ಹೊಸ ಬೈಕಿನ ಎಂಜಿನ್ ಸೌಂಡ್ ಟೀಸರ್ ಬಿಡುಗಡೆ ಮಾಡಿದ ಜಾವಾ..!
ಜಾವಾ ಮೋಟಾರ್‌ಸೈಕಲ್ ಸಂಸ್ಥೆಯು ಇದೇ ತಿಂಗಳು 15ರಂದು ತನ್ನ ಹೊಚ್ಚ ಹೊಸ ಬೈಕ್ ಮಾದರಿಗಳನ್ನು ಭಾರತದಲ್ಲಿ ಅನಾವರಣ ಮಾಡುತ್ತಿದ್ದು, ಇದಕ್ಕೂ ಮುನ್ನ ಹೊಸ ಬೈಕ್ ಎಂಜಿನ್ ಸೌಂಡ್ ಕುರಿತಾದ ಟೀಸರ್ ಒಂದನ್ನು ಬಿಡುಗಡೆ ಮಾಡಿ ರಾಯಲ್ ಎನ್‌ಫೀಲ್ಡ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದೆ.

ಡ್ರೈವ್‌ಸ್ಪಾರ್ಕ್ ತಂಡವು ಕಳೆದ ಒಂದು ತಿಂಗಳಿನಿಂದ ಹೊಸ ಜಾವಾ ಬೈಕ್‌ಗಳ ಬಿಡುಗಡೆಯ ಕುರಿತಾಗಿ ಹಲವು ವರದಿಗಳನ್ನು ನೀಡುತ್ತಲೇ ಇದ್ದೇವೆ. ಭಾರತದಲ್ಲಿ ಜಾವಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಒಟ್ಟು ನಾಲ್ಕು ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಿದ್ದಗೊಂಡಿದ್ದು, ಅದಕ್ಕೂ ಮುನ್ನ ಬೈಕಿನ ಎಂಜಿನ್ ಪರ್ಫಾಮೆನ್ಸ್ ಸೌಂಡ್ ಕುರಿತಾದ ಟೀಸರ್ ಬಿಡುಗಡೆ ಮಾಡಿರುವುದು ಜಾವಾ ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ರಾಯಲ್ ಎನ್‌ಫೀಲ್ಡ್‌ಗೆ ಟಾಂಗ್..!
ಜಾವಾ ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ ಬೈಕಿನ ಎಂಜಿನ್ ಸೌಂಡ್ ಕುರಿತಾದ ಟೀಸರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಂತಲೂ ಉತ್ತಮವಾಗಿದೆ ಎನ್ನುವುದು ಬಹುತೇಕ ಮೋಟಾರ್‌ಸೈಕಲ್ ಪ್ರೇಮಿಗಳ ಅಭಿಪ್ರಾಯ.
ಇನ್ನು ಮಹೀಂದ್ರಾ ಪಾಲುದಾರಿಕೆಯಲ್ಲಿ ಜಾವಾ ಹೊಸ ಬೈಕ್‌ಗಳು ಮರು ಬಿಡುಗಡೆಯಾಗುತ್ತಿದ್ದು, ಬಿಡುಗಡೆಯಾಗಲಿರುವ ಕೆಲವು ಬೈಕ್ ಮಾದರಿಗಳ ಉತ್ಪಾದನಾ ಆವೃತ್ತಿಗಳ ಚಿತ್ರಗಳ ಬಗ್ಗೆ ಡ್ರೈವ್‌ಸ್ಪಾರ್ಕ್ ತಂಡ ಈಗಾಗಲೇ ನಿಮಗೆ ಸಾಕಷ್ಟು ಮಾಹಿತಿ ನೀಡಿದೆ.

ಮಾಹಿತಿಗಳ ಪ್ರಕಾರ, ಜಾವಾ ಹೊಸ ಬೈಕ್‌ಗಳ ಖರೀದಿಗಾಗಿ ಬೆಂಗಳೂರಿನ ಜಾವಾ ಡೀಲರ್‍ಗಳು ಮತ್ತು ಕೆಲವು ಮಹೀಂದ್ರಾ ಡೀಲರ್‌ಗಳಲ್ಲಿ ಅನಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಶುರು ಮಾಡಿದ್ದು, ಆಸಕ್ತ ಗ್ರಾಹಕರು ರೂ. 1 ಸಾವಿರ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಜಾವಾ ಬೈಕ್ ಭಾರತದಲ್ಲಿ ಮರುಬಿಡುಗಡೆಯಾಗುತ್ತೆ ಎಂದಿದ್ದೇ ತಡ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಒಂದು ರೀತಿ ತಳಮಳ ಶುರುವಾಗಿದೆ ಅಂದ್ರೆ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ, ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗಿಂತಾ ಅಂದರೆ ರೂ.1.5 ಲಕ್ಷದ ಪ್ರಾರಾಂಭಿಕ ಬೆಲೆಯಲ್ಲಿ ಬಿಡುಗಡೆಗೊಳಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಷ್ಟು ದಿನಗಳ ಕಾಲ ಹೊಸ ಜಾವಾ ಬೈಕ್ ಮೊದಲಿನ ಗತ್ತು ಪಡೆದುಕೊಂಡಿರುತ್ತೊ ಇಲ್ಲವೋ ಅನ್ನುವ ಗೊಂದಲಗಳಿದ್ದವು. ಆದ್ರೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿರುವ ಹೊಸ ಜಾವಾ ಬೈಕ್‌ಗಳು ಆರ್‌ಇ ಬೈಕ್‌ಗಳನ್ನೇ ಟಾರ್ಗೆಟ್ ಮಾಡಿರುವುದು ಸ್ಪಷ್ಟವಾಗಿದೆ.

ಜಾಗತಿಕವಾಗಿ ಬೈಕ್ ಮಾರಾಟದಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯು ಭಾರತದಲ್ಲಿ ಮಹೀಂದ್ರಾ ಕೈಜೋಡಿಸುವ ಮೂಲಕ ಕ್ಲಾಸಿಕ್ ಬೈಕ್ ಉತ್ಪಾದನೆಗೆ ಹೊಸ ಯೋಜನೆ ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್ಎ ಸಂಸ್ಥೆಯ ಪಾಲುದಾರ ಸಂಸ್ಥೆಯಾದ ಜಾವಾ ಬೈಕ್‌ಗಳಿಗೆ ಮರುಜೀವ ತುಂಬುವ ಜವಾಬ್ದಾರಿ ಇದೀಗ ಮಹೀಂದ್ರಾ ಮೇಲಿದೆ.

ಭಾರತದಲ್ಲಿ 80ರ ದಶಕದಲ್ಲಿ ತನ್ನದೆ ಆದ ಜನಪ್ರಿಯತೆ ಸಾಧಿಸಿ ಕ್ಲಾಸಿಕ್ ಬೈಕ್ ಪ್ರಿಯರ ಕ್ರೇಜ್‌ಗೆ ಕಾರಣವಾಗಿದ್ದ ಜಾವಾ ಸಂಸ್ಥೆಯು ತದನಂತರದ ದಿನಗಳಲ್ಲಿ ಭಾರೀ ನಷ್ಟ ಅನುಭವಿಸುವ ಮೂಲಕ ಮಾರುಕಟ್ಟೆಯಿಂದಲೇ ನಿರ್ಗಮಿಸಿತ್ತು.
MOST READ: ಹೋಂಡಾ ಆಕ್ಟೀವಾ ಸ್ಕೂಟರ್‌ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!

ಆ ಬಳಿಕ ಬಿಎಸ್ಎ ಮೋಟಾರ್ ಸೈಕಲ್ ಸಂಸ್ಥೆಯ ಪಾಲಾಗಿದ್ದ ಜಾವಾ ಸಂಸ್ಥೆಯು ವಿವಿಧ ಮಾದರಿಯ ಬೈಕ್‌ಗಳನ್ನು ನಿರ್ಮಿಸಿದ್ದರೂ ಯಾವುದೇ ಸಂಚಲನ ಮೂಡಿಸಲಿಲ್ಲ. ಇದಾದ ನಂತರ 2016ರಲ್ಲಿ ಬಿಎಸ್ಎ ಸಂಸ್ಥೆಯಲ್ಲಿ ಮಹೀಂದ್ರಾ ಸಂಸ್ಥೆಯು ಪಾಲು ಹೊಂದುವ ಮೂಲಕ ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಈ ಹಿಂದಿನ ಜಾವಾ ಬೈಕ್ ವಿನ್ಯಾಸಗಳಲ್ಲೇ ಕೆಲವು ಅತ್ಯಾಧುನಿಕ ಡಿಸೈನ್ ಶೈಲಿಯನ್ನು ನೀಡಿರುವ ಮಹೀಂದ್ರಾ ಸಂಸ್ಥೆಯು ಮೂಲ ಬೈಕ್‌ಗಳ ವಿನ್ಯಾಸಕ್ಕೆ ಯಾವುದೇ ಧಕ್ಕೆ ಬರದಂತೆ ಹೊಸ ಫೀಚರ್ಸ್ ನೀಡಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇದು ಭಾರೀ ಪೈಪೋಟಿ ನೀಡಲಿದೆ.

ಹೊಸ ಬೈಕ್‌ಗಳ ಎಂಜಿನ್ ವೈಶಿಷ್ಟ್ಯ
ಜಾವಾ ಹೊಸ ಬೈಕ್‌ಗಳು ಬಿಎಸ್- 6 ವೈಶಿಷ್ಟ್ಯತೆಯುಳ್ಳ 300ಸಿಸಿ ಮತ್ತು 350ಸಿಸಿ ಸಿಂಗಲ್ ಸಿಲಿಂಡರ್ (ಡ್ಯುಯಲ್ ಹೆಡ್ ಕ್ಯಾಮ್) ಎಂಜಿನ್ ಜೋಡಣೆ ಮಾಡಲಿದೆ ಎನ್ನಲಾಗಿದ್ದು, ಇದೇ ತಿಂಗಳು 15ರಂದು ಈ ಕುರಿತು ಸಂಪೂರ್ಣ ಮಾಹಿತಿ ಅನಾವರಣಗೊಳ್ಳಲಿದೆ.
MOST READ: ಭಾರತದ ಐಫೆಲ್ ಟವರ್ ಖ್ಯಾತಿಯ ಸಿಗ್ನೇಚರ್ ಸೇತುವೆಯ ಸ್ಪೆಷಾಲಿಟಿ ಏನು ಗೊತ್ತಾ?

ಜೊತೆಗೆ ಮಾರ್ಡನ್ ರೆಟ್ರೋ ಲುಕ್ ಪಡೆದುಕೊಳ್ಳಲಿರುವ ಜಾವಾ ಬೈಕ್‌ಗಳಲ್ಲಿ ಸವಾರರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಇವು 300ಸಿಸಿ ಬೈಕ್ ವಿಭಾಗದಲ್ಲೇ ವಿಶೇಷ ಎನ್ನಿಸುವ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲಿವೆ.

ಬೈಕ್ ಬೆಲೆ (ಅಂದಾಜು)
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗಳನ್ನೇ ಪ್ರಮುಖ ಪ್ರತಿಸ್ಪರ್ಧಿಯಾಗಿಸಿಕೊಂಡಿರುವ ಮಹೀಂದ್ರಾ ಸಂಸ್ಥೆಯು ಹೊಸ ಜಾವಾ ಬೈಕ್‌ಗಳ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 1.50 ಲಕ್ಷದದಿಂದ ಪ್ರಾರಂಭಿಸುವ ಸಾಧ್ಯತೆಗಳಿವೆ.

ಇಲ್ಲಿ ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಜಾವಾ ಬೈಕ್‌ಗಳಿಗೆ ಸಿದ್ದಗೊಳಿಸಲಾಗಿರುವ ಹೊಸ ಎಂಜಿನ್ ಹೋಲಿಕೆಯು ಸದ್ಯ ಮೊಜೊ ಎಕ್ಸ್‌ಟಿ300 ಬೈಕ್‌ಗಳಲ್ಲಿಯೂ ಸಹ ಇದ್ದು, ಹೀಗಾಗಿ ಬೈಕ್ ಬೆಲೆಗಳು ರೂ.1.50 ಲಕ್ಷ ದಾಟುವುದಿಲ್ಲ ಎನ್ನಲಾಗಿದೆ.
MOST READ: ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹಾರ್ಲೆ ಡೇವಿಡ್ಸನ್

ಒಟ್ಟಿನಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಖರೀದಿದಾರರಿಗೆ ಪರ್ಯಾಯ ಆಯ್ಕೆಯಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಜಾವಾ ಬೈಕ್‌ಗಳು ಬೆಲೆ ಮತ್ತು ನೀಡುವ ಸೌಲಭ್ಯಗಳ ಆಧಾರದ ಮೇಲೆ ಭವಿಷ್ಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿವೆ.


Click it and Unblock the Notifications