ಡುಂ, ಡುಂ, ಬಜಾಜ್ ಪಲ್ಸರ್ 200ಎನ್ಎಸ್ ಬೈಕ್ ರಸ್ತೆಗೆ
ದೇಶದ ರಸ್ತೆಗೆ ಪಲ್ಸರ್ ಆಗಮಿಸಿ ಸುಮಾರು ಒಂದು ದಶಕದ ತರುವಾಯ ಬಜಾಜ್ ಆಟೋ ನೂತನ ಪಲ್ಸರ್ 200ಎನ್ಎಸ್ ಎಂಬ ನಗ್ನ ಸ್ಪೋರ್ಟ್(ನೇಕ್ಡ್ ಸ್ಫೋರ್ಟ್) ಬೈಕನ್ನು ಪರಿಚಯಿಸಿದೆ. ಕಂಪನಿಯು ನೂತನ ಪಲ್ಸರ್ 200ಎನ್ಎಸ್ ಬೈಕನ್ನು ಪುಣೆಯಲ್ಲಿ ಬಿಡುಗಡೆ ಮಾಡಿದೆ. ಇದರ ಪುಣೆ ಎಕ್ಸ್ ಶೋರೂಂ ದರ 84,096 ರುಪಾಯಿ.
"ಪ್ರಸಕ್ತ ತಿಂಗಳು ನೂತನ ಪಲ್ಸರ್ 200ಎನ್ ಎಸ್ ಬೈಕ್ ಪುಣೆ ಮತ್ತು ಮುಂಬೈನಲ್ಲಿ ದೊರಕಲಿದೆ. ಆಗಸ್ಟ್ ತಿಂಗಳಿನಿಂದ ದೇಶದ ಎಲ್ಲಾ ನಗರಗಳಲ್ಲಿಯೂ ಲಭ್ಯವಿರಲಿದೆ" ಎಂದು ಬಜಾಜ್ ಆಟೋ ಕಂಪನಿಯ ದ್ವಿಚಕ್ರ ವಾಹನ ವಿಭಾಗದ ಅಧ್ಯಕ್ಷರಾದ ಕೆ. ಶ್ರೀನಿವಾಸ್ ಹೇಳಿದ್ದಾರೆ.
"ಮುಂಬೈ ಮತ್ತು ಪುಣೆ ಗ್ರಾಹಕರಿಗೆ ಪಲ್ಸರ್ 200ಎನ್ಎಸ್ ನೀಡಲು ಆರಂಭಿಸಿದ್ದೇವೆ. ಈಗಾಗಲೇ ಮುಂಬೈನಲ್ಲಿ 150 ಗ್ರಾಹಕರು ಮತ್ತು ಪುಣೆಯಲ್ಲಿ 60 ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ. ಕೊಲ್ಲಾಪುರ್, ಸೊಲಾಪುರ್ ಮತ್ತು ನಾಸೀಕ್ ನಲ್ಲಿ ಈ ತಿಂಗಳು ನೂತನ ಪಲ್ಸರ್ ಬುಕ್ಕಿಂಗ್ ಆರಂಭಿಸಲಿದ್ದೇವೆ" ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸ್ಪೋರ್ಟ್ಸ್ ಬೈಕುಗಳಿಗೆ(150 ಸಿಸಿ ಮತ್ತು ಅದಕ್ಕಿಂತ ಹೆಚ್ಚು) ಅತ್ಯಧಿಕ ಬೇಡಿಕೆಯಿದೆ. ದೇಶದ ಒಟ್ಟಾರೆ ಸ್ಪೋರ್ಟ್ಸ್ ಬೈಕ್ ಮಾರಾಟದಲ್ಲಿ ಮಹಾರಾಷ್ಟ್ರದ ಪಾಲು ಶೇಕಡ 27ರಷ್ಟಿದೆ. ನೂತನ ಪಲ್ಸರ್ ಬೈಕ್ ಸೆಂಟ್ರಲ್ ಮೊನೊ ಸಸ್ಪೆನ್ಸನ್ ಮತ್ತು ಡಿಸ್ಕ್ ಬ್ರೇಕ್ ಹೊಂದಿದೆ. ಎಂಜಿನ್ ಮೂರು ಸ್ಪಾರ್ಕ್ ಪ್ಲಗ್ ಹೊಂದಿರುವುದು ವಿಶೇಷ.
ಬಜಾಜ್ ಪಲ್ಸರ್ 200ಎನ್ಎಸ್ 9,500 ಆವರ್ತನಕ್ಕೆ 23.5 ಪಿಎಸ್ ಪವರ್ ಮತ್ತು 8 ಸಾವಿರ ಆವರ್ತನಕ್ಕೆ 18.3 ಟಾರ್ಕ್ ಪವರ್ ನೀಡುತ್ತದೆ. ನೂತನ ಪಲ್ಸರ್ 200ಎನ್ಎಸ್ ಬೈಕ್ 143 ಕೆಜಿ ತೂಕವಿದೆ.
ಈ ಬೈಕಿನಲ್ಲಿ ಗಂಟೆಗೆ ಗರಿಷ್ಠ 136 ಕಿ.ಮೀ. ವೇಗದಲ್ಲಿ ಹೋಗಬಹುದು. ಕೇವಲ 9.8 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆಯಬಹುದು. ಇನ್ನೂ ನಿಖರವಾಗಿ ಹೇಳಬೇಕೆಂದರೆ 0-60 ಕಿ.ಮೀ. ವೇಗವನ್ನು ಬರೀ 3.6 ಸೆಕೆಂಡಿನಲ್ಲಿ ಪಡೆಯಬಹುದು. ನೂತನ ಪಲ್ಸರ್ ಬೈಕಿನಲ್ಲಿ ಪ್ರತಿಗಂಟೆಗೆ 55 ಕಿ.ಮೀ. ವೇಗದಲ್ಲಿ ಸಾಗಿದರೆ ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 58 ಕಿ.ಮೀ. ಮೈಲೇಜ್ ಪಡೆಯಬಹುದು ಎಂದು ಬಜಾಜ್ ಹೇಳಿದೆ.


Click it and Unblock the Notifications









