ರಾಜ್ಯದಲ್ಲಿ ಟ್ರಯಂಪ್ ಬೈಕ್ ಫ್ಯಾಕ್ಟರಿ ನಿರ್ಮಾಣವಾಗುತ್ತ?
ಬ್ರಿಟನಿನ ಐಕಾನಿಕ್ ಬೈಕ್ ಬ್ರಾಂಡ್ "ಟ್ರಯಂಪ್ ಮೋಟರ್ ಸೈಕಲ್" ದೇಶದಲ್ಲಿ ಫ್ಯಾಕ್ಟರಿ ಕಟ್ಟಲು ಯೋಜಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದಕ್ಕಾಗಿ ರಾಜ್ಯದ ನರ್ಸಪುರದಲ್ಲಿ ಭೂಮಿಯನ್ನೂ ಗುರುತಿಸಿತ್ತು. ಈ ಕುರಿತು ಕಂಪನಿಯು ರಾಜ್ಯ ಸರಕಾರದೊಂದಿಗೆ ಆರಂಭಿಕ ಒಡಂಬಡಿಕೆಯನ್ನೂ ಮಾಡಿಕೊಂಡಿತ್ತು.
ಕಂಪನಿಯು ನರ್ಸಪುರವನ್ನು ಪ್ರಾಥಮಿಕ ಆಯ್ಕೆಯಾಗಿ ಪರಿಗಣಿಸಿದೆ. ಹೀಗಾಗಿ ಇಲ್ಲಿ ಘಟಕ ಕಟ್ಟುವುದು ಬಹುತೇಕ ಖಚಿತ ಎಂದು ವರದಿಗಳು ಹೇಳಿವೆ. ಬೆಂಗಳೂರಿನಿಂದ ಸುಮಾರು 52 ಕಿ.ಮೀ. ದೂರದ ನರ್ಸಪುರ(ಕೋಲಾರ ಹತ್ತಿರ)ವು ಚೆನ್ನೈ ಬಂದರಿನಲ್ಲಿ ಸಮೀಪವಾಗಿರುವುದು ಕೂಡ ಪ್ರಮುಖ ಕಾರಣವಾಗಿದೆ.
ಘಟಕ ನಿರ್ಮಾಣಕ್ಕಾಗಿ ಕಂಪನಿಗೆ ಸುಮಾರು 30 ಎಕರೆ ಭೂಮಿ ಅವಶ್ಯಕತೆಯಿದೆಯಂತೆ. ಕಂಪನಿಯು ಎರಡು ಹಂತದಲ್ಲಿ ಘಟಕ ನಿರ್ಮಿಸಲು ಯೋಜಿಸಿದೆ. ಆರಂಭದ ಹಂತದ ಘಟಕವು ವಾರ್ಷಿಕ 2.5 ಲಕ್ಷ ಬೈಕ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ ಎಂದು ಮೂಲಗಳು ಹೇಳಿವೆ.
ದೇಶದ ವಹಿವಾಟಿಗಾಗಿ ಕಂಪನಿಯು ಸುಮಾರು 850 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ. ಹೂಡಿಕೆ ಮತ್ತು ಭೂಹಂಚಿಕೆ ಕುರಿತಾಗಿ ಕಂಪನಿಯು ರಾಜ್ಯ ಸರಕಾರದೊಂದಿಗೆ ಎಂಒಯು ಒಪ್ಪಂದಕ್ಕೆ ಸಹಿಹಾಕಿದೆ. ನೂತನ ಘಟಕ 2015ಕ್ಕೆ ಉತ್ಪಾದನೆ ಆರಂಭಿಸುವ ನಿರೀಕ್ಷೆಯಿದೆ.
ವಿಶೇಷವೆಂದರೆ ಕೋಲಾರ ಸಮೀಪದ ನರ್ಸಪುರವೂ ವಾಹನ ಕಂಪನಿಗಳನ್ನು ಸೆಳೆಯುತ್ತಿದೆ. ಇಲ್ಲಿ ಈಗಾಗಲೇ ಹೋಂಡಾ ಕಂಪನಿಯು ಘಟಕ ನಿರ್ಮಿಸುತ್ತಿದೆ. ಕೋಲಾರದಲ್ಲಿ ನಿರ್ಮಿಸಲಿರುವ ಘಟಕವು ಇಂಗ್ಲೆಂಡ್ ಮತ್ತು ಥೈಲಾಂಡ್ ನಂತರದ ಮೂರನೇ ಅಸೆಂಬ್ಲಿ ಘಟಕವಾಗಿದೆ. ಘಟಕ ನಿರ್ಮಾಣವಾಗಿ ಉತ್ಪಾದನೆ ಆರಂಭವಾದ ನಂತರ ದೇಶದಲ್ಲಿ ಟ್ರಯಂಪ್ ಬೈಕುಗಳ ದರ ಕಡಿಮೆಯಾಗಲಿದೆ.


Click it and Unblock the Notifications









