ಮಹಿಳೆಯರಿಗಾಗಿಯೇ ಬೈಕ್ ಬಿಡುಗಡೆಗೊಳಿಸಲಿದೆ ರಾಯಲ್ ಎನ್‍ಫೀಲ್ಡ್
ರಾಯಲ್ ಎನ್‍ಫೀಲ್ಡ್ ಪ್ರಪಂಚದಲ್ಲಿರುವ ಹಳೆಯ ದ್ವಿ ಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಈ ಕಂಪನಿಯು ಭಾರತದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದ್ದು, ವಿಶ್ವ ಮಾರುಕಟ್ಟೆಗೆ ಇಲ್ಲಿಂದಲೇ ಬೈಕ್‍ಗಳನ್ನು ರಫ್ತು ಮಾಡುತ್ತದೆ.

ರಾಯಲ್ ಎನ್‍ಫೀಲ್ಡ್ ಪ್ರಪಂಚಾದ್ಯಂತ ತನ್ನದೇ ಆದ ಅಭಿಮಾನಿ ಸಮೂಹವನ್ನು ಹೊಂದಿದೆ. ಈ ಹಿಂದೆ ರಾಯಲ್ ಎನ್‍ಫೀಲ್ಡ್ ಕಂಪನಿಯ ಬೈಕ್‍ಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದವು. ಈಗ ಕಾಲ ಬದಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿ ಹಾಗೂ ಆಟೋಮೊಬೈಲ್ ಉದ್ಯಮದ ಕುಸಿತದ ಪರಿಣಾಮವಾಗಿ ರಾಯಲ್ ಎನ್‍ಫೀಲ್ಡ್ ಬೈಕ್‍ಗಳ ಮಾರಾಟವು ಸಹ ಕುಸಿದಿದೆ.

ತನ್ನ ಬೈಕ್‍ಗಳ ಮಾರಾಟವನ್ನು ಹೆಚ್ಚಿಸಲು ರಾಯಲ್ ಎನ್‍ಫೀಲ್ಡ್ ಕಂಪನಿಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಕಡಿಮೆ ಬೆಲೆಯ ಬುಲೆಟ್ ಬೈಕ್ ಅನ್ನು ಬಿಡುಗಡೆಗೊಳಿಸುವುದಾಗಿ ರಾಯಲ್ ಎನ್‍ಫೀಲ್ಡ್ ಕಂಪನಿಯು ಘೋಷಿಸಿತ್ತು.

ಆಟೋ ಎಕಾನಾಮಿಕ್ ಟೈಮ್ಸ್ ವರದಿಗಳ ಪ್ರಕಾರ ರಾಯಲ್ ಎನ್‍ಫೀಲ್ಡ್ ಕಂಪನಿಯು ಕಡಿಮೆ ತೂಕವನ್ನು ಹೊಂದಿರುವ ಬೈಕ್‍ಗಳನ್ನು ಅಭಿವೃದ್ಧಿಪಡಿಸಲಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಆಕರ್ಷಿಸಲು ಸಾಧ್ಯವಾಗಲಿದೆ ಎಂಬುದು ರಾಯಲ್ ಎನ್‍ಫೀಲ್ಡ್ ಕಂಪನಿಯ ಅಭಿಪ್ರಾಯ.

ಮಹಿಳಾ ಗ್ರಾಹಕರನ್ನು ಆಕರ್ಷಿಸುವ ಜೊತೆಗೆ ಜೆನ್ ಎಕ್ಸ್ ಎಂದು ಕರೆಯಲಾಗುವ ಈ ಬೈಕ್ ಕೃಶ ದೇಹವನ್ನು ಹೊಂದಿರುವ ಯುವಜನತೆಯನ್ನೂ ಸಹ ತನ್ನತ್ತ ಸೆಳೆಯುವ ಸಾಧ್ಯತೆಗಳಿವೆ. ಹಳೆಯ ಕಾಲದಲ್ಲಿ ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದ ಮಹಿಳೆಯರು ಈ ದ್ವಿಚಕ್ರ ವಾಹನಗಳಿಂದ ಹಿಡಿದು ಏರೋಪ್ಲೇನ್‍ಗಳವರೆಗೆ ಎಲ್ಲಾ ರೀತಿಯ ವಾಹನಗಳನ್ನು ಚಲಾಯಿಸುತ್ತಾರೆ.

ಸ್ಕೂಟರ್‍ಗಳನ್ನು ಮಹಿಳೆಯರನ್ನು ಗಮನದಲ್ಲಿರಿಸಿಕೊಂಡೇ ಬಿಡುಗಡೆಗೊಳಿಸಲಾಗುತ್ತದೆ. ಸ್ಕೂಟರ್‍ಗಳ ಬದಲು ಬೈಕ್‍ಗಳನ್ನು ಇಷ್ಟ ಪಡುವ ಕೆಲವು ಮಹಿಳೆಯರು ಬೈಕ್‍ಗಳನ್ನೇ ಚಲಾಯಿಸುತ್ತಾರೆ. ಅವರಿಗೆ ಬುಲೆಟ್‍ಗಳನ್ನು ಚಲಾಯಿಸುವ ಆಸೆಯೂ ಇರುತ್ತದೆ.

ಆದರೆ ಹೆಚ್ಚು ತೂಕವನ್ನು ಹೊಂದಿರುವ ಬುಲೆಟ್‍ಗಳನ್ನು ಚಲಾಯಿಸುವುದು ನಿಜಕ್ಕೂ ಸವಾಲಿನ ಸಂಗತಿಯೇ ಸರಿ. ಬಲಶಾಲಿಯಾದ ಗಂಡಸರೇ ಕೆಲವೊಮ್ಮೆ ಬುಲೆಟ್‍ಗಳನ್ನು ಚಲಾಯಿಸಲು ಪರದಾಡುವುದುಂಟು.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಈ ಕಾರಣಕ್ಕಾಗಿ ರಾಯಲ್ ಎನ್‍ಫೀಲ್ಡ್ ಕಡಿಮೆ ತೂಕದ ಬೈಕ್‍ಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಈ ಲಘು ತೂಕದ ಬೈಕ್‍ಗಳಲ್ಲಿ ಉದ್ದವಾದ ಸೀಟ್‍ಗಳ ಜೊತೆಗೆ ಹಲವಾರು ಫೀಚರ್‍ಗಳಿರಲಿವೆ. ಈ ಬೈಕಿನ ಸ್ಟೈಲ್ ರೋಡ್‍ಸ್ಟರ್ ಮಾದರಿಯಂತಿರಲಿದೆ ಎಂದು ವರದಿಯಾಗಿದೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ರಾಯಲ್ ಎನ್‍ಫೀಲ್ಡ್ ಕಂಪನಿಯು ಈ ಬೈಕ್ ಅನ್ನು 2020ರ ಮೊದಲ ಭಾಗದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಜೆ 1ಸಿ ಎಂದು ಸದ್ಯಕ್ಕೆ ಹೆಸರಿಡಲಾಗಿರುವ ಈ ಬೈಕ್ ಅನ್ನು ಎಕ್ಸ್ ಪ್ಲೋರರ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುವುದು.
MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ರಾಯಲ್ ಎನ್‍ಫೀಲ್ಡ್ ಮಹಿಳೆ ಹಾಗೂ ಯುವ ಜನತೆಯನ್ನು ಸಂದರ್ಶಿಸಿ ಅವರಿಗೆ ಯಾವ ರೀತಿಯ ಬೈಕ್ ಬೇಕು ಎಂಬ ಆಧಾರದ ಮೇಲೆ ಈ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬೈಕ್ ಅನ್ನು ಚಲಾಯಿಸುವುದು ಹೆಚ್ಚು ಆರಾಮದಾಯಕವಾಗಿರಲಿದೆ.

ರಾಯಲ್ ಎನ್‍ಫೀಲ್ಡ್ ಕಂಪನಿಯು ಈ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ನಿರಾಕರಿಸಿದೆ. ಈ ಬೈಕಿನಲ್ಲಿರುವ ಫೀಚರ್ ಹಾಗೂ ಬೆಲೆಯನ್ನು ಸಹ ಬಹಿರಂಗಪಡಿಸಿಲ್ಲ. ಆದರೆ ಈ ಬೈಕ್ ಮಾರುಕಟ್ಟೆಯಲ್ಲಿರುವ ಬೈಕಿನಂತಿರಲಿದೆ.

ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 16 ಕೋಟಿ ಜನರಿಗೆ ಡ್ರೈವಿಂಗ್ ಲೈಸೆನ್ಸ್ ಗಳನ್ನು ನೀಡಲಾಗಿದೆ. ಈ ಪೈಕ್ 1 ಕೋಟಿ ಮಹಿಳೆಯರು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾರೆ. ರಾಯಲ್ ಎನ್‍ಫೀಲ್ಡ್ ಬೈಕ್ ಮಾರಾಟದಲ್ಲಿ ಮಹಿಳಾ ಗ್ರಾಹಕರ ಖರೀದಿ ಪ್ರಮಾಣ 7ರಿಂದ 8%ನಷ್ಟಾಗಿದೆ.

ಈ ಕಾರಣಕ್ಕಾಗಿ ರಾಯಲ್ ಎನ್‍ಫೀಲ್ಡ್ ಕಂಪನಿಯು ಬಿಡುಗಡೆಗೊಳಿಸಲಿರುವ ಹೊಸ ಬೈಕ್ ಮಹಿಳಾ ಗ್ರಾಹಕರ ಜೊತೆಗೆ ಸಣ್ಣ ದೇಹವನ್ನು ಹೊಂದಿರುವ ಯುವ ಜನತೆಯನ್ನು ಆಕರ್ಷಿಸಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿದೆ ಎಂಬುದು ಕಂಪನಿಯ ಅಭಿಪ್ರಾಯ.


Click it and Unblock the Notifications