ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ರಿವರ್ಸ್ ಮೋಡ್ ಒದಗಿಸಿದ ಬಜಾಜ್
ಬಜಾಜ್ ಆಟೋ ಸಂಸ್ಥೆಯು ತನ್ನ ಬಹುನೀರಿಕ್ಷಿತ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲು ಭರ್ಜರಿ ಸಿದ್ದತೆ ನಡೆಸಿದ್ದು, ಹೊಸ ಸ್ಕೂಟರ್ ಮಾದರಿಯು ಹಲವಾರು ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಬಜಾಜ್ ಆಟೋ ಸಂಸ್ಥೆಯು 2020ರ ಜನವರಿ ಆರಂಭದಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಯೋಜನೆ ರೂಪಿಸಿದ್ದು, ಇಂದು ನಡೆಯಲಿರುವ ಅನಾವರಣ ಕಾರ್ಯಕ್ರಮದಲ್ಲಿಯೇ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸುವ ಸಾಧ್ಯತೆಗಳಿವೆ. ಗ್ರಾಹಕರ ಬೇಡಿಕೆಯೆಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದು, ಪ್ರೀಮಿಯಂ ಫೀಚರ್ಸ್ ಮತ್ತು ಉತ್ತಮ ಮೈಲೇಜ್‌ನಿಂದಾಗಿ ತುಸು ದುಬಾರಿಯಾಗಿರಲಿದೆ ಎನ್ನಲಾಗಿದೆ.

ಸದ್ಯಕ್ಕೆ ಬಹಿರಂಗಗೊಳ್ಳಲಿರುವ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗಳ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಕೆಲವು ಸುದ್ದಿ ಮೂಲಗಳ ಪ್ರಕಾರ ರೂ.1.05 ಲಕ್ಷದಿಂದ ರೂ.1.15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಯಮಹಾ ಫ್ಯಾಸಿನೊ ಸ್ಟೈಲ್ ಹೊಂದಿದ್ದರು ಫ್ಯಾಸಿನೊಗಿಂತಲೂ ವಿಭಿನ್ನ ತಾಂತ್ರಿಕ ಅಂಶಗಳನ್ನು ಪಡೆದಿರುವ ಹೊಸ ಸ್ಕೂಟರ್ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದೆ.

ಹೊಸ ಸ್ಕೂಟರ್‌ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ಮೆಟಲ್ ಬಾಡಿ ಪ್ಯಾನೆಲ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಕೀ ಲೆಸ್ ಸ್ಟಾರ್ಟ್, ಪ್ರೀಮಿಯಂ ಟಿಪಿಎಫ್ ಯುನಿಟ್‌ನಂತಹ ಹಲವು ಸುಧಾರಿತ ಸೌಲಭ್ಯಗಳನ್ನು ನೀಡಿದ್ದು, ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ರಿವರ್ಸ್ ಮೋಡ್ ಸೌಲಭ್ಯವನ್ನು ನೀಡಿರುವುದು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಿಸಲು ಮತ್ತಷ್ಟು ಸಹಕಾರಿಯಾಗಲಿದೆ. ಈ ಕುರಿತು ಬಜಾಜ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಹೊಸ ಸ್ಕೂಟರ್‌ನಲ್ಲಿ ಪ್ರೀಮಿಯಂ ಫೀಚರ್ಸ್ ಬಗೆಗೆ ಗ್ರಾಹಕರ ಭಾರೀ ಉತ್ಸಕರಾಗಿದ್ದಾರೆ.

ಬ್ಯಾಟರಿ ಸಾಮರ್ಥ್ಯ ಮತ್ತು ಮೈಲೇಜ್
ಇನ್ನು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಜಾಜ್ ಸಂಸ್ಥೆಯು 4kW ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಐಪಿ67 ಪ್ರೇರಣೆಯ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದು, ಪೂರ್ಣ ಪ್ರಮಾಣದ ಚಾರ್ಜಿಂಗ್ ಮಾಡಲು ಕನಿಷ್ಠ 5 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದೆ.

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಗ್ರಾಹಕರ ಬೇಡಿಕೆಯೆಂತೆ ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ನೀಡಿರುವ ಬಜಾಜ್, ಇಕೋನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಗರಿಷ್ಠ ಮೈಲೇಜ್ ಒದಗಿಸಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತೊಂದು ವಿಶೇಷ ಅಂದ್ರೆ, ಹೊಸ ಸ್ಕೂಟರ್‌ನಲ್ಲಿ ಕೀ ಲೆಸ್ ಸ್ಟಾರ್ಟ್ ಸೌಲಭ್ಯ ನೀಡಿರುವ ಬಜಾಜ್ ಸಂಸ್ಥೆಯು ಸ್ಕೂಟರ್ ನಿರ್ವಹಣೆಗಾಗಿ ಪ್ರತ್ಯೇತ ಆ್ಯಪ್ ನೀಡಲಿದ್ದು, ಆ್ಯಪ್ ಮೂಲಕ ಹೊಸ ಸ್ಕೂಟರ್‌ನ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನಿರ್ವಹಣೆ ಮಾಡಬಹುದಾಗಿದೆ.

ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಗರಿಷ್ಠ ಸುರಕ್ಷಾ ಭದ್ರತೆಗಳು ಕೂಡಾ ಇರಲಿದ್ದು, ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳಿರಲಿವೆ.


Click it and Unblock the Notifications