ಎಬಿಎಸ್ ಇಲ್ಲ ಅಂದಿದ್ರೆ ಆ ಯುವಕನ ಪ್ರಾಣನೇ ಹೋಗಿರುತ್ತಿತ್ತು..!
ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಪ್ರಮುಖ ಕಾರಣವೇ ವಾಹನಗಳಲ್ಲಿ ಜೋಡಿಸಲಾಗುವ ತಾಂತ್ರಿಕ ಸೌಲಭ್ಯಗಳ ಕೊರತೆ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಅಗ್ಗದ ಬೆಲೆಯ ವಾಹನಗಳಿಂದಾಗಿ ಅಮಾಯಕರ ಜೀವಗಳು ಬಲಿಯಾಗುತ್ತಿದ್ದು, ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ ಹೊಸ ಸುರಕ್ಷಾ ಮಾರ್ಗಸೂಚಿಯ ಮಹತ್ವವನ್ನ ಈ ಲೇಖನದಲ್ಲಿ ನೀವು ನೋಡಬಹುದಾಗಿದೆ.

ಕೇಂದ್ರ ಸರ್ಕಾರವು ಇದೇ ವರ್ಷ ಏಪ್ರಿಲ್ 1ರಿಂದ 125ಸಿಸಿ ಮೇಲ್ಪಟ್ಟ ಪ್ರತಿಯೊಂದು ವಾಹನಕ್ಕೂ ಎಬಿಎಸ್ ಕಡ್ಡಾಯಗೊಳಿಸುತ್ತಿದ್ದು, ಹೊಸ ಸುರಕ್ಷಾ ಮಾರ್ಗಸೂಚಿಯಿಂದ ಅಪಘಾತಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಅಂದಾಜಿಸಲಾಗುತ್ತಿದೆ. ಹಾಗಾದ್ರೆ ಎಬಿಎಸ್‌ನಿಂದ ವಾಹನ ಸವಾರರಿಗೆ ಏನು ಪ್ರಯೋಜನ? ಇದರಿಂದ ಅಪಘಾತಗಳ ಸಂಖ್ಯೆ ಹೇಗೆ ತಗ್ಗಿಸಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಈ ಹಿಂದೆ 2017ರ ಏಪ್ರಿಲ್ 1 ರಿಂದ ಭಾರತದಲ್ಲಿ ಸಂಪೂರ್ಣವಾಗಿ ಬಿಎಸ್ 3 ಎಂಜಿನ್ ವಾಹನಗಳನ್ನು ನಿಷೇಧ ಮಾಡಿರುವ ಕೇಂದ್ರ ಸರ್ಕಾರವು, ಇದೀಗ ಮುಂಬರುವ ಏಪ್ರಿಲ್ 1ರಿಂದ ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನವನ್ನು 125ಸಿಸಿ ಮೇಲ್ಪಟ್ಟ ಪ್ರತಿಯೊಂದು ವಾಹನಕ್ಕೂ ಕಡ್ಡಾಯಗೊಳಿಸುತ್ತಿದೆ.
ಬೈಕ್ ಮತ್ತು ಕಾರುಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ. ಇದರಿಂದ ವಾಹನ ಸವಾರಿಗೆ ಗರಿಷ್ಠ ಮಟ್ಟದ ಸುರಕ್ಷತೆ ಸಿಗಲಿದ್ದು, ಹೊಸ ನಿಮಯ ಜಾರಿಯಾದ್ರೆ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ ಕೂಡಾ ತಗ್ಗಲಿದೆ.

ಇದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ, ಕಳೆದ ಕೆಲ ದಿನಗಳ ಹಿಂದೆ ಕೆಟಿಎಂ 390 ಬೈಕ್ ಸವಾರನೊಬ್ಬ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಸುಮಾರು 135 ಕಿ.ಮಿ ವೇಗದಲ್ಲಿ ರೈಡ್ ಮಾಡುತ್ತಿದ್ದ. ಇದೇ ವೇಳೆ ಬೈಕ್ ಮುಂದೆ ಹೋಗುತ್ತಿದ್ದ ಟ್ರಕ್ ಚಾಲಕನು ಸಡನ್ ಬ್ರೇಕ್ ಹಾಕಿದ ಪರಿಣಾಮ ಹಿಂದೆಯೇ ಇದ್ದ ಬೈಕ್ ಟ್ರಕ್‌ಗೆ ಡಿಕ್ಕಿ ಹೊಡೆಯಬೇಕಾದ ಪರಿಸ್ಥಿತಿ ಎದುರಾಗಿತ್ತು.
ಆದ್ರೆ ಅದೃಷ್ಟವಶಾತ್ ಅಂತಹ ಯಾವುದೇ ಅವವಢಗಳು ಸಂಭವಿಸಲಿಲ್ಲ ಅಂದ್ರೆ ನೀವು ನಂಬಲೇಬೇಕು. ಇದಕ್ಕೆ ಕಾರಣ ಆ ಬೈಕಿನಲ್ಲಿ ಅಳವಡಿಸಲಾಗಿದ್ದ ಎಬಿಎಸ್ ವ್ಯವಸ್ಥೆಯು ಬೈಕ್ ಸವಾರನ ಪ್ರಾಣ ಉಳಿಯಲು ಸಹಕಾರಿಯಾಯ್ತು ಅನ್ನುವುದು ವಾಸ್ತವ.

ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಎಬಿಎಸ್ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ಮಾರ್ಗಸೂಚಿ ಹೊರಡಿಸಲು ಸಿದ್ದಗೊಳ್ಳುತ್ತಿದ್ದು, ಒಂದು ವೇಳೆ ಪ್ರತಿಯೊಂದು ವಾಹನಗಳು ಸಹ ಎಬಿಎಸ್ ಪಡೆದುಕೊಂಡಲ್ಲಿ ಆಗಾಬಹುದಾದ ನೂರಾರು ದುರಂತಗಳಿಗೆ ಬ್ರೇಕ್ ಬಿಳಲಿದೆ ಎನ್ನಬಹುದು.
ಅಷ್ಟಕ್ಕೂ ಎಬಿಎಸ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ?
ಎಬಿಎಸ್ ಪೂರ್ಣ ರೂಪವೇ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್). ಸಾಮಾನ್ಯವಾಗಿ ಹಠಾತ್ ಆಗಿ ಬ್ರೇಕ್ ಅದುಮಿದಾಗ ಚಕ್ರದ ಚಲನೆ ನಿಲುಗಡೆಯಾಗುತ್ತದೆ. ಚಕ್ರವನ್ನು ಬಿಗಿಯಾಗಿ ಹಿಡಿಯುವುದರಿಂದ ಹೀಗಾಗುತ್ತದೆ. ಇದರ ಪರಿಣಾಮ ಸ್ಟೀರಿಂಗ್ ಹಾಗೂ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು ಚಾಲಕರಿಗೆ ಅಪಘಾತವನ್ನು ತಪ್ಪಿಸುವ ಅವಕಾಶವಿರುವುದಿಲ್ಲ. ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಸಹಕಾರಿಯಾಗುತ್ತೆ.
ಜೊತೆಗೆ ಬ್ರೇಕ್ ಅದುಮಿದ ಸಂದರ್ಭದಲ್ಲಿ ಚಕ್ರ ಹಠಾತಿ ಆಗಿ ಬಂದ್ ಆಗುವುದಿಲ್ಲ. ಬದಲಾಗಿ ವೇಗವನ್ನು ಕಡಿತಗೊಳಿಸಿ, ತಿರುಗಿಸುತ್ತಲೇ ಇರುತ್ತದೆ. ಇದರಿಂದ ಅಪಘಾತ ಸಂದರ್ಭದಲ್ಲಿ ಸವಾರರಿಗೆ ಗಾಡಿಯ ದಿಕ್ಕನ್ನು ಬದಲಾಯಿಸುವ ಅವಕಾಶವಿರುತ್ತದೆ ಎನ್ನಬಹುದು.


Click it and Unblock the Notifications