ಬಿಎಸ್-6 ಹೀರೋ ಡೆಸ್ಟಿನಿ 125 ಬಿಡುಗಡೆ- ಬಿಎಸ್-4 ಆವೃತ್ತಿಗಿಂತಲೂ ರೂ.10 ಸಾವಿರ ದುಬಾರಿ..!
ದೇಶದ ಅತಿದೊಡ್ಡ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಹೀರೋ ಮೋಟೊಕಾರ್ಪ್ ತನ್ನ ಪ್ರಮುಖ ಬೈಕ್ ಆವೃತ್ತಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುತ್ತಿದ್ದು, ಇದೀಗ ಸ್ಪ್ಲೆಂಡರ್ ಪ್ಲಸ್, ಮ್ಯಾಸ್ಟ್ರೊ ಎಡ್ಜ್ 125 ಜೊತೆಗೆ ಡೆಸ್ಟಿನಿ 125 ಸ್ಕೂಟರ್ ಅನ್ನು ಸಹ ಹೊಸ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ.

ಏಪ್ರಿಲ್ 1ರಿಂದ ಹೊಸ ಎಮಿಷನ್ ನಿಯಮವು ಜಾರಿಗೆ ಬರುತ್ತಿದ್ದು, ಹೀರೋ ಮೋಟೊಕಾರ್ಪ್ ಸೇರಿದಂತೆ ಹಲವು ವಾಹನ ಉತ್ಪಾದನಾ ಈಗಾಗಲೇ ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳನ್ನು ಬಿಡುಗಡೆ ಮಾಡಿವೆ. ಹೊಸ ಎಂಜಿನ್ ಪ್ರೇರಿತ ವಾಹನಗಳಲ್ಲಿ ಮಾಲಿನ್ಯ ಪ್ರಮಾಣವು ಪರಿಣಾಮಕಾರಿ ತಗ್ಗಿದ್ದು, ಹೊಸ ವಾಹನ ಬೆಲೆಯಲ್ಲೂ ತುಸು ದುಬಾರಿಯಾಗಿದೆ. ಇದು ಗ್ರಾಹಕರಿಗೆ ಹೊರೆಯಾಗಲಿದ್ದರೂ ಮಾಲಿನ್ಯ ಪ್ರಮಾಣ ತಗ್ಗಿಸುವುದಕ್ಕಾಗಿ ಕೆಲವು ಕಠಿಣ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.

ಬಿಎಸ್-6 ಎಂಜಿನ್ ಹೊಂದಿರುವ ಡೆಸ್ಟಿನಿ 125 ಸ್ಕೂಟರ್ ಮಾದರಿಯು ಸಹ ಈ ಬಾರಿ ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸ್ಕೂಟರ್ ಆರಂಭಿಕವಾಗಿ ರೂ. 64,310 ಬೆಲೆ ಪಡೆದುಕೊಂಡಿದೆ.

ಬಿಎಸ್-4 ಆವೃತ್ತಿಯ ಡೆಸ್ಟಿನಿ 125 ಸ್ಕೂಟರ್ ಬೆಲೆಗೂ ಇದೀಗ ಬಿಡುಗಡೆಯಾಗಲಿರುವ ಬಿಎಸ್-6 ಆವೃತ್ತಿಯ ಬೆಲೆಗೂ ಸಾಕಷ್ಟು ಏರಿಕೆಯಾಗಿದ್ದು, ಆರಂಭಿಕವಾಗಿ ರೂ.10 ಸಾವಿರದಿಂದ ಟಾಪ್ ಎಂಡ್ ಮಾದರಿಯು ರೂ. 13 ಸಾವಿರ ಹೆಚ್ಚುವರಿ ಬೆಲೆ ಪಡೆದಿದೆ.

ಬೆಲೆ ಏರಿಕೆಗೆ ಅನುಗುಣವಾಗಿ ಹೀರೋ ಸಂಸ್ಥೆಯು ಈ ಬಾರಿ ಹೊಸ ಸ್ಕೂಟರ್‌ನಲ್ಲಿ ಹೊಸ ವಿನ್ಯಾಸದ ಎಲ್ಇಡಿ ಡಿಆರ್‌ಎಲ್ಎಸ್, ಕ್ರೋಮ್ 3ಡಿ ಲೋಗೊ ಮತ್ತು ಹೆಚ್ಚುವರಿಯಾಗಿ ಗ್ರೇ ಸಿಲ್ವರ್ ಬಣ್ಣದ ಆಯ್ಕೆ ನೀಡಿದ್ದು, ಇನ್ನುಳಿದ ತಾಂತ್ರಿಕ ಅಂಶಗಳು ಬಿಎಸ್-4 ಮಾದರಿಯಲ್ಲಿರುವಂತೆ ಮುಂದುವರಿಸಲಾಗಿದೆ. ಗ್ರಾಹಕರು ತಮ್ಮ ಬೇಡಿಕೆ ಅನುಗುಣವಾಗಿ ಎಕ್ಸ್ಎಲ್(ಡ್ರಮ್) ಮತ್ತು ವಿಎಕ್ಸ್(ಡಿಸ್ಕ್) ವೆರಿಯೆಂಟ್ ಖರೀದಿಸಬಹುದಾಗಿದ್ದು, ಹೋಂಡಾ ಆಕ್ಟಿವಾ 125 ಎಫ್ಐ ಸ್ಕೂಟರ್‌ಗೆ ಪೈಪೋಟಿ ನೀಡುವ ತವಕದಲ್ಲಿದೆ.

ಎಂಜಿನ್ ವೈಶಿಷ್ಟ್ಯತೆ
ಡೆಸ್ಟಿನಿ 125 ಮತ್ತು ಮ್ಯಾಸ್ಟ್ರೋ ಎಡ್ಜ್ ಸ್ಕೂಟರ್‌ಗಳಲ್ಲಿ ಒಂದೇ ಮಾದರಿಯ ಎಂಜಿನ್ ಬಳಕೆ ಮಾಡಲಾಗಿದ್ದು, ಈ ಬಾರಿ ಹೊಸ ಸ್ಕೂಟರ್‌ನಲ್ಲಿ 125 ಸಿಸಿ ಫ್ಯೂಲ್ ಇಂಜೆಕ್ಷನ್ ಎಂಜಿನ್ ಜೊತೆಗೆ ಎಕ್ಸ್ ಸೆನ್ಸ್ ಎನ್ನುವ ತಂತ್ರಜ್ಞಾನ ಬಳಕೆ ಮಾಡಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಇದು ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿ ತಗ್ಗಿಸಿರುವುದಲ್ಲದೆ ಶೇ.10 ಹೆಚ್ಚು ಇಂಧನ ಕಾರ್ಯಕ್ಷಮತೆ ಹೆಚ್ಚಿಸಿದ್ದು, ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ಕಾಣುವ ಮೂಲಕ 9-ಬಿಎಚ್‌ಪಿ ಮತ್ತು 10.4-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಇನ್ನು ಹೊಸ ಸ್ಕೂಟರ್‌ನಲ್ಲಿ ಹೀರೋ ಸಂಸ್ಥೆಯ ಐ3ಎಸ್ (ಐಡಲ್ ಸ್ಟಾರ್ಟ್-ಸ್ಟಾಪ್ ಟೆಕ್ನಾಲಜಿ)ಯನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಹೊಸ ತಂತ್ರಜ್ಞಾನವು ಕೆಲವು ಸೆಕೆಂಡುಗಳಿಗಿಂತ ಹೆಚ್ಚು ಕಾಲ ವಾಹನ ನಿಷ್ಕ್ರಿಯವಾಗಿದ್ದಾಗ ಐ3ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಮೂಲಕ ಸ್ವಯಂಚಾಲಿತವಾಗಿ ಎಂಜಿನ್ ಅನ್ನು ಬದಲಿಸುತ್ತದೆ. ಇದರಿಂದ ಟ್ರಾಫಿಕ್ ದಟ್ಟಣೆ ವೇಳೆ ಇಂಧನ ವ್ಯರ್ಥವಾಗುವುದನ್ನು ಪರಿಣಾಮಕಾರಿ ತಗ್ಗಿಸುತ್ತದೆ ಎನ್ನುಬಹುದು.

ಇದರೊಂದಿಗೆ ಹೊಸ ಸ್ಕೂಟರಿನಲ್ಲಿ ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ಎಲ್ಇಡಿ ಟೈಲ್ ಲೈಟ್, ಹೊರ ಭಾಗದಲ್ಲಿ ಇರುವ ಫ್ಯೂಲ್ ಟ್ಯಾಂಕ್ ಕ್ಯಾಪ್, ಬಾಡಿ ಕಲರ್ ಮಾದರಿಯಲ್ಲೇ ರಿಯರ್ ವ್ಯೂ ಮಿರರ್ ಬಣ್ಣದ ಆಯ್ಕೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೂಟ್ ಲೈಟ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ನೀಡಲಾಗಿದೆ.

ಈ ಮೂಲಕ ಡೆಸ್ಟಿನಿ 125 ಸ್ಕೂಟರ್ ಮಾದರಿಯು ಪ್ರೀಮಿಯಂ ಸ್ಕೂಟರ್‌ಗಳಲ್ಲೇ ವಿಶೇಷ ಎನ್ನಿಸಲಿದ್ದು, ಡ್ಯುಯಲ್ ಟೋನ್ ಸೀಟು, ಸ್ಟೈಲಿಷ್ ಕಾಸ್ಟ್ ವೀಲ್ಹ್‌ಗಳು, ಫ್ರಂಟ್ ಆಪ್ರಾನ್ ಮತ್ತು ಸೈಡ್ ಕ್ರೋಮ್ ಗಾರ್ನಿಶ್ ಹೊಂದಿರುವುದು ಹೋಂಡಾ ಆಕ್ಟಿವಾ 125 ಎಫ್ಐ ಮತ್ತು ಆಕ್ಸೆಸ್ 125 ಸ್ಕೂಟರ್‌ಗಳಿಗೆ ಮತ್ತಷ್ಟು ಪೈಪೋಟಿ ನೀಡುವ ನೀರಿಕ್ಷೆಯಿದೆ.


Click it and Unblock the Notifications