ಜಾವಾ ಪೆರಾಕ್ ಖರೀದಿಗಾಗಿ ಕಾಯುತ್ತಿರುವ ಬೈಕ್ ಪ್ರಿಯರಿಗೆ ಸಿಹಿಸುದ್ದಿ..!
ಬಿಡುಗಡೆಗೂ ಮುನ್ನವೇ ಬೈಕ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಾವಾ ಹೊಚ್ಚ ಹೊಸ ಬೈಕ್‌ಗಳನ್ನು ಜಾವಾ ಮತ್ತು ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಕಳೆದ ನವೆಂಬರ್‌ನಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಖರೀದಿಗಾಗಿ ಲಕ್ಷಾಂತರ ಗ್ರಾಹಕರು ತುದಿಗಾಲಿನ ಮೇಲೆ ನಿಂತಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ.

ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಸದ್ಯಕ್ಕೆ ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಳ್ಳಲಾಗಿತ್ತು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿರುವ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು 2019ರ ಸೆಪ್ಟೆಂಬರ್‌ನಿಂದ ಜಾವಾ ಪೆರಾಕ್ ಬೈಕ್ ಖರೀದಿಗಾಗಾಗಿ ಬುಕ್ಕಿಂಗ್ ಆರಂಭಗೊಳ್ಳಲಿದ್ದು, ನವೆಂಬರ್ ಆರಂಭದಲ್ಲಿ ಗ್ರಾಹಕರ ಕೈ ಸೇರಲಿವೆ ಎಂದಿದ್ದಾರೆ.

ಹಾಗೆಯೇ ಇನ್ನುಳಿದ ಎರಡು ಬೈಕ್ ಮಾದರಿಗಳಾದ ಜಾವಾ ಮತ್ತು ಜಾವಾ 42 ಬೈಕ್‌ಗಳ ವಿತರಣೆ ಕೂಡಾ ಈಗಾಗಲೇ ಸಾಕಷ್ಟು ವಿಳಂಬವಾಗುತ್ತಿರುವ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮುಂದಿನ ತಿಂಗಳು ಮಾರ್ಚ್ ಅಂತ್ಯಕ್ಕೆ ಇಲ್ಲವೇ ಎಪ್ರಿಲ್ ಆರಂಭದಲ್ಲಿ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ವಿತರಣೆ ಮಾಡುವುದಾಗಿ ಭರವಸೆ ನೀಡಿದೆ.

ಇನ್ನು ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಜಾವಾ ಮತ್ತು ಜಾವಾ 42 ಬೈಕ್‌ಗಳು 293ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27ಬಿಹೆಚ್‍ಪಿ ಮತ್ತು 28ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದರಲ್ಲಿ ಬಾಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30 ಬಿಎಚ್‌ಪಿ ಮತ್ತು 31 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ.

ಸದ್ಯಕ್ಕೆ ಜಾವಾ ಮತ್ತು ಜಾವಾ 42 ಬೈಕ್ ಖರೀದಿಗಾಗಿ ಮುಂದಿನ ಸೆಪ್ಟೆಂಬರ್ ತನಕ ಬುಕ್ಕಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಲ್ಲಿಯ ತನಕ ಬೈಕ್ ಖರೀದಿಗೆ ಯಾವುದೇ ಅವಕಾಶಗಳು ಇಲ್ಲದಿರುವುದು ಕೆಲವರಿಗೆ ಅಸಮಾಧಾನ ಉಂಟು ಮಾಡಿದೆ.
MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಹೌದು, 2019ರ ಸೆಪ್ಟೆಂಬರ್ ಅವಧಿಯ ತನಕ ಜಾವಾ ಖರೀದಿಗಾಗಿ ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಗಳು ಭರ್ತಿಯಾಗಿದ್ದು, ಆರಂಭದಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಮಾತ್ರ ಮಾರ್ಚ್ ಅಂತ್ಯಕ್ಕೆ ಇಲ್ಲವೇ ಏಪ್ರಿಲ್ ಮೊದಲ ವಾರದಿಂದ ಬೈಕ್ ವಿತರಣೆ ಆರಂಭವಾಗಲಿದೆ ಎಂದು ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಹೇಳಿಕೊಂಡಿದೆ.

ಬ್ಯಾಚ್ ಪ್ರಕಾರ ಗ್ರಾಹಕರಿಗೆ ಬೈಕ್ ವಿತರಣೆ ಆರಂಭವಾಗಲಿದ್ದು, ಬುಕ್ಕಿಂಗ್ ಮಾಡಿದ ಪ್ರತಿ ಬ್ಯಾಚ್‌ಗಳು ಸಹ ಒಂದೊಂದು ತಿಂಗಳು ಕಾಲ ಹೆಚ್ಚುವರಿಯಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಸದ್ಯ ಮಧ್ಯಪ್ರದೇಶದ ಪ್ರಿಥಮ್‌ಪುರ್‌ನಲ್ಲಿರುವ ಒಂದೇ ಒಂದು ಬೈಕ್ ಉತ್ಪಾದನಾ ಘಟಕದಲ್ಲಿ ಜಾವಾ ಉತ್ಪಾದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.
MOST READ: 2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಆದರೂ ಸಹ ಜಾವಾ ಪ್ರಿಯರು ಅಷ್ಟೊಂದು ಕಾಯುವ ಅವಧಿಯ ನಡುವೆಯು ಬುಕ್ಕಿಂಗ್ ಮಾಡಿದ್ದು, ಸೆಪ್ಟೆಂಬರ್ ಆದ್ರು ಪರವಾಗಿಲ್ಲ ನಮಗೆ ಜಾವಾ ಖರೀದಿ ಮಾಡಲೇಬೇಕು ಎನ್ನುತ್ತಿರುವುದು ಕ್ಲಾಸಿಕ್ ಲೆಜೆಂಡ್ ಸಂಸ್ಥೆಗೆ ಅಚ್ಚರಿ ತರಿಸಿದೆ.


Click it and Unblock the Notifications








