16ರ ಹರೆಯದವರಿಗೂ ಗೇರ್ ಲೆಸ್ ಸ್ಕೂಟರ್ ಲೈಸನ್ಸ್?
ವಾಹನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುಂದಾಗುತ್ತಿರುವ ಕೇಂದ್ರ ಸರಕಾರವು, ಈಗಿರುವ 18 ವರ್ಷದ ಬದಲಾಗಿ 16ರ ಹರೆಯದವರಿಗೂ ಗೇರ್ ಲೆಸ್ ಸ್ಕೂಟರ್ ಲೈಸನ್ಸ್ ನೀಡುವ ಕುರಿತಾಗಿ ಚಿಂತನೆ ನಡೆಸುತ್ತಿದೆ.
ಈ ಸಂಬಂಧ ಲೋಕಸಭೆಯಲ್ಲಿ ನಡೆಯುತ್ತಿರುವ ಪ್ರಶ್ನೋತ್ತರ ಅವಧಿಯ ವೇಳೆಯಲ್ಲಿ ಪ್ರತಿಕ್ರಿಯಿಸಿರುವ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ರಾಜ್ಯ ಸಚಿವ ಪೊನ್ ರಾಧಾಕೃಷ್ಣನ್, ಸಚಿವರ ತಂಡವೊಂದು ಹೊಸ ಪ್ರಸ್ತಾವನೆಯನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

16ರ ಹರೆಯದವರೂ 100 ಸಿಸಿ ಎಂಜಿನ್ ಸಾಮರ್ಥ್ಯಕ್ಕೂ ಕೆಳಗಡೆಯ ಗೇರ್ ಲೆಸ್ ಸ್ಕೂಟರ್ ಓಡಿಸಲು ಚಾಲನಾ ಪರವಾನಗಿ ಅನುವು ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇದೇ ಸಂದರ್ಭದಲ್ಲಿ ಮಾತು ಮುಂದುವರಿಸಿರುವ ಸಚಿವರು, ವಾಹನಗಳಲ್ಲಿ ವೇಗ ಮಿತಿ ಉಪಕರಣವನ್ನು ಜೋಡಣೆ ಮಾಡುವುದರ ಕುರಿತಾಗಿಯೂ ಚರ್ಚೆಗಳು ನಡೆಯುತ್ತಿದೆ ಎಂದಿದ್ದಾರೆ.

ನಿರ್ದಿಷ್ಟ ವಿಭಾಗದ ಸಾರಿಗೆ ವಾಹನಗಳಿಗೆ ಗರಿಷ್ಠ ವೇಗಮಿತಿಯನ್ನು ಪ್ರತಿ ಗಂಟೆಗೆ 80 ಕೀ.ಮೀ. ಮೀರದಂತೆ ಸ್ಪೀಡ್ ಲಿಮಿಟ್ ಉಪಕರಣವನ್ನು ಜೋಡಿಸಲಾಗುವುದು.

ಈ ಸಂಬಂಧ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಿರುವುದನ್ನು ಸಚಿವರು ಖಚಿತಪಡಿಸಿದ್ದಾರೆ. ಆದರೆ ಈ ವಿಭಾಗದಲ್ಲಿ ಯಾವೆಲ್ಲ ವಾಹನಗಳು ಕಾಣಿಸಿಕೊಳ್ಳಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಸದ್ಯ ಮಾರುಕಟ್ಟೆಯಲ್ಲಿ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಮಾತ್ರ 100 ಸಿಸಿ ಎಂಜಿನ್ ಸಾಮರ್ಥ್ಯದ ಒಳಗಡೆ ಲಭ್ಯವಿರುವ ಸ್ಕೂಟರ್ ಆಗಿದೆ. ಹೊಸ ಲೈಸನ್ಸ್ ನಿಯಮ ಜಾರಿಗೆ ಬಂದ್ದಲ್ಲಿ ಮತ್ತಷ್ಟು ದ್ವಿಚಕ್ರ ಸಂಸ್ಥೆಗಳು ಈ ವಿಭಾಗದಲ್ಲಿ ಹೆಚ್ಚೆಚ್ಚು ಸ್ಕೂಟರ್ ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

16 ವರ್ಷದವರಿಗೆ ಚಾಲನಾ ಪರವಾನಗಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಶ್ನೆಯ ವಿಚಾರವಾಗಿದೆ. ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








