ನಾಳೆ ಬಿಡುಗಡೆಯಾಗಲಿರುವ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ವಿಶೇಷತೆಗಳಿವು
ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಮೋಡಿ ಮಾಡಲು ಬಜಾಜ್ ಕಂಪನಿಯ ಚೇತಕ್ ಸ್ಕೂಟರ್ ಮತ್ತೆ ಬರುತ್ತಿದೆ. ಈ ಬಾರಿ ಚೇತಕ್ ಸ್ಕೂಟರ್ ಎಲೆಕ್ಟ್ರಿಕ್ ರೂಪದಲ್ಲಿ ಬರಲಿದೆ. ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನಾಳೆ ಬಿಡುಗಡೆಯಾಗಲಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷೆಯನ್ನು ಹುಟ್ಟು ಹಾಕಿದೆ. ಬಜಾಜ್ ಚೇತಕ್ ಹಲವರಿಗೆ ಬರೀ ಒಂದು ಸ್ಕೂಟರ್ ಮಾತ್ರವಲ್ಲ. ಅದರೊಂದಿಗೆ ಭಾವನತ್ಮಕ ಸಂಬಂಧವನ್ನು ಹೊಂದಿದ್ದಾರೆ. ಈ ಸ್ಕೂಟರ್ ಹಲವಾರು ವರ್ಷಗಳವರೆಗೂ ಭಾರತೀಯ ಮಾರುಕಟ್ಟೆಯಲ್ಲಿ ಮೋಡಿ ಮಾಡಿತ್ತು. ನಂತರ ತೆರೆಮರೆಗೆ ಸರಿದಿತ್ತು.

ಮತ್ತೆ ಮೋಡಿ ಮಾಡಲು ನಾಳೆ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆಯಾಗಲಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟ್‍ರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.10 ಲಕ್ಷಗಳಾಗಿರಲಿದೆ ಎಂದು ನಿರೀಕ್ಷಿಸಬಹುದು.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲಾಗುವುದು. ಮೊದಲ ಹಂತದಲ್ಲಿ ಬೆಂಗಳೂರು, ಪುಣೆ, ಮುಂಬೈ, ದೆಹಲಿ ಮತ್ತು ಚೆನ್ನೈ ನಗರಗಳಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಾಗುತ್ತದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 4ಕೆ ಡಬ್ಲ್ಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಇಕೋ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 85ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 95 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಹೊಂದಿದೆ.

ಸ್ಕೂಟರಿನ ಫೀಚರ್ಸ್
ಈ ಸ್ಕೂಟರ್‍ನಲ್ಲಿರುವ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದೆ. ಈ ಆ್ಯಪ್‍ನಲ್ಲಿ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಮತ್ತು ಅನುಕೂಲಕರ ಫೀಚರ್ಸ್‍ಗಳಿವೆ.

ಸ್ಕೂಟರ್ನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್, ಶಾರ್ಪ್ ಡಿಸೈನ್, ರೆಟ್ರೋ ಸ್ಟೈಲ್ ಬಾಡಿ ಡಿಸೈನ್, ಹಾರ್ನ್ ಮತ್ತು ಇಂಡಿಕೇಟರ್ ಸ್ವಿಚ್, ಎಲ್ಇಡಿ ಇಂಡಿಕೇಟರ್, ದೊಡ್ಡದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಇದರೊಂದಿಗೆ ಮೊಬಿಲಿಟಿ ಸಾಫ್ಟ್ ವೇರ್, ಸುರಕ್ಷತಾ ಫೀಚರ್‍ಗಳನ್ನು ಹೊಂದಿದೆ.

ಬಜಾಜ್ ಚೇತಕ್ ಇತಿಹಾಸ
ರಾಜಸ್ಥಾನದ ಮೇವಾರದ 13ನೇ ರಾಜ ಮಹಾರಾಣಾ ಪ್ರತಾಪ್ ಹಲ್ದಿಘಾಟ್ ಯುದ್ದದಲ್ಲಿ ಚೇತಕ್ ಅನ್ನೋ ಹೆಸರಿನ ಕುದುರೆಯನ್ನು ಬಳಸಿದ್ದರು. ಈ ಯುದ್ದದಲ್ಲಿ ಮಹಾರಾಣಾ ನೆಚ್ಚಿನ ಕುದುರೆ ಚೇತಕ್ ಸಾವನ್ನಪ್ಪಿತ್ತು. ರಾಜಸ್ಥಾನ ಬಲಿಚಾ ಗ್ರಾಮದಲ್ಲಿ ಈ ಕುದುರೆಯ ಸ್ಮಾರಕವನ್ನು ನಿರ್ಮಿಸಿದ್ದಾರೆ. ಇದೇ ಐತಿಹಾಸಿಕ ಕುದುರೆಯ ಹೆಸರನ್ನು ಬಜಾಜ್‍ನ ಸ್ಕೂಟರ್‍ಗೆ ಇಡಲಾಗಿದೆ.

ಬಜಾಜ್ ಆಟೋ ಕಂಪನಿಯು 1972 ರಲ್ಲಿ ಚೇತಕ್ ಸ್ಕೂಟರ್ ಅನ್ನು ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಇದು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಇದರ ಮೂಲ ವಿನ್ಯಾಸವು ವೆಸ್ಪಾ ಸ್ಟ್ರೀಂಟ್ ಸ್ಕೂಟರ್ ಮಾದರಿಯಲ್ಲಿದೆ. ಒಳಾಂಗಣ(ಇಂಟಿರಿಯರ್) ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ.

ಸ್ಕೂಟರಿನ ಕಾರ್ಯಕ್ಷಮತೆ
ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್‍ನಂತೆ ಕಾಣುತ್ತದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದ್ದು, ಬಜಾಜ್ ಸಂಸ್ಥೆಯು 50 ಸಾವಿರ ಕಿ.ಮೀ ಅಥವಾ 3 ವರ್ಷಗಳ ವಾರಂಟಿ ನೀಡಲಿದೆ.

ಜೊತೆಗೆ ಪ್ರತಿ 15 ಸಾವಿರ ಕಿ.ಮೀ ಗೆ ಕಡ್ಡಾಯವಾಗಿ ಸರ್ವೀಸ್ ಒದಗಿಸಲಿದ್ದು, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸೌಲಭ್ಯಗಳನ್ನು ಅಪ್‌ಡೇಟ್ ಮಾಡಲಿದೆ. ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್, ಜೀಯೊ ಫೆನ್ಸಿಂಗ್, ವೆಹಿಕಲ್ ಟ್ರಾಕಿಂಗ್ ಸೌಲಭ್ಯಗಳನ್ನು ಹೊಂದಿದೆ.

ಬಜಾಜ್ ಚೇತಕ್ ಭಾರತೀಯರ ಮೆಚ್ಚಿನ ಸಾರಥಿಯಾಗಿತ್ತು. 80ರ ದಶಕದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಸ್ಕೂಟರ್ ಆಗಿದೆ. ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನವನ್ನು ಮೂಡಿಸಲು ಚೇತಕ್ ರಸ್ತೆಗಿಳಿಯಲಿದೆ.


Click it and Unblock the Notifications








