ವಿಚ್ಛೇದನ ಧನ! ಹೋಂಡಾಕ್ಕೆ ಎರಡುವರೆ ಸಾವಿರ ಕೋಟಿ ಹಣ

ಸದ್ಯ ಕಂಪನಿಗಳೆರಡು ಪರವಾನಿಗೆ ಒಪ್ಪಂದ ಮಾಡಿಕೊಂಡಿವೆ. ಜಪಾನ್ ನ ಹೋಂಡಾ ಮತ್ತು ದೇಶದ ಹೀರೋ ಗ್ರೂಪ್ ನೂತನ ಪರವಾನಿಗೆ ಒಪ್ಪಂದದ ಪ್ರಕಾರ ಮುಂದಿನ 2014ರವರೆಗೆ ಹೀರೋ ಹೋಂಡಾ ಕಂಪನಿಯು ಹೋಂಡಾ ಕಂಪನಿಗೆ ಸುಮಾರು 450 ಕೋಟಿ ಯೆನ್ (ಸುಮಾರು 2,450 ಕೋಟಿ ರೂ) ಪಾವತಿಸಬೇಕಿದೆ.
ಹೊಸ ಪರವಾನಿಗೆ ಹಣಕಾಸು ಪಾವತಿಯೊಂದಿಗೆ ಹಳೆಯ ರಾಜಧನವನ್ನೂ ಸಹ ಪಾವತಿಸಲಾಗುವುದು ಎಂದು ಹೀರೋ ಹೋಂಡಾ ಮೋಟರ್ಸ್ ಲಿಮಿಟೆಡ್(ಎಚ್ಎಚ್ಎಂಎಲ್) ಹೇಳಿದೆ. ಕಂಪನಿಯು ನಿವ್ವಳ ಮಾರಾಟದ ಶೇಕಡ 2.7ರಿಂದ ಶೇ. 2.8ರಷ್ಟು ಹಣವನ್ನು ರಾಯಲ್ಟಿ ದರವಾಗಿ ಜಪಾನ್ ಕಂಪನಿಗೆ ನೀಡುತ್ತಿದೆ. 2014ರವರೆಗೆ ಈ ರಾಜಧನ ಪಾವತಿ ಮುಂದುವರೆಯಲಿದೆ.
ಕಳೆದ ವರ್ಷದ ಅಂತ್ಯದಲ್ಲಿ ಹೀರೋ ಗ್ರೂಪ್ ಮತ್ತು ಹೋಂಡಾ 26 ವರ್ಷಗಳ ಜಂಟಿ ಉದ್ಯಮಕ್ಕೆ ಮಂಗಳ ಹಾಡಲು ಸಮ್ಮತಿಸಿದ್ದವು. ಜಪಾನ್ ಕಂಪನಿಯ ಶೇ. 26ರಷ್ಟು ಪಾಲನ್ನು ಸುಮಾರು 3,841.83 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳಲು ಹೀರೋ ಗ್ರೂಪ್ ಒಪ್ಪಿಗೆ ನೀಡಿತ್ತು.
"ನೂತನ ಪರವಾನಿಗೆ ಒಪ್ಪಂದದ ಹಣಕಾಸು ಪಾವತಿಯನ್ನು ಜೂನ್ 2014ರವರೆಗೆ ಮುಂದುವರೆಸಲಾಗುವುದು. ಇದು ರಾಜಧನ ಹೆಚ್ಚಳದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಹೇಳಿದ್ದಾರೆ. ಕಂಪನಿಯು ನಿವ್ವಳ ಮಾರಾಟದ ಶೇ, 2.7ರಿಂದ ಶೇ. 2.8ರಷ್ಟು ಪಾಲನ್ನು ಹೋಂಡಾ ಕಂಪನಿಗೆ ರಾಯಲ್ಟಿ ಧನವಾಗಿ ಪಾವತಿ ಮಾಡುತ್ತಿದೆ ಎಂದರು.
ಈಗ ರಾಜಧನ ಪಾವತಿಯು ಶೇ. 2.75ರಷ್ಟಿದ್ದು, 2014ರ ವೇಳಗೆ ಶೇ. 2.2ಕ್ಕೆ ತಲುಪಲಿದೆ. ನಂತರ ಜಂಟಿ ಉದ್ಯಮ ಉತ್ಪಾದಿಸಿದ ಬೈಕ್ ಗಳಿಗೆ ಯಾವುದೇ ರಾಯಲ್ಟಿ ಪಾವತಿಸಬೇಕಿಲ್ಲ" ಎಂದು ಅವರು ವಿವರಿಸಿದರು. ಜೂನ್ 2014ರ ನಂತರ ನಾವು ಹೋಂಡಾದಿಂದ ಹೊಸ ಉತ್ಪನ್ನಗಳನ್ನು ಪಡೆದರೆ ಈಗಿನಂತೆ ರಾಯಲ್ಟಿ ಪಾವತಿ ಮುಂದುವರೆಸಲಾಗುವುದು ಕಂಪನಿಯ ಸಿಎಫ್ಒ ಹೇಳಿದ್ದಾರೆ.


Click it and Unblock the Notifications








