ಬಿಎಸ್-6 ಎಂಜಿನ್ ಪ್ರೇರಿತ ಜಾವಾ ಮತ್ತು ಜಾವಾ 42 ಬೈಕ್ ಬಿಡುಗಡೆ
ಹೊಸ ಎಮಿಷನ್ ಪ್ರಕಾರ ಏಪ್ರಿಲ್ 1ರಿಂದಲೇ ದೇಶಾದ್ಯಂತ ಬಿಎಸ್-6 ಎಂಜಿನ್ ಪ್ರೇರಿತ ವಾಹನ ಉತ್ಪಾದನೆ ಮತ್ತು ಮಾರಾಟವು ಕಡ್ಡಾಯಗೊಳ್ಳುತ್ತಿದ್ದು, ಜಾವಾ ಮೋಟಾರ್‌ಸೈಕಲ್ ಸಂಸ್ಥೆಯು ತನ್ನ ಜನಪ್ರಿಯ ಬೈಕ್ ಮಾದರಿಗಳನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದೆ.

ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು 2018ರಲ್ಲಿ ಜಾವಾ ಬೈಕ್‌ಗಳನ್ನು ಹೊಸ ವಿನ್ಯಾಸದೊಂದಿಗೆ ಭಾರತದಲ್ಲಿ ಮರುಮಾರಾಟವನ್ನು ಆರಂಭಗೊಳಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಜಾವಾ ಕ್ಲಾಸಿಕ್, ಜಾವಾ 42 ಮತ್ತು ಪೆರಾಕ್ ಬೈಕ್‌ಗಳನ್ನು ಬಿಡುಗಡೆಗೊಳಿಸಿದೆ. ಪೆರಾಕ್ ಬೈಕ್ ಈಗಾಗಲೇ ಬಿಎಸ್-6 ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಬಿಎಸ್-4 ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿದ್ದ ಜಾವಾ ಕ್ಲಾಸಿಕ್ ಮತ್ತು ಜಾವಾ 42 ಬೈಕ್‌ಗಳು ಇದೀಗ ಹೊಸ ಎಮಿಷನ್ ಪ್ರಕಾರ ಹೊಸ ಎಂಜಿನ್ ಪಡೆದುಕೊಂಡಿವೆ.

ಬಿಎಸ್-6 ಎಂಜಿನ್ ಜೋಡಣೆ ನಂತರ ಜಾವಾ ಕ್ಲಾಸಿಕ್ ಮತ್ತು ಜಾವಾ 42 ಬೈಕ್ ಬೆಲೆಯಲ್ಲಿ ತುಸು ದುಬಾರಿಯಾಗಿದ್ದು, ಹೊಸ ಎಂಜಿನ್ ಜೋಡಣೆ ನಂತರ ಬೈಕ್ ಎಂಜಿನ್ ಕಾರ್ಯಕ್ಷಮತೆ ಮತ್ತು ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ.

ಜಾವಾ ಕ್ಲಾಸಿಕ್ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯು ಆರಂಭಿಕವಾಗಿ ರೂ. 1.73 ಲಕ್ಷ ಬೆಲೆ ಹೊಂದಿದ್ದಲ್ಲಿ, ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಯು ರೂ.1.82 ಲಕ್ಷ ಬೆಲೆ ಪಡೆದುಕೊಂಡಿದೆ.

ಹಾಗೆಯೇ ಜಾವಾ 42 ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಸಿಂಗಲ್ ಚಾನೆಲ್ ಎಬಿಎಸ್ ಮಾದರಿಯು ಆರಂಭಿಕವಾಗಿ ರೂ. 1.60 ಲಕ್ಷ ಬೆಲೆ ಹೊಂದಿದ್ದು, ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಯು ರೂ. 1.69 ಲಕ್ಷ ಬೆಲೆ ಪಡೆದುಕೊಂಡಿದೆ. ಈ ಮೂಲಕ ಹೊಸ ಬೈಕ್‌ಗಳ ಬೆಲೆಗೂ ಮತ್ತು ಹಳೆಯ ಆವೃತ್ತಿಯ ಬೈಕ್ ಬೆಲೆಗೂ ಎಕ್ಸ್‌ಶೋರೂಂ ದರದಲ್ಲಿ ರೂ.5 ಸಾವಿರದಿಂದ ರೂ.9,928 ಹೆಚ್ಚಳವಾಗಿದ್ದು, ಆನ್-ರೋಡ್ ದರಗಳಲ್ಲಿ ಇದು ಇನ್ನಷ್ಟು ದುಬಾರಿಯಾಗಿರುತ್ತದೆ.

ಬಿಎಸ್-6 ಎಂಜಿನ್ ವೈಶಿಷ್ಟ್ಯತೆ
ಹೊಸ ಜಾವಾ ಮತ್ತು ಜಾವಾ 42 ಬೈಕ್‌ಗಳು ಈ ಹಿಂದಿನಂತೆಯೇ 293-ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದ್ದು, ಲಿಕ್ವಿಡ್ ಕೂಲ್ಡ್ ಎಂಜಿನ್ ಬದಲಾಗಿ ಫ್ಯೂಲ್ ಇಂಜೆಕ್ಷನ್ ಫೀಚರ್ಸ್ ಪಡೆದುಕೊಂಡಿದೆ.

ಫ್ಯೂಲ್ ಇಂಜೆಕ್ಷನ್ ಯುನಿಟ್ ಬಳಕೆಯಿಂದಾಗಿ ಬೈಕ್ ಚಾಲನೆ ವೇಳೆ ಸ್ಮೂತ್ ಪರ್ಫಾಮೆನ್ಸ್ ನೀಡುವುದರ ಜೊತೆಗೆ ಮಾಲಿನ್ಯ ಹೊರಸೂವಿಕೆ ಪ್ರಮಾಣದಲ್ಲಿ ಸಾಕಷ್ಟು ಕಡಿತಗೊಂಡಿದೆ. ಇದು ಹೊಸ ಬೈಕಿನ ಪ್ರಮುಖ ಬದಲಾವಣೆಯಾಗಿದ್ದು, ಇನ್ನುಳಿದಂತೆ ಬಹುತೇಕ ತಾಂತ್ರಿಕ ಅಂಶಗಳು ಬಿಎಸ್-4 ಮಾದರಿಯಂತೆಯೇ ಮುಂದುವರಿಸಲಾಗಿದೆ.

ಇನ್ನು ಬಿಡುಗಡೆಗೂ ಮುನ್ನ ಕ್ಲಾಸಿಕ್ ಬೈಕ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಾವಾ ಪೆರಾಕ್ ಬೈಕ್ ಮಾದರಿಯು ಇದೀಗ ಅಂತಿಮವಾಗಿ ಗ್ರಾಹಕರ ಕೈಸೇರಲು ಸಿದ್ದವಾಗಿದ್ದು, ರೂ.10 ಸಾವಿರ ಮುಂಗಡದೊಂದಿಗೆ ಆನ್‌ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ.

ಹೊಸ ಪೆರಾಕ್ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1,95,500 ಬೆಲೆ ಪಡೆದುಕೊಂಡಿದ್ದು, ಸಾಮಾನ್ಯ ಬೈಕ್ ಮಾದರಿಗಳಾದ ಜಾವಾ ಮತ್ತು ಜಾವಾ 42 ಬೈಕ್‌ಗಳಿಂತಲೂ ವಿಶೇಷ ವಿನ್ಯಾಸ ಹೊಂದಿದೆ.

ಪೆರಾಕ್ ಬೈಕ್ ಮಾದರಿಯು ಬಿಎಸ್-6 ನಿಯಮ ಅನುಸಾರವೇ ಅಭಿವೃದ್ದಿ ಹೊಂದಿದ್ದು, 334-ಸಿಸಿ ಎಂಜಿನ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 30-ಬಿಎಚ್‌ಪಿ ಮತ್ತು 31-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಪೆರಾಕ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾದರಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.


Click it and Unblock the Notifications








