ಡುಕಾಟಿ ಸೂಪರ್ ಬೈಕ್ ಕಂಪನಿ ಮಾರಾಟಕ್ಕಿದೆ.. ಖರೀದಿಸ್ತಿರಾ?

ಸೂಪರ್ ಬೈಕ್ ತಯಾರಿಕಾ ಕಂಪನಿಯನ್ನು ಖರೀದಿಸುವ ಬಿಡ್ ನಲ್ಲಿ ದೇಶದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯೂ ಇದೆ. ಜರ್ಮನಿಯ ಬಿಎಂಡಬ್ಲ್ಯು ಮತ್ತು ಫೋಕ್ಸ್ ವ್ಯಾಗನ್ ಕಂಪನಿಗಳು ಡುಕಾಟಿ ಖರೀದಿದಾರರ ರೇಸ್ ನಲ್ಲಿವೆ. ಮಹೀಂದ್ರ ಮತ್ತು ಬಿಎಂಡಬ್ಲ್ಯು ಈಗಾಗಲೇ ದ್ವಿಚಕ್ರ ವಾಹನಗಳನ್ನು ಹೊಂದಿವೆ. ಆದರೆ ಫೋಕ್ಸ್ ವ್ಯಾಗನಿಗೆ ದ್ವಿಚಕ್ರ ಹೊಸ ಸೆಗ್ಮೆಂಟಾಗಿದೆ.
ಈ ಬೈಕ್ ಕಂಪನಿಗೆ ಬೃಹತ್ ಉದ್ಯಮ ಪಾಲುದಾರರ ಅವಶ್ಯಕತೆಯಿದೆ ಎಂದು ಇನ್ವೆಸ್ಟ್ ಇಂಡಸ್ಟ್ರಿಯಲ್ ಹೋಲ್ಡಿಂಗ್ಸ್ ಸ್ಪಾ ತಿಳಿಸಿದೆ. ಕಂಪನಿಯು ಡುಕಾಟಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಕಂಪನಿಯ ಚೇರ್ಮನ್ ಆಂಡ್ರಿಯಾ ಬೊನೊಮಿ ಹೇಳಿದ್ದಾರೆ.
ಸೂಪರ್ ಬೈಕ್ ಕಂಪನಿ ಡುಕಾಟಿಗೆ ಸುಮಾರು 75 ವರ್ಷಗಳ ಇತಿಹಾಸವಿದೆ. ಇದು 1946ರಲ್ಲಿ ಬೈಕ್ ಉತ್ಪಾದಿಸಲು ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೆ ಕಂಪನಿ ತಿರುಗಿ ನೋಡಿದ್ದೇ ಇಲ್ಲ. ಇಲ್ಲಿವರೆಗೆ ಕಂಪನಿಯ ಮಾಲಿಕತ್ವವು ಕೈಯಿಂದ ಕೈಗೆ ಬದಲಾಗುತ್ತ ಬಂದಿದೆ. 2005ರಲ್ಲಿ ಡುಕಾಟಿಯನ್ನು ಇನ್ವೆಸ್ಟ್ ಇಂಡಸ್ಟ್ರಿಯಲ್ ಹೋಲ್ಡಿಂಗ್ಸ್ ಸ್ಪಾ ಖರೀದಿಸಿತ್ತು. ಫರ್ಮಾಮೆನ್ಸ್ ಮೋಟರ್ ಸೈಕಲ್ ಸ್ಪಾ ಹೆಸರಿನಲ್ಲಿ ಕಂಪನಿಯು ಡುಕಾಟಿ ಬೈಕುಗಳನ್ನು ಮಾರಾಟ ಮಾಡುತ್ತಿದೆ.
ಡುಕಾಟಿಯನ್ನು ಖರೀದಿಸಲು ಹಲವು ಹೂಡಿಕೆದಾರರು ಆಸಕ್ತಿವಹಿಸಿದ್ದಾರೆಂದು ಬೊನಾಮಿ ಹೇಳಿದ್ದಾರೆ. ಕಂಪನಿಯು ಸುಮಾರು 160 ಕೋಟಿ ಡಾಲರಿಗೆ ಡುಕಾಟಿ ಮಾರಾಟವಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.
ಡುಕಾಟಿ ಬೈಕುಗಳಿಗೆ ಅಮೆರಿಕದಲ್ಲಿ ಅತ್ಯಧಿಕ ಬೇಡಿಕೆಯಿದೆ. ಡುಕಾಟಿ ಬೈಕುಗಳು ಭಾರತಕ್ಕೂ ಈಗಾಗಲೇ ಪ್ರವೇಶಿಸಿವೆ. ಡೈವಲ್ ಮತ್ತು ಮಾನೆಸ್ಟರ್ ಬೈಕುಗಳು ದೇಶದಲ್ಲಿ ಮಾರಾಟವಾಗುತ್ತಿವೆ. ಮಹೀಂದ್ರ ಕಂಪನಿಯು ಕೊರಿಯಾದ ಸ್ಯಾನ್ಸೊಂಗ್ ಕಂಪನಿಯನ್ನು 2010ರಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು.


Click it and Unblock the Notifications








