ಹೀರೊ ಮೊಟೊಕಾರ್ಪ್‌ಗೆ ಇಟಲಿ ಟಚ್!
ದೇಶದ ಬೈಕ್ ಕಂಪನಿ ಹೀರೊ ಮೊಟೊಕಾರ್ಪ್ ಇಟಲಿಯ ದ್ವಿಚಕ್ರ ವಿನ್ಯಾಸ ಕಂಪನಿ ಎಂಜಿನ್ಸ್ ಎಂಜಿನಿಯರಿಂಗ್ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಪ್ರಕಟಿಸಿದೆ. ಮುಂದಿನ ತಲೆಮಾರಿನ ನೂತನ ಬೈಕುಗಳನ್ನು ವಿನ್ಯಾಸ ಮಾಡಲು ಈ ಮೈತ್ರಿ ನೆರವಾಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೀರೊ ಮೊಟೊಕಾರ್ಪ್ ಕಂಪನಿಯ ಭವಿಷ್ಯದ ಉತ್ಪನ್ನಗಳ ತಂತ್ರಜ್ಞಾನ ಮತ್ತು ವಿನ್ಯಾಸದಲ್ಲಿ ಅಮೂಲಾಗ್ರ ಬದಲಾವಣೆಯಾಗಲು ಇಟಲಿಯ ಕಂಪನಿಯು ನೆರವಾಗಲಿದೆ.
ನೂತನ ಮೈತ್ರಿಯಿಂದ ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ ಮತ್ತು ಉತ್ಪನ್ನಗಳ ಆಕರ್ಷಕತೆ ಹೆಚ್ಚಾಗುವ ನಿರೀಕ್ಷೆಯನ್ನು ದೇಶದ ಬೃಹತ್ ದ್ವಿಚಕ್ರ ವಾಹನ ಕಂಪನಿ ಹೀರೊ ಮೊಟೊಕಾರ್ಪ್ ಲಿಮಿಟೆಡ್ ವ್ಯಕ್ತಪಡಿಸಿದೆ.
ಹೀರೊ ಮೊಟೊಕಾರ್ಪ್ ಹೊಸ ಐಡೆಂಟೆಟಿ ಪಡೆದ ನಂತರದ ಮೂರನೇ ಮೈತ್ರಿ ಇದಾಗಿದೆ. ಈ ವರ್ಷದ ಆರಂಭದಲ್ಲಿ ಕಂಪನಿಯು ತಂತ್ರಜ್ಞಾನ ನೆರವಿಗಾಗಿ ಅಮೆರಿಕ ಮೂಲದ ಎರಿಕ್ ಬುಯೆಲ್ ರೇಸಿಂಗ್ ಕಂಪನಿ ಜೊತೆ ಮೈತ್ರಿ ಮಾಡಿಕೊಂಡಿತ್ತು.
ತದನಂತರ ಕಂಪನಿಯು ಆಸ್ಟ್ರೇಲಿಯಾದ ಎಂಜಿನ್ ಅಭಿವೃದ್ಧಿ ಪಡಿಸುವ ಕಂಪನಿ ಎವಿಎಲ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಮುಂಬರುವ ದಿನಗಳಲ್ಲಿ ದೇಶಕ್ಕೆ ಆಗಮಿಸುವ ಹೀರೊ ಮೊಟೊಕಾರ್ಪ್ ಬೈಕುಗಳಲ್ಲಿ ಹೊಸ ಆಕರ್ಷಕ ವಿನ್ಯಾಸ ನಿರೀಕ್ಷಿಸಬಹುದು.


Click it and Unblock the Notifications









