್ದು, ಖರೀದಿಸಿದ ಹಣಕ್ಕೆ ಮೋಸವಿಲ್ಲವೆಂಬ ಭಾವನೆ ಸವಾರನಲ್ಲಿ ಮೂಡಿಸುತ್ತದೆ. 125 ಸಿಸಿ ಬೈಕೊಂದು ಇಷ್ಟೊಂದು ಆರಾಮದಾಯಕತೆ ಸವಾರಿ ಅನುಭವ ನೀಡುವುದು ಇಷ್ಟವಾಗುತ್ತದೆ. ಆದರೆ ಪ್ರತಿಗಂಟೆಗೆ 100 ಕಿ.ಮೀ.ಗಿಂತ ಜಾಸ್ತಿ ವೇಗದಲ್ಲಿ ಸಾಗುವಾಗ "ಡಿಸ್ಕ್ ಬ್ರೇಕ್" ಇರುತ್ತಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ಮೂಡುತ್ತದೆ. ಒಮ್ಮೊಮ್ಮೆ ಈ ಬೈಕ್ ನ ಪ್ರಮುಖ ಕೊರತೆಯಾಗಿ ಕಾಡುತ್ತದೆ.
ದರ: ಸುಜುಕಿ ಸ್ಲಿಂಗ್ ಶೂಟ್ ಎಂಬುದು ಹಳೆಯ ಝಿಯೂಸ್ 125 ಗೆ ಬದಲಿಯಾಗಿ ಬಂದಿರುವ ಬೈಕಾಗಿದೆ. ಹಣ, ಕಾರ್ಯಕ್ಷಮತೆ ಮತ್ತು ಆರಾಮದಾಯಕತೆ ಗಳ ನಡುವೆ ಒಂದಿಷ್ಟು ಭಿನ್ನತೆ ಕಂಡು ಬರುತ್ತದೆ. ಇದರ ಬೆಂಗಳೂರು ಎಕ್ಸ್ ಶೋರೂಂ ದರ: ಡ್ರಮ್, ಅಲಾಯ್ ಸ್ಲಂಗ್ ಶಾಟ್ ದರ 46,854 ರೂ. ಮತ್ತು ಡ್ರಮ್, ಸ್ಪೋಕ್ ಸ್ಲಂಗ್ ಶಾಟ್ ದರ ಸುಮಾರು 44,908 ರೂ. ಆಗಿದೆ.


Click it and Unblock the Notifications