ಜಯನಗರ ಸೈಕಲ್ ಪಥ ಆರಂಭಕ್ಕೆ ದಿನಗಣನೆ
ಈಗಾಗಲೇ ಜಯನಗರದ 3ನೇ ಬ್ಲಾಕಿನಿಂದ 9ನೇ ಬ್ಲಾಕ್‌ವರೆಗಿನ ರಸ್ತೆಗಳ ಬದಿಯಲ್ಲಿ ಬಿಳಿಬಣ್ಣದ ಪೇಂಟ್ ಮತ್ತು ಅಲ್ಲಲ್ಲಿ ಸೈಕಲ್ ಚಿತ್ರ ಬರೆದು ವಿಶೇಷ ಸೈಕಲ್ ಮಾರ್ಗ ರೂಪಿಸಲಾಗಿದೆ. ಜಯನಗರ ಬಡಾವಣೆಯ ಈ ಎಲ್ಲಾ ಬ್ಲಾಕಿನ ಫಸ್ಟ್ ಮೇನ್ ರೋಡಿನಿಂದ 40ನೇ ಕ್ರಾಸ್ ವರೆಗೆ ಈ ಸೈಕಲ್ ಪಥ ಮಾಡಲಾಗಿದೆ.
ಜಯನಗರದ ಕೆಲವು ಕ್ರಾಸ್ ಗಳಲ್ಲಿ ಈ ಸೈಕಲ್ ಪಥವು ಕಾರು ಚಾಲಕರಿಗೆ ಗೊಂದಲವುಂಟು ಮಾಡುತ್ತಿದ್ದು, ಇದನ್ನು ಪಾರ್ಕಿಂಗ್ ಸ್ಥಳವೆಂದು ತಿಳಿದು ಅಲ್ಲಲ್ಲೇ ಕಾರು ಮತ್ತು ಪಾರ್ಕ್ ಮಾಡುವುದು ನಮ್ಮ ವರದಿಗಾರರ ಗಮನಕ್ಕೆ ಬಂದಿದೆ. ಈ ಸೈಕಲ್ ಮಾರ್ಗ ಸವಾರರಿಗೆ ಮುಕ್ತವಾದ ನಂತರ ಈ ಗೊಂದಲಗಳೆಲ್ಲ ನಿಧಾನವಾಗಿ ಬಗೆಹರಿಯುವ ನಿರೀಕ್ಷೆಯಿದೆ.
ಅಶೋಕ್ ಪಿಲ್ಲರ್, ಸೌತ್ ಎಂಡ್ ಸರ್ಕಲ್, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್, ಸೆಂಟ್ರಲ್ ಮಾಲ್, ತಿಲಕನಗರ, ಮಾಧವನ್ ಪಾರ್ಕ್ ಸೇರಿದಂತೆ ಅಲ್ಲಲ್ಲಿ ಸೈಕಲ್ ಪಥವು ಕಾಣುತ್ತಿದೆ. ನಗರ ಸಾರಿಗೆ ನಿರ್ದೇಶನಾಲಯದ ಸಹಯೋಗದೊಂದಿಗೆ ರೈಡ್ ಎ ಸೈಕಲ್ ಪೌಂಡೆಷನ್ ಸುಮಾರು 2.50 ಕೋಟಿ ರು. ವೆಚ್ಚದಲ್ಲಿ ಜಯನಗರದ ಸೈಕಲ್ ಸ್ನೇಹಿ ರಸ್ತೆಗಳನ್ನು ರೂಪಿಸಿದೆ.
"ಜಯನಗರದ ಬಡಾವಣೆಯಲ್ಲಿ ಹಲವು ವಿದ್ಯಾಸಂಸ್ಥೆಗಳಿದ್ದು, ದಿನನಿತ್ಯ ಲಕ್ಷ ಲಕ್ಷ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಇವರೆಲ್ಲ ಈ ಸೈಕಲ್ ಸ್ನೇಹಿ ರಸ್ತೆಯ ಸದುಪಯೋಗ ಪಡೆದುಕೊಳ್ಳಬೇಕು. ಈ ಮೂಲಕ ಪರಿಸರ ರಕ್ಷಣೆ ಕೈಂಕರ್ಯದಲ್ಲಿ ಪಾಲ್ಗೊಳ್ಳಬೇಕು" ಎಂದು ಜಯನಗರದ ಶಾಸಕರಾದ ವಿಜಯ್ ಕುಮಾರ್ ಇತ್ತೀಚೆಗೆ ಗೋ ಗ್ರೀನ್ ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ಜಯನಗರದಲ್ಲಿ ರೂಪಿಸಿರುವ ಸೈಕಲ್ ಪಥವು 1.5 ಮೀಟರ್ ಅಗಲವಿದ್ದು, ಕಾರು, ಬಸ್ ಚಾಲಕರಿಗೆ ಈ ಮಾರ್ಗಗಳ ಅರಿವು ಉಂಟಾಗಬೇಕಿದೆ. ಈ ದಾರಿಯಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡಬಾರದು. ಪಾದಚಾರಿಗಳು ಕೂಡ ಸೈಕಲ್ ಪಥದಲ್ಲಿ ಸಾಗಬಾರದು. ಇದಕ್ಕಾಗಿ ಶೀಘ್ರದಲ್ಲಿ ಸೈಕಲ್ ಮಾರ್ಗಗಳಲ್ಲಿ ಸೂಚನ ಫಲಕ ಹಾಕಲು ನಿರ್ಧರಿಸಲಾಗಿದೆ.
ಸೈಕಲ್ ನಿಲ್ಲಿಸಲು ಅಲ್ಲಲ್ಲಿ ಸೈಕಲ್ ಸ್ಟಾಂಡ್ ನಿರ್ಮಿಸಲಾಗಿದೆ. ಈಗಾಗಲೇ ಜಯನಗರ ಪಾರ್ಕ್ ಮತ್ತು ಆಟದ ಮೈದಾನಗಳ ಆಸುಪಾಸಿನಲ್ಲಿ ಸೈಕಲ್ ನಿಲ್ದಾಣಗಳನ್ನು ರೂಪಿಸಲಾಗಿದೆ. ಈಗ ಸೈಕಲ್ ಸ್ಟಾಂಡ್ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ ಇದರ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.


Click it and Unblock the Notifications









