ಕರೋನಾ ವೈರಸ್ ಎಫೆಕ್ಟ್: ರದ್ದುಗೊಂಡ 2020 ಇಐಸಿಎಂಎ ಮೋಟಾರ್ ಶೋ
ಕರೋನಾ ವೈರಸ್ ಕಾರಣದಿಂದಾಗಿ ಈ ವರ್ಷ ನಡೆಯಬೇಕಿದ್ದ ಹಲವಾರು ಮೋಟಾರ್ ಶೋಗಳನ್ನು ಮುಂದೂಡಲಾಗಿದ್ದರೆ, ಇನ್ನೂ ಕೆಲವು ಮೋಟಾರ್ ಶೋಗಳನ್ನು ರದ್ದುಪಡಿಸಲಾಗಿದೆ. ಈಗ ಇಟಲಿಯಲ್ಲಿ ನಡೆಯಬೇಕಿದ್ದ ಅಂತರರಾಷ್ಟ್ರೀಯ ಮೋಟಾರ್‌ಸೈಕಲ್ ಹಾಗೂ ಆಕ್ಸೆಸರೀಸ್ ಪ್ರದರ್ಶನವನ್ನು (ಇಐಸಿಎಂಎ) ರದ್ದುಗೊಳಿಸಲಾಗಿದೆ.

ಈ ವರ್ಷದ ಇಐಸಿಎಂಎ ಮೋಟಾರ್ ಶೋವನ್ನು ನವೆಂಬರ್ 5ರಿಂದ 8ರವರೆಗೆ ನಿಗದಿಪಡಿಸಲಾಗಿತ್ತು. ಇಟಲಿಯಲ್ಲಿನ ಕರೋನಾ ವೈರಸ್ ಅರ್ಭಟವನ್ನು ಗಮನಿಸಿದ ಆಟೋ ಮೊಬೈಲ್ ಕಂಪನಿಗಳು ಈ ಶೋದಲ್ಲಿ ಭಾಗವಹಿಸಲು ನಿರಾಕರಿಸಿವೆ. ಕೆಟಿಎಂ ಹಾಗೂ ಬಿಎಂಡಬ್ಲ್ಯು ಮೊಟೋರಾಡ್ ಕಂಪನಿಗಳು ಪ್ರತಿವರ್ಷ ಈ ಶೋದಲ್ಲಿ ಭಾಗವಹಿಸುತ್ತಿರಲಿಲ್ಲ. ಈಗ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಅನೇಕ ಕಂಪನಿಗಳು ಈ ಶೋದಲ್ಲಿ ಭಾಗವಹಿಸಲು ನಿರಾಕರಿಸಿವೆ.

ಮೂಲಗಳ ಪ್ರಕಾರ, ಇಐಸಿಎಂಎ 2021ರ ನವೆಂಬರ್ 9ರಿಂದ 14 ರವರೆಗೆ ನಡೆಯಲಿದೆ. ಇಐಸಿಎಂಎ ಅನ್ನು ಪ್ರತಿ ವರ್ಷ ಅಕ್ಟೋಬರ್ - ನವೆಂಬರ್ ತಿಂಗಳಿನಲ್ಲಿ ಮಿಲಾನ್ ನಗರದಲ್ಲಿ ನಡೆಸಲಾಗುತ್ತದೆ. ಇದು ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್ ಪ್ರದರ್ಶನವಾಗಿದ್ದು, ಪ್ರಮುಖ ಬೈಕ್ ತಯಾರಕ ಕಂಪನಿಗಳು ತಮ್ಮ ಮೋಟಾರ್‌ಸೈಕಲ್‌ಗಳನ್ನು ಪ್ರದರ್ಶಿಸುತ್ತವೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಹೊಸ ವಾಹನಗಳನ್ನು ಈ ಮೋಟಾರ್‌ಸೈಕಲ್ ಶೋದಲ್ಲಿ ಕಾನ್ಸೆಪ್ಟ್ ಬೈಕ್‌ಗಳ ಜೊತೆಗೆ ಪ್ರದರ್ಶಿಸಲಾಗುತ್ತದೆ. ಈ ಮೋಟಾರ್ ಸೈಕಲ್ ಪ್ರದರ್ಶನವು ದ್ವಿಚಕ್ರ ವಾಹನ ಹಾಗೂ ಆಟೋಮೊಬೈಲ್ ಬಿಡಿಭಾಗಗಳ ವ್ಯವಹಾರವನ್ನು ಉತ್ತೇಜಿಸುತ್ತದೆ.

ಕರೋನಾ ವೈರಸ್‌ನಿಂದ ಹೆಚ್ಚು ಹಾನಿಗೊಳಗಾಗಿರುವ ದೇಶಗಳಲ್ಲಿ ಇಟಲಿ ಸಹ ಸೇರಿದೆ. ಈ ವರ್ಷದ ಅಂತ್ಯದ ವೇಳೆಗೆ ಪರಿಸ್ಥಿತಿ ಸುಧಾರಿಸಲಿದೆಯೇ ಎಂಬುದನ್ನು ಈಗಲೇ ಹೇಳುವುದು ಅಸಾಧ್ಯದ ಮಾತು. ಇಐಸಿಎಂಎ ಆಯೋಜಕರು ಇಟಲಿಯಲ್ಲಿನ ಪರಿಸ್ಥಿತಿಯನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಜಿನೀವಾ ಆಟೋ ಶೋವನ್ನು ರದ್ದುಗೊಳಿಸಿದ ನಂತರ, ನ್ಯೂಯಾರ್ಕ್‌ನಲ್ಲಿ ನಡೆಯಬೇಕಿದ್ದ ಅಂತರರಾಷ್ಟ್ರೀಯ ಆಟೋ ಪ್ರದರ್ಶನವನ್ನು ಮುಂದೂಡಲಾಗಿದೆ. ಹೊಸ ವೇಳಾಪಟ್ಟಿಯಂತೆ ನ್ಯೂಯಾರ್ಕ್ ಆಟೋ ಶೋವನ್ನು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಕರೋನಾ ವೈರಸ್ ಕಾರಣದಿಂದಾಗಿ ಚೀನಾದಲ್ಲಿ ನಡೆಯಬೇಕಿದ್ದ ಫಾರ್ಮುಲಾ 1 ರೇಸ್ ಹಾಗೂ ಕತಾರ್‌ನಲ್ಲಿ ನಡೆಯಬೇಕಿದ್ದ ಮೋಟೋ ಜಿಪಿ ಬೈಕ್ ರೇಸ್‌ಗಳನ್ನು ಸಹ ಮುಂದೂಡಲಾಗಿದೆ. ಯುರೋಪಿನ ಅನೇಕ ದೇಶಗಳಲ್ಲಿ 1000 ಜನರು ಒಟ್ಟಿಗೆ ಸೇರುವುದನ್ನು ನಿಷೇಧಿಸಲಾಗಿದೆ.


Click it and Unblock the Notifications