ಹೀರೊದಿಂದ 250ಸಿಸಿ ಸ್ಪೋರ್ಟ್ಸ್ ಬೈಕ್ ತಯಾರಿ
ಜಪಾನ್‌ನ ಮುಂಚೂಣಿಯ ವಾಹನ ತಯಾರಕ ಕಂಪನಿಯಾದ ಹೊಂಡಾದಿಂದ ಬೇರ್ಪಟ್ಟ ಬಳಿಕ ತನ್ನದೇ ಆದ ಪೂರ್ಣ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿರುವ ದೇಶದ ಅತಿ ದೊಡ್ಡ ದ್ವಿಚಕ್ರ ಕಂಪನಿಯಾದ ಹೀರೊ ಮೊಟೊಕಾರ್ಪ್ ಸದ್ಯದಲ್ಲೇ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ಬಿತ್ತರಿಸಲಿದೆ.
250ಸಿಸಿ ಬೈಕ್ ಸಿದ್ಧಪಡಿಸುತ್ತಿರುವ ಹೀರೊ ಮೊಟೊಕಾರ್ಪ್, 2014ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಿದೆ. ಹೊಂಡಾದಿಂದ ಬೇರ್ಪಟ್ಟ ಬಳಿಕ ಹೀರೊ, ಅಮೆರಿಕದ ಎರಿಕ್ ಬ್ಯುಯೆಲ್ ರೇಸಿಂಗ್ ಜತೆ ತಾಂತ್ರಿಕ ನಂಟು ಕಾಯ್ದುಕೊಂಡಿದೆ.
ಇದೀಗ ಎರಿಕ್ ಬ್ಯುಯೆಲ್ ರೇಸಿಂಗ್ ಜತೆ ಸೇರಿ ನೂತನ 250ಸಿಸಿ ಬೈಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ವಿಶ್ವದರ್ಜೆಯ ಬೈಕ್ ತಯಾರಿಸಲು ಕಂಪನಿ ಮುಂದಾಗಿದೆ.
ಅಮೆರಿಕದಲ್ಲಿ ಸ್ಪೋರ್ಟ್ಸ್ ಬೈಕ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೂ ಸಿದ್ಧಪಡಿಸಲಾಗುವುದು. ದೆಹಲಿ ಆಟೋ ಎಕ್ಸ್‌ಪೋದಲ್ಲಿ ಕಾಣಿಸಿಕೊಳ್ಳಲಿರುವ ಬೈಕ್ ಸದ್ಯದಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ.


Click it and Unblock the Notifications









