ತೆರೆಮರೆಯಲ್ಲಿ ನಡೆಯುತ್ತಿದೆ ಪಲ್ಸರ್ ಶಕ್ತಿಶಾಲಿ ಬೈಕ್ ಟೆಸ್ಟಿಂಗ್!
ನಾವು ಈಗಾಗಲೇ ತಿಳಿಸಿರುವಂತೆಯೇ ದೇಶದ ಅತಿ ನಂ.1 ಕ್ರೀಡಾ ಬಳಕೆಯ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆ ಬಜಾಜ್ ಆಟೋ, ತನ್ನ ಜನಪ್ರಿಯ ಪಲ್ಸರ್ ಶ್ರೇಣಿಯ ಶಕ್ತಿಶಾಲಿ ಬೈಕ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.
ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಬಜಾಜ್ ಪಲ್ಸರ್ 400 ಸಿಸಿ ಬೈಕ್‌ನ ಸಂಚಾರ ಪ್ರಯೋಗವು ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ. ಇದು ನಿಕಟ ಭವಿಷ್ಯದಲ್ಲೇ ಪಲ್ಸರ್ ಸಿಎಸ್400 ಮಾರುಕಟ್ಟೆಗೆ ಪ್ರವೇಶಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿರೀಕ್ಷೆಯನ್ನುಂಟು ಮಾಡಿದೆ.

ಟೆಸ್ಟಿಂಗ್ ಹಂತದಲ್ಲಿರುವ ಬಜಾಜ್ ಸಿಎಸ್400 ಬೈಕನ್ನು ಸಂಪೂರ್ಣವಾಗಿ ಮರೆಮಾಚುವ ಪ್ರಯತ್ನ ಮಾಡಲಾಗಿತ್ತು. ಈ ಮುಖಾಂತರ ಸಂಸ್ಥೆಯು ರಹಸ್ಯತನವನ್ನು ಕಾಪಾಡಿಕೊಂಡಿದೆ.

ಕಾನ್ಸೆಪ್ಟ್ ಬೈಕ್ ನಲ್ಲಿರುವುದಕ್ಕೆ ಸಮಾನವಾದ ರೀತಿಯಲ್ಲಿ ಸ್ಟೈಲಿಷ್ ಹೆಡ್ ಲ್ಯಾಂಪ್, ದೊಡ್ಡದಾದ ಇಂಧನ ಟ್ಯಾಂಕ್, ಇಬ್ಬರಿಗೆ ಸಂಚರಿಸಬಹುದಾದ ಸೀಟು ಮತ್ತು ಟ್ವಿನ್ ಟೈಲ್ ಲ್ಯಾಂಪ್ ಗಳು ಕಂಡುಬಂದಿದೆ.

ಟೆಸ್ಟಿಂಗ್ ಹಂತದಲ್ಲಿರುವ ಪಲ್ಸರ್ ಇನ್ವರ್ಟಡ್ ಸಸ್ಪೆನ್ಷನ್ ಮತ್ತು ಮೊನೊಶಾಕ್ ರಿಯರ್ ಸಸ್ಪೆನ್ಷನ್ ಗಿಟ್ಟಿಸಿಕೊಂಡಿದೆ.

ನೂತನ ಬೈಕ್ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡಿಸ್ಕ್ ಬ್ರೇಕ್ ಜೊತೆಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ವ್ಯವಸ್ಥೆಯೂ ಇರುತ್ತದೆ.

373.2 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ನೂತನ ಪಲ್ಸರ್ 35 ಎನ್ ಎಂ ತಿರುಗುಬಲದಲ್ಲಿ 44.4 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಪ್ರಸಕ್ತ ಸಾಲಿನಲ್ಲೇ ಬಿಡುಗಡೆ ನಿರೀಕ್ಷೆ ಹೊಂದಿರುವ ನೂತನ ಪಲ್ಸರ್ ಈ ಶ್ರೇಣಿಯಲ್ಲಿರುವ ಕೆಟಿಎಂ 390 ಡ್ಯೂಕ್, ಬೆನೆಲ್ಲಿ ಟಿಎನ್ ಟಿ300 ಮತ್ತು ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಇಲ್ಲಿ ಪಲ್ಸರ್ 'ಸಿಎಸ್' ಎಂಬುದು ಕ್ರೂಸರ್ ಸ್ಪೋರ್ಟ್ ಎಂಬುದನ್ನು ಸೂಚಿಸುತ್ತದೆ. ಅಂತೆಯೇ 400 ಎಂಬುದು ಎಂಜಿನ್ ಸಾಮರ್ಥ್ಯವನ್ನು ಬಿಂಬಿಸಲಿದೆ.

ನೂತನ ಪಲ್ಸರ್ ಸಿಎಸ್400 ಬೈಕ್ ನಲ್ಲಿ ಕೆಟಿಎಂ ಡ್ಯೂಕ್ 390ಗೆ ಸಮಾನವಾದ ಎಂಜಿನ್ ಬಳಕೆಯಾಗಲಿದೆ. ನೀವಿಲ್ಲಿ ಕೆಟಿಎಂ ಜೊತೆಗಿನ ಬಜಾಜ್ ಪಾಲುದಾರಿಕೆಯನ್ನು ನೆನಪಿಸಿಕೊಳ್ಳಬಹುದಾಗಿದೆ.
Image Credit: technwheelz


Click it and Unblock the Notifications








