ಸುಜುಕಿ ಜಿಕ್ಸರ್ ಕಣಕ್ಕೆ; ಇದೇನಾ ಶ್ರೇಷ್ಠ 250 ಸಿಸಿ ಬೈಕ್ ?
250 ಸಿಸಿ ವಿಭಾಗಕ್ಕೆ ಹೊಸ ಆಯಾಮ ನೀಡಲು ಮುಂದಾಗಿರುವ ಜಪಾನ್ ಮೂಲದ ಸುಜುಕಿ ಮೋಟಾರ್ ಸೈಕಲ್ ಸಂಸ್ಥೆಯು ಅತಿ ನೂತನ ಜಿಕ್ಸರ್ 250 ಸಿಸಿ ಬೈಕ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.
ಯುವ ಜನಾಂಗದ ನಡುವೆ 250 ಸಿಸಿ ಬೈಕ್ ಗಿರುವ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಶಕ್ತಿಶಾಲಿ ಜಿಕ್ಸರ್ ಬೈಕ್ ಬಿಡುಗಡೆ ಮಾಡಲು ಸುಜುಕಿ ಸಜ್ಜಾಗುತ್ತಿದೆ. ಸಂಸ್ಥೆಯ ಜನಪ್ರಿಯ ಜಿಕ್ಸರ್ 150 ಸಿಸಿ ಈಗಾಗಲೇ ಮಾರಾಟದಲ್ಲಿದ್ದು, ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ.

ಸುಜುಕಿ ರೇಸ್ ಬೈಕಾಗಿರುವ ಜಿಎಸ್ ಎಕ್ಸ್ ಆರ್-1000 ನಿಂದ ಸ್ಪೂರ್ತಿ ಪಡೆದುಕೊಂಡು ಹಾಗೂ ಅಗತ್ಯ ವಿನ್ಯಾಸ ಬದಲಾವಣೆಯೊಂದಿಗೆ ಜಿಕ್ಸರ್ 250 ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ದೊಡ್ಡದಾದ ಇಂಧನ ಟ್ಯಾಂಕ್ ಜೊತೆಗೆ ವಿಭಜಿತ ಸೀಟುಗಳು ಪ್ರಮುಖ ಆಕರ್ಷಣೆಯಾಗಿದ್ದು, ಲಂಬವಾಗಿರುವ ಡ್ಯುಯಲ್ ಎಕ್ಸಾಸ್ಟ್ ಕೊಳವೆಗಳನ್ನು ಕೊಡಲಾಗಿದೆ.

ನೂತನ ಸುಜುಕಿ ಜಿಕ್ಸರ್ 250, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಸಸ್ಪೆನ್ಷನ್ ವ್ಯವಸ್ಥೆಯನ್ನು ಗಮನಕ್ಕೆ ತೆಗೆದುಕೊಂಡಾಗ ಸ್ಟ್ಯಾಂಡರ್ಡ್ ಟೆಲಿಸ್ಕಾಪಿಕ್ ಫಾರ್ಕ್ ಮತ್ತು ಮೊನೊಶಾಕ್ ರಿಯರ್ ಸಸ್ಪೆನ್ಷನ್ ಗಳಿರಲಿದೆ.

ಅಂತೆಯೇ ಸುರಕ್ಷತೆಗೂ ಆದ್ಯತೆ ಕೊಡಲಾಗುತ್ತಿದ್ದು, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಗಳ ಜೊತೆಗೆ ಐಚ್ಛಿಕ ಎಬಿಎಸ್ ಆಯ್ಕೆಯೂ ಇರುತ್ತದೆ.

ಒಟ್ಟಿನಲ್ಲಿ ಸುಜುಕಿ ಜಿಕ್ಸರ್ 250 ಆಗಮನವನ್ನು ಕ್ರೀಡಾ ಪ್ರೇಮಿಗಳು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದು, ಹೋಂಡಾ ಸಿಬಿಆರ್250ಆರ್ ಮತ್ತು ಮಹೀಂದ್ರ ಮೊಜೊ ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಜಿಕ್ಸರ್ ಮತ್ತು ಸಂಪೂರ್ಣ ಫೇರ್ಡ್ ವರ್ಷನ್ ಆಗಿರುವ ಜಿಕ್ಸರ್ ಎಸ್ ಎಫ್ ಈಗ ಮಾರಾಟದಲ್ಲಿದೆ. ಇವೆರಡು 155 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 14 ಎಎನ್ ಎಂ ತಿರುಗುಬಲದಲ್ಲಿ 14.6 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.


Click it and Unblock the Notifications








