ಮೋಟಾರ್‍ಸ್ಪೋರ್ಟ್ಸ್ ಪ್ರಶಸ್ತಿ ಗೆದ್ದ ಬೆಂಗಳೂರು ಹುಡುಗಿ
ಹುಡುಗಿಯರು ಈಗ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮುಂಬೈನ ಮೆಕಾನಿಕಲ್ ಎಂಜಿನಿಯರ್ ಒಬ್ಬರು ಟ್ರಕ್ ಡ್ರೈವರ್ ಆಗಿ ನೇಮಕವಾಗಿದ್ದು ವರದಿಯಾಗಿತ್ತು.

ಈಗ ನಮ್ಮ ಬೆಂಗಳೂರಿನ ಹುಡುಗಿ ಮೋಟಾರ್ ಸ್ಪೋರ್ಟ್ಸ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಪಟ್ಟ ಗೆದ್ದು ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಹೆಮ್ಮೆ ಮೂಡಿಸಿದ್ದಾರೆ. ಬೆಂಗಳೂರಿನ ಹುಡುಗಿ ಐಶ್ವರ್ಯಾ ಪಿಸ್ಸೆ ವಿಶ್ವ ಚಾಂಪಿಯನ್‍ಶಿಪ್ ಗೆದ್ದ ಹೆಮ್ಮೆಯ ಕನ್ನಡತಿ. ಚಾಂಪಿಯನ್‌ಶಿಪ್‌ನ ಅಂತಿಮ ಸುತ್ತಿನಲ್ಲಿ ಮಹಿಳಾ ವಿಭಾಗದ ಎಫ್‌ಐಎಂ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಭಾರತೀಯ ಆಫ್ ರೋಡ್ ರೇಸರ್ ಐಶ್ವರ್ಯಾ ಪಿಸ್ಸೆ ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ.

ನಾಲ್ಕು ಸುತ್ತಿನ ಚಾಂಪಿಯನ್‌ಶಿಪ್ ಮುಗಿದ ನಂತರ 23 ವರ್ಷದ ಬೆಂಗಳೂರಿನ ಹುಡುಗಿ ಎಫ್‌ಐಎಂ ಜೂನಿಯರ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು. ಪಿಸ್ಸೆರವರು ದುಬೈನಲ್ಲಿ ನಡೆದ ಮೊದಲ ಸುತ್ತಿನಲ್ಲಿ ಜಯಗಳಿಸಿದ್ದರು.

ನಂತರ ಪೋರ್ಚುಗಲ್‍ನಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದರು. ಸ್ಪೇನ್‌ನಲ್ಲಿ ನಡೆದ ಮುಂದಿನ ಸುತ್ತಿನಲ್ಲಿ ಅವರು ಐದನೇ ಸ್ಥಾನಕ್ಕೆ ಕುಸಿದರು. ನಂತರ ಹಂಗೇರಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರು. ಚಾಂಪಿಯನ್‌ಶಿಪ್‌ನ ಅಂತ್ಯದ ವೇಳೆಗೆ, ಐಶ್ವರ್ಯಾರವರು ಒಟ್ಟು 65 ಪಾಯಿಂಟ್‌ಗಳನ್ನು ಗಳಿಸಿದ್ದರು.

ಮಹಿಳೆಯರ ವಿಭಾಗದಲ್ಲಿ ಒಟ್ಟಾರೆಯಾಗಿ ಪೋರ್ಚುಗಲ್‌ನ ರೀಟಾ ವೈರಾಗಿಂತ ನಾಲ್ಕು ಪಾಯಿಂಟ್ ಹೆಚ್ಚು ಪಡೆದರು. ಮತ್ತೊಂದೆಡೆ, ಜೂನಿಯರ್ ವಿಭಾಗದಲ್ಲಿ ಐಶ್ವರ್ಯಾ 46 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಈ ವಿಭಾಗದಲ್ಲಿ ಚಿಲಿಯ ತೋಮಸ್ ಡಿ ಗವರ್ಡೊ 60 ಪಾಯಿಂಟ್‍ಗಳೊಂದಿಗೆ ಮೊದಲ ಸ್ಥಾನ ಪಡೆದರು. ಚಾಂಪಿಯನ್‌ಶಿಪ್‌ನ ಅಂತಿಮ ನಾಲ್ಕನೇ ಸುತ್ತಿನಲ್ಲಿ, ಐಶ್ವರ್ಯಾರವರು, ರೀಟಾ ವೈರಾರಿಂದ ತೀವ್ರ ಪೈಪೋಟಿಯನ್ನು ಎದುರಿಸಿದರೂ ಸಹ 13 ಪಾಯಿಂಟ್‍ಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾದರು.

ವೈರಾ 16 ಪಾಯಿಂಟ್‍ಗಳನ್ನು ಪಡೆದರು. ತಮ್ಮ ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿದ ಐಶ್ವರ್ಯಾ ಪಿಸ್ಸೆರವರು ಮಾತನಾಡಿ, ಈ ಸಾಧನೆಯು ನಂಬಲಸಾಧ್ಯವಾಗಿದೆ. ನಾನು ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ.

ಕಳೆದ ವರ್ಷ ನನ್ನ ಮೊದಲ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ, ಸ್ಪೇನ್‍ನ ಬಾಜಾದಲ್ಲಿ ಅಪಘಾತವಾಗಿ ಗಂಭೀರವಾದ ಗಾಯಗಳಾಗಿದ್ದವು. ಇವುಗಳಿಂದ ಹೊರಬಂದು ವಿಶ್ವ ಚಾಂಪಿಯನ್ ಪಟ್ಟವನ್ನು ಗೆದ್ದಿರುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ ಎಂದು ಹೇಳಿದರು.

ವಿಶ್ವ ಚಾಂಪಿಯನ್‌ಶಿಪ್ ಪಟ್ಟವನ್ನು ಗೆದ್ದ ಭಾರತದ ಮೊದಲ ಅಥ್ಲೀಟ್, ಭಾರತವನ್ನು ಅಂತರರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್ ನಕ್ಷೆಯಲ್ಲಿ ಸೇರಿಸಿದ ಮೊದಲ ಕ್ರೀಡಾಪಟು ಎಂಬ ಗೌರವವು ಬಹಳ ಹೆಮ್ಮೆಯಾಗಿದೆ. ಇದರಿಂದ ಈ ಕ್ರೀಡೆಯನ್ನು ಮುಂದಿನ ದಿನಗಳಲ್ಲಿ ಗಂಭೀರವಾಗಿ ಪರಿಗಣಿಸಿ ಅನೇಕ ರೇಸರ್‍ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದರು.


Click it and Unblock the Notifications








