ಪ್ರಸಕ್ತ ತಿಂಗಳಲ್ಲೇ ಬಜಾಜ್ ಕ್ರೆಟೊಸ್ ವಿಎಸ್400 ಕ್ರೀಡಾ ಬೈಕ್ ಲಾಂಚ್!
ಪಲ್ಸರ್ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಗಳ ಯಶಸ್ಸಿನ ಬಳಿಕವೀಗ ದೇಶದ ನಂ.1 ಸ್ಪೋರ್ಟ್ ಬೈಕ್ ನಿರ್ಮಾಣ ಸಂಸ್ಥೆಯಾಗಿರುವ ಬಜಾಜ್ ಆಟೋ, ಕ್ರೆಟೊಸ್ ವಿಎಸ್400 ಮುಖಾಂತರ ನಿರ್ವಹಣಾ ಬೈಕ್ ಗಳ ವಿಭಾಗದತ್ತವೂ ನೋಟ ಹಾಯಿಸಿದೆ.
ಬಹುನಿರೀಕ್ಷಿತ ಬಜಾಜ್ ಕ್ರೆಟೊಸ್ ವಿಎಸ್400 ಸಿಸಿ ಕ್ರೀಡಾ ಬೈಕ್ ಪ್ರಸಕ್ತ ನವೆಂಬರ್ ತಿಂಗಳಿನಲ್ಲೇ ಬಿಡುಗಡೆಯಾಗಲಿದ್ದು, ಡಿಸೆಂಬರ್ ನಿಂದ ವಿತರಣೆ ಪ್ರಕ್ರಿಯೆಗೆ ಚಾಲನೆ ದೊರಕಲಿದೆ. ಈ ಹಿಂದೆ ಪಲ್ಸರ್ ಸಿಎಸ್400 ಎಂದು ಹೆಸರಿಸಿಕೊಂಡಿದ್ದ ಬಜಾಜ್ ಕ್ರೆಟೊಸ್ ಈಗಾಗಲೇ ಡೀಲರ್ ನತ್ತ ಪ್ರಯಾಣ ಬೆಳೆಸಿದೆ ಎಂಬುದನ್ನು ಮೂಲಗಳು ಖಚಿತಪಡಿಸಿದೆ.

2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಬಜಾಜ್ ಪಲ್ಸರ್ ಸಿಎಸ್400 ಕಾನ್ಸೆಪ್ಟ್ ಬೈಕೀಗ ಬಜಾಜ್ ಕ್ರೆಟೊಸ್ ವಿಎಸ್400 ಎಂಬುದಾಗಿ ನಿರ್ಮಾಣ ಹಂತವನ್ನು ತಲುಪಿದೆ.

ಈ ನಡುವೆ ಟೆಸ್ಟಿಂಗ್ ಹಂತದಲ್ಲಿರುವಾಗ ನೂತನ ಕ್ರೆಟೊಸ್ ಬೈಕ್ ನ ರಹಸ್ಯ ಚಿತ್ರಗಳು ಅನೇಕ ಬಾರಿ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿದ್ದವು.

ಕೆಟಿಎಂ ಡ್ಯೂಕ್ 390 ಬೈಕ್ ನಲ್ಲಿರುವದಕ್ಕೆ ಸಮಾನವಾದ 373.27 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ಬಜಾಜ್ ಕ್ರೆಟೊಸ್ ವಿಎಸ್400, 34.50 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇನ್ನು ಕೆಟಿಎಂನಲ್ಲಿರುವುದಕ್ಕೆ ಸಮಾನವಾದ ಸ್ಲಿಪರ್ ಕ್ಲಚ್ ಗಿಟ್ಟಿಸಿಕೊಳ್ಳಲಿರುವ ಕ್ರೆಟೊಸ್ ವಿಎಸ್400, ಆರು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಸ್ಲಿಪ್ಪರ್ ಕ್ಲಚ್ ವ್ಯವಸ್ಥೆಯನ್ನು ಪ್ರಮುಖವಾಗಿಯೂ ನಿರ್ವಹಣಾ ಬೈಕ್ ಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಕ್ಲಚ್ ಬದಲಾಯಿಸುವಾಗ ಎಂಜಿನ್ ನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಆದರೆ ಕಾನ್ಸೆಪ್ಟ್ ಬೈಕ್ ನಲ್ಲಿ ಕಂಡುಬಂದಿರುವ ಅಪ್ ಸೈಡ್ ಡೌನ್ ಫಾರ್ಕ್ ಗಳ ಬದಲಾಗಿ ನೂತನ ಕ್ರೆಟೊಸ್ ವಿಎಸ್400 ಬೈಕ್ ನಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಜೋಡಿಸಲಾಗುವುದು.

ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್, ಡ್ಯುಯಲ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಇತ್ಯಾದಿ ವ್ಯವಸ್ಥೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ ಇಡಿ ಟೈಲ್ ಲೈಟ್ಸ್, ಸೆಲ್ಫ್ ಕ್ಯಾನ್ಸಲಿಂಗ್ ಟರ್ನ್ ಸಿಗ್ನಲ್ ಮುಂತಾದ ವಿಶಿಷ್ಟತೆಗಳನ್ನು ಪಡೆಯಲಿದೆ.

ಅಂತಿಮವಾಗಿ ಬಜಾಜ್ ಕ್ರೆಟೊಸ್ ವಿಎಸ್400 ಬೈಕ್ ಮಾರುಕಟ್ಟೆಯಲ್ಲಿ 1.6 ಲಕ್ಷ ರು.ಗಳಿಂದ 1.7 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಹೆಸರಲ್ಲೇನಿದೆ ?
ಕ್ರೆಟೊಸ್ ವಿಎಸ್400 ಎಂಬುದು 'ವ್ಯಾಂಟೇಜ್ ಸ್ಪೋರ್ಟ್' ಎಂಬ ಅರ್ಥವನ್ನು ನೀಡುತ್ತದೆ. ಇದಕ್ಕೂ ಮೊದಲು ಸಿಎಸ್ ಸ್ಪೋರ್ಟ್ ಅಥವಾ ಕ್ರೂಸರ್ ಸ್ಪೋರ್ಟ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತ್ತು. ಕ್ರೆಟೊಸ್ ಎಂಬುದು ಗ್ರೀಕ್ ಯುದ್ಧ ದೇವತೆಯ ಸೂಚಕವಾಗಿದ್ದು, ಶಕ್ತಿ, ಸಾರ್ವಭೌಮ, ಅಧಿಕಾರದ ವ್ಯಕ್ತೀಕರಣದ ಸಂಕೇತವಾಗಿದೆ.


Click it and Unblock the Notifications








