ಬೆಂಗಳೂರಿಗೆ ಬಂತು ಸುಜುಕಿ ಹಯಾಟೆ ಬೈಕ್, ದರವೆಷ್ಟು?
ಬೆಂಗಳೂರು, ಜೂ 06: ಯಲಹಂಕ ನ್ಯೂ ಟೌನಿನ ವ್ಯಾಲ್ಯೂ ಮೋಟರ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್‌ನಲ್ಲಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಸುಜುಕಿ ದ್ವಿಚಕ್ರ ವಾಹನ ಕಂಪನಿಯು ನೂತನ 110 ಸಿಸಿಯ ಹಯಾಟೆ ಬೈಕನ್ನು ಇತ್ತೀಚೆಗೆ ಪರಿಚಯಿಸಿದೆ. ಕನ್ನಡ ಚಿತ್ರನಟ ಹರೀಶ್ ರೈ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸುಜುಕಿ ಹಯಾಟೆ ಬೈಕನ್ನು ಬಟನ್ ಮೂಲಕ ಸ್ಟಾರ್ಟ್ ಮಾಡಬಹುದಾಗಿದೆ. ಹಯಾಟೆ ನಾಲ್ಕು ಸ್ಟ್ರೋಕಿನ 112.8 ಸಿಸಿಯ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ನಾಲ್ಕು ಸ್ಪೀಡಿನ ಗೇರ್ ಹೊಂದಿದೆ. ಎಲ್ಲಾ ಗೇರುಗಳನ್ನೂ ಕೆಳಮುಖವಾಗಿ ಶಿಫ್ಟ್ ಮಾಡಬೇಕು. ಈ 110 ಸಿಸಿಯ ಬೈಕ್ 8 ಲೀಟರಿನ ಇಂಧನ ಟ್ಯಾಂಕ್ ಹೊಂದಿದೆ.
ದೇಶದ ರಸ್ತೆಗೆ ಹಯಾಟೆ ಹೊಚ್ಚ ಹೊಸ ಹೆಸರು. ಹಯಾಟೆ ಎಂದರೆ ಫ್ರೆಷ್ ಬ್ರೀಝ್ ಅಥವಾ ತಾಜಾ ತಂಗಾಳಿ ಎಂದರ್ಥ. ಹಯಾಟೆಯು ಸುಜುಕಿ ಸ್ಲಿಂಗ್ ಶಾಟ್ ಬೈಕಿಗಿಂತ ಸಣ್ಣ ಬೈಕಾಗಿದೆ. ಸುಜುಕಿ ಹಯಾಟೆ ಬೈಕ್ ಪ್ರತಿಲೀಟರ್ ಪೆಟ್ರೋಲಿಗೆ ಸುಮಾರು 60 ಕಿ.ಮೀ. ಮೈಲೇಜ್ ನೀಡುತ್ತದೆ.
ಸುಜುಕಿ ಕಂಪನಿಯು ಇತ್ತೀಚೆಗೆ ಹಯಾಟೆ ಬೈಕಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ರಾಯಭಾರಿಯಾಗಿ ನೇಮಕ ಮಾಡಿದೆ. ಕಂಪನಿಯು ದೇಶದಲ್ಲಿ ಪ್ರಪ್ರಥಮ ಬಾರಿಗೆ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬ್ರಾಂಡ್ ರಾಯಭಾರಿಯೊಬ್ಬರನ್ನು ನೇಮಕ ಮಾಡಿಕೊಂಡಿರುವುದು ವಿಶೇಷ.
"ದೇಶದಲ್ಲಿ 100ರಿಂದ 110 ಸಿಸಿ ಬೈಕುಗಳಿಗೆ ಅತ್ಯುತ್ತಮ ಅವಕಾಶವಿದೆ. ಇಲ್ಲಿನ ದ್ವಿಚಕ್ರ ಮಾರುಕಟ್ಟೆಯಲ್ಲಿ ಹಯಾಟೆ ಹೊಸ ಅವಕಾಶವನ್ನು ಬಳಸಿಕೊಳ್ಳಲಿದೆ. ಕಂಪನಿಯು ನೂತನ ಬೈಕನ್ನು ನಗರ, ಸಣ್ಣಪಟ್ಟಣಗಳಿಗೂ ಪರಿಚಯಿಸಲಿದೆ" ಎಂದು ಕಾರ್ಯಕ್ರಮದಲ್ಲಿ ಕಂಪನಿಯ ಉಪಾಧ್ಯಕ್ಷರಾದ ಅತುಲ್ ಗುಪ್ತಾ ಹೇಳಿದ್ದಾರೆ.
ಸುಜುಕಿ ಹಯಾಟೆ ಬೆಂಗಳೂರು ಎಕ್ಸ್ ಶೋರೂಂ ದರ 42,590 ರುಪಾಯಿ.


Click it and Unblock the Notifications









