ಪ್ರಪ್ರಥಮ ಬಾರಿಗೆ ದೇಶಕ್ಕೆ ಬೈಕ್ ಸಾಹಸ ಲೋಕ
ಒಂದರ ಹಿಂದೆ ಸರತಿ ಸಾಲಿನಲ್ಲಿ ಸಾಗಿ ಬರುವ ಬೈಕುಗಳು ಹಲಗೆ ಮೇಲಕ್ಕೆ ಹತ್ತಿ ಆಕಾಶಕ್ಕೆ ನೆಗೆದು ಮತ್ತೆ ದೂರದಲ್ಲಿ ಮಣ್ಣ ದಿಬ್ಬದ ಮೇಲೆ ಬಿದ್ದು ಕ್ಯಾರೇ ಇಲ್ಲದಂತೆ ಮತ್ತೆ ಸಾಗಿ ಮತ್ತೆ ಚಿಮ್ಮುವ ಬೈಕ್ ಸಾಹಸಗಳನ್ನು ಎಲ್ಲೋ ಇಂಗ್ಲಿಷ್ ಚಾನೆಲಿನಲ್ಲಿ ನೋಡಿದ ನೆನಪು ನಿಮಗೆ ಬರಬಹುದು.
ಇಂತಹ ಮೈ ಜುಂ ಎನಿಸುವ, ಬೆನ್ನ ಹುರಿಯಲ್ಲಿ ನಡುಕ ಹುಟ್ಟಿಸುವ ಅಮೋಘ, ಅತ್ಯಾಕರ್ಷಕ ಬೈಕ್ ಸಾಹಸವನ್ನು ಕಣ್ತುಂಬಿಕೊಳ್ಳುವ ಅವಕಾಶ ದೇಶದ ಜನರಿಗೆ ದೊರಕಲಿದೆ.ದೆಹಲಿಯ ರಾಜಪಥದಲ್ಲಿ ಜಗತ್ತಿನ ಖ್ಯಾತ ಎಕ್ಸ್ ಫೈಟರ್ಸ್ ತಂಡವು ಪ್ರಪ್ರಥಮ ಬಾರಿಗೆ ಬೈಕ್ ಸಾಹಸ ಪ್ರದರ್ಶನ ಶೀಘ್ರದಲ್ಲಿ ನಡೆಸಲಿದೆ.
ಫ್ರೀ ಸ್ಟೈಲ್ ಮೊಟೊಕ್ರಾಸ್ ಆಕ್ಷನ್ ಸ್ಪೋರ್ಟ್ಸ್‌ನ್ನು ರೆಡ್ ಬುಲ್ ಸಂಸ್ಥೆ ಎಕ್ಸ್- ಫೈಟರ್ಸ್ ತಂಡವು ಪ್ರಪ್ರಥಮ ಬಾರಿಗೆ ನವದೆಹಲಿ ರಾಜಪಥ ಸಮೀಪ ಜೂನ್ 30ರಿಂದ ಆಯೋಜಿಸಲಿದೆ. ಪ್ರಪ್ರಥಮ ಬಾರಿಗೆ ದೇಶಕ್ಕೆ ಆಗಮಿಸುವ ಈ ಪ್ರದರ್ಶನ ನೋಡ ಬಯಸುವರು ರೆಡಿಯಾಗಬಹುದು.
ಫ್ರೀ ಸ್ಟೈಲ್ ಮೊಟೊಕ್ರಾಸ್ ಆಕ್ಷನ್ ಸ್ಪೋರ್ಟ್ಸ್ ಸಾಹಸ ಪ್ರದರ್ಶನದಲ್ಲಿ ಜಗತ್ತಿನ ಬೈಕ್ ಸಾಹಸ ಲೋಕದ ಪ್ರಖ್ಯಾತರು ಭಾಗವಹಿಸಲಿದ್ದಾರೆ. ಅಂದರೆ ಎಕ್ಸ್-ಫೈಟರ್ಸ್ ತಂಡದಲ್ಲಿ ಸಾಹಸಿ ಬೈಕ್ ಸ್ಟಂಟರ್‌ಗಳಾದ ನಿಕ್ ಫ್ರಾಂಕ್ಲಿನ್, ನಿಕ್ ದೆ ವಿತ್, ಗಿಲೆಸ್ ಡೆಜೊಂಗ್ ಮತ್ತು ಜಿಮ್ಮಿ ವೆರ್ಬುರ್ಗ್ ಇರಲಿದ್ದಾರೆ.
ಬೈಕ್ ನೆಗೆತ, ಬೆಂಕಿಯೊಂದಿಗೆ ಬೈಕ್ ಸವಾರರ ಸರಸ ಸೇರಿದಂತೆ ಹಲವು ಬಗೆಯ ಸಾಹಸಗಳನ್ನು ಎಕ್ಸ್-ಫೈಟರ್ಸ್ ತಂಡವು ಪ್ರದರ್ಶಿಸಲಿದೆ. ಮೈ ನವಿರೇಳಿಸುವ, ಭಯ ಹುಟ್ಟಿಸುವ, ಅಚ್ಚರಿ ಹುಟ್ಟಿಸುವ ಈ ಸಾಹಸ ಪ್ರದರ್ಶನದಲ್ಲಿ ಆರ್ ಜೆ ಸಂಗೀತದ ಸಾಥ್ ಕೂಡ ಇರಲಿದೆ.
ಫ್ರೀಸ್ಟೈಲ್ ಮೊಟೊಕ್ರಾಸ್ ಬೈಕ್ ಸಾಹಸವನ್ನು ಏಷ್ಯಾಕ್ಕೆ ರೆಡ್ ಬುಲ್ ತಂಡವು ಪರಿಚಯಿಸಿದೆ. ಈ ಕಾರ್ಯಕ್ರಮಕ್ಕೆ ರೆಡ್ ಬುಲ್ ತಂಡವೇ ಪ್ರಾಯೋಜಕತ್ವ ನೀಡುತ್ತಿದೆ. ಈಗಾಗಲೇ ಹತ್ತು ಹಲವು ದೇಶಗಳಲ್ಲಿ ಪ್ರೀ ಸ್ಟೈಲ್ ತಂಡವೂ ಯಶಸ್ವಿಯಾಗಿ ಪ್ರದರ್ಶನ ನೀಡಿದೆ. ಈ ತಂಡವು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲೂ ಈ ಹಿಂದೆ ಪ್ರದರ್ಶನ ನೀಡಿತ್ತು.
ಮುಂದಿನ ತಿಂಗಳಾಂತ್ಯದಲ್ಲಿ ನಡೆಯುವ ಈ ಬೈಕ್ ಸಾಹಸ ಪ್ರದರ್ಶನದ ಪ್ರವೇಶದರ ಇತ್ಯಾದಿ ಮಾಹಿತಿಗಳು ಸದ್ಯಕ್ಕೆ ಲಭ್ಯವಿಲ್ಲ.
ಏನಿದು ಬೈಕ್ ಸಾಹಸ?: ಅಮೆರಿಕ ಮುಂತಾದ ದೇಶದಲ್ಲಿ ಆಕ್ಷನ್ ಸ್ಪೋರ್ಟ್ಸ್ ವೇಗವಾಗಿ ಜನಪ್ರಿಯಗೊಳ್ಳುತ್ತಿರುವ ಕ್ರೀಡೆಯಾಗಿದೆ. ಎಲ್ಲಾ ವಯೋಮಾನದವರಿಗೂ ಇಷ್ಟವಾಗುವಂತಹ ಕ್ರೀಡೆ ಇದಾಗಿದೆ. ಬೈಕ್ ಎಂಜಿನ್ ಸದ್ದು, ವೇಗವಾಗಿ ಸಾಗುವುದು, ಓರೆ ಹಲಗೆಗಳ ಮೂಲಕ ಆಕಾಶಕ್ಕೆ ನೆಗೆಯುವುದು, ಬೆಂಕಿ ಸುರಳಿಗಳ ನಡುವೆ ಬೈಕ್ ಸವಾರಿ ಇತ್ಯಾದಿ ಆಕರ್ಷಣೆಗಳು ನೋಡುಗರನ್ನು ತುದಿಗಾಲಿನಲ್ಲಿ ನಿಂತುಕೊಳ್ಳುವಂತೆ ಮಾಡುತ್ತದೆ.


Click it and Unblock the Notifications
