Om Banna Bullet Baba Temple History in Kannada: ಕೈ ಮುಗಿದು ಬಾ, ಇದು ಬುಲೆಟ್ ಬಾಬಾ ದೇಗುಲ
ಎಲ್ಲಿದೆ?: ರಾಜಸ್ಥಾನದ ಪಾಲಿ- ಜೋದ್ ಪುರ ರಾಷ್ಟ್ರೀಯ ಹೆದ್ದಾರಿ 65ರ ನಡುವೆ(ಪಾಲಿಯಿಂದ 20 ಕಿ.ಮೀ. ದೂರ) ಚೊಟಿಲಾವೆಂಬ ಗ್ರಾಮ ಸಿಗುತ್ತದೆ. ಅಲ್ಲೇ ಬುಲೆಟ್ ಬಾಬಾ ಅಥವಾ ಓಂ ಬಾಬಾನ ದೇಗುಲವಿರುತ್ತದೆ. ಜನರು ಈಗಲೂ ಅಲ್ಲಿ ಶ್ರದ್ಧೆಯಿಂದ ಭಕ್ತಿಯಿಂದ ಬುಲೆಟ್ ಬಾಬಾನ ಆರಾಧಿಸುವುದು ಕಂಡು ಬರುತ್ತದೆ.
ಯಾರಿದು ಬುಲೆಟ್ ಬಾಬಾ?: ಚೊಟಿಲಾ ಗ್ರಾಮದ ಮುಖ್ಯಸ್ಥನಾಗಿದ್ದ ಜೋಗ್ ಸಿಂಗ್ ಪುತ್ರನೇ ಈ ಓಂ ಸಿಂಗ್ ರಾಥೋರ್. ಈತನನ್ನು ಗ್ರಾಮಸ್ಥರು ಓಂ ಬನ್ನಾ ಎಂದೂ ಕರೆಯುತ್ತಿದ್ದರು. ಈತನ ಬಳಿಯಲ್ಲಿ ರಾಯಲ್ ಎನ್ ಫೀಲ್ಡ್ ಕಂಪನಿಯ 350ಸಿಸಿಯ ಬುಲೆಟ್ ಇತ್ತು.
ಇದು 1991ರಲ್ಲಿ ನಡೆದ ಘಟನೆ. ಆ ಬೇಸಿಗೆಯ ನಡುರಾತ್ರಿ ಓಂ ಬಾಬಾ ರೈಡ್ ಮಾಡುತ್ತಿದ್ದ ಬುಲೆಟ್ ಮರವೊಂದಕ್ಕೆ ಡಿಕ್ಕಿ ಹೊಡೆಯಿತು. ಓಂ ಬಾಬಾ ಸ್ಥಳದಲ್ಲಿಯೇ ಮೃತಪಟ್ಟರು. ಅಂತ್ಯಸಂಸ್ಕಾರವೆಲ್ಲ ನಡೆಯಿತು. ಸ್ಥಳೀಯ ಪೊಲೀಸರು ಈ ಬುಲೆಟನ್ನು ಪೋಲೀಸ್ ಸ್ಟೇಷನ್ ನಲ್ಲಿ ತಂದಿಟ್ಟರು.
ಏನಿದು ಪವಾಡ?: ಅಪಘಾತಗೊಂಡ ರಾಯಲ್ ಎನ್ ಫೀಲ್ಡ್ ಬುಲೆಟನ್ನು ಪೊಲೀಸರು ಸ್ಟೇಷನಿನಲ್ಲಿ ಇಟ್ಟು ದಿನವೊಂದು ಕಳೆದಿರಲಿಲ್ಲ. ಮರುದಿನ ಬೆಳಗ್ಗೆ ಈ ಬುಲೆಟ್ ಕಾಣೆಯಾಗಿತ್ತು. ಪೊಲೀಸರು ತುಂಬಾ ಹುಡುಕಿದರು. ಆದರೆ ಅದು ಪತ್ತೆಯಾದದ್ದು ಅಪಘಾತಗೊಂಡ ಆ ಮರದ ಕೆಳಗೆ!
ಯಾರೋ ಕೀಟಲೆ ಮಾಡುತ್ತಿದ್ದರೆಂದು ಪೊಲೀಸರು ಭಾವಿಸಿದರು. ಅದಕ್ಕಾಗಿ ಬುಲೆಟ್ ನಲ್ಲಿರುವ ಇಂಧನವನ್ನೆಲ್ಲ ಖಾಲಿ ಮಾಡಿ, ಕಬ್ಬಿಣದ ಸರಪಣಿಯಿಂದ ಕಟ್ಟಿ ಬೀಗ ಹಾಕಿ ಮತ್ತೆ ಪೊಲೀಸ್ ಸ್ಟೇಷನಿನಲ್ಲಿ ತಂದಿಟ್ಟರು. ಆದರೆ ಮತ್ತೆ ಬುಲೆಟ್ ನಾಪತ್ತೆಯಾಗಿತ್ತು.
ಎಲ್ಲಾ ಕಡೆ ಹುಡುಕಿದರೂ ಬುಲೆಟ್ ಪತ್ತೆಯಾಗಿಲ್ಲವಂತೆ. ಕೊನೆಗೆ ಅಪಘಾತಗೊಂಡ ಮರದಡಿ ನೋಡಿದರೆ ಅಲ್ಲೇ ಆ ಬುಲೆಟ್ ಇತ್ತು. ಇಂಧನವಿಲ್ಲದ, ಟೈರ್ ಸರಿಯಾಗಿರದ ಆ ಬುಲೆಟ್ ಸ್ಟೇಷನಿನಿಂದ ಬಹುದೂರವಿರುವ ಆ ಮರದಡಿ ತಲುಪಿದ್ದು ಹೇಗೆ?
ಈ ಪವಾಡಕ್ಕೆ ಇಡೀ ಊರೇ ಬೆರಗಾಗಿತ್ತು. ಇಲ್ಲಿವರೆಗೆ ತಮಾಷೆ ನೋಡುತ್ತಿದ್ದ ಗ್ರಾಮಸ್ಥರ ಮನದಲ್ಲಿ ಭಯ ಶುರುವಾಯಿತು. ಭಯದ ಮೂಲವೇ ಭಕ್ತಿ ಅಂತಾರಲ್ಲ. ಅದೇ ಅಪಘಾತ ಸ್ಥಳದಲ್ಲಿ ಗ್ರಾಮಸ್ಥರು ಬುಲೆಟ್ ಬಾಬಾನಿಗೆ ದೇಗುಲ ಕಟ್ಟಿಬಿಟ್ಟರು.
ಅದೊಂದು ದಿನ ಇದೇ ಸ್ಥಳದಲ್ಲಿ ವಾಹನವೊಂದು ಅಪಘಾತಗೊಂಡಾಗ ಓಂ ಬಾಬಾನೇ ಬಂದು ವಾಹನದ ಚಾಲಕನನ್ನು ಕಾಪಾಡಿದನೆಂದು ಪ್ರತೀತಿಯಿದೆ. ಅಂದಿನಿಂದ ಈ ದೇಗುಲದ ಪ್ರಶಿದ್ಧಿ ಹೆಚ್ಚಾಯಿತು. ಈ ದಾರಿಯಲ್ಲಿ ಸಾಗುವ ವಾಹನ ಸವಾರರೂ ತಪ್ಪದೇ ಇಲ್ಲಿಗೆ ಭೇಟಿ ನೀಡುತ್ತಾರೆ.
ರಾಯಲ್ ಎನ್ ಫೀಲ್ಡ್ ಕಂಪನಿಯ ಬುಲೆಟಿಗೆ ಇಲ್ಲಿ ಈಗಲೂ ಪೂಜೆ ಪುನಸ್ಕಾರಗಳು, ಬಜನೆ, ಆರಾಧನೆಗಳು ನಡೆಯುತ್ತಿದೆ. ಇದು ಅಚ್ಚರಿಯಾದರೂ ಸತ್ಯ. ರಾಜಸ್ಥಾನದ ಪಾಲಿ ಹೆದ್ದಾರಿಯಲ್ಲಿ ಸಾಗುವರೊಮ್ಮೆ ಇಲ್ಲಿಗೆ ಭೇಟಿ ನೀಡಬಹುದು.
ಓದುಗರೇ ಬುಲೆಟ್ ಬಾಬಾ ದೇಗುಲದ ಕುರಿತು ನಿಮಗೆ ಏನೇನಿಸಿತು?


Click it and Unblock the Notifications









