ನಾಲ್ಕು ಜನ ಕೂರುವಂತೆ ಸ್ಕೂಟರ್ ಮಾಡಿಫೈ ಮಾಡಿದ ವರ್ಕ್‌ಶಾಪ್ ಮಾಲೀಕ
ಭಾರತದಲ್ಲಿ ಅನೇಕ ವಿಚಿತ್ರವಾದ ಸಂಗತಿಗಳನ್ನು ನೋಡಬಹುದು. ಈ ಸಂಗತಿಗಳು ಯಾವುದೋ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಪ್ರತಿಯೊಂದು ಪ್ರದೇಶದಲ್ಲಿ ಚಿತ್ರ ವಿಚಿತ್ರವಾಗಿ ಮಾಡಿಫೈಗೊಂಡಿರುವ ವಾಹನಗಳನ್ನು ಕಾಣಬಹುದು. ಅದರಲ್ಲೂ ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ದೇಶಾದ್ಯಂತ ಜನರು ತಾವೇ ಸ್ವತಃ ಹಲವು ವಾಹನಗಳನ್ನು ಮಾಡಿಫೈ ಮಾಡಿದ್ದರು.

ಇನ್ನು ಭಾರತೀಯ ಮೋಟಾರು ವಾಹನ ಕಾಯ್ದೆಯನ್ವಯ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಂತಿಲ್ಲ. ಹೀಗೆ ಸಂಚರಿಸುವುದು ರಸ್ತೆ ನಿಯಮಗಳಿಗೆ ವಿರುದ್ಧವಾಗಿದೆ. ಆದರೆ ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ನಾಲ್ಕು ಜನ ಪ್ರಯಾಣಿಸುವಂತೆ ಪರಿವರ್ತಿಸಿದ್ದಾರೆ. ಹೀಗೆ ಮಾಡಿಫೈಗೊಂಡ ದ್ವಿಚಕ್ರ ವಾಹನಗಳನ್ನು ಲಿಮೋಸಿನ್ ಸ್ಕೂಟರ್ ಎಂದು ಕರೆಯಬಹುದು.

ಅಸ್ಸಾಂನ ವ್ಯಕ್ತಿಯೊಬ್ಬರು ತಮ್ಮ ನಾಲ್ಕು ಜನರ ಕುಟುಂಬಕ್ಕಾಗಿ ಈ ಸ್ಕೂಟರ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ಸ್ಕೂಟರ್ ನೋಡಲು ತುಂಬಾ ವಿಶೇಷವಾಗಿರುವುದರ ಜೊತೆಗೆ ವಿಶಿಷ್ಟವಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಮಾಡಿಫೈಗೊಂಡ ಸ್ಕೂಟರ್ ನಲ್ಲಿ ನಾಲ್ವರು ಪ್ರಯಾಣಿಸುತ್ತಿರುವುದನ್ನು ಕಾಣಬಹುದು.

ಈ ಸ್ಕೂಟರ್ ಮಾಲೀಕರಾದ ಅತುಲ್ ದಾಸ್, ಎಡಿ ಆಟೋಮೊಬೈಲ್ ವರ್ಕ್‌ಶಾಪ್‌ನ ಮಾಲೀಕರಾಗಿದ್ದಾರೆ. ಅವರು ಕೆಲವು ವಾರಗಳ ಹಿಂದೆ ಈ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಲಾಗಿದೆ. ಈ ಯೋಜನೆಗಾಗಿ ಅತುಲ್ ದಾಸ್ ಎರಡು ಸ್ಕೂಟರ್‌ಗಳನ್ನು ಖರೀದಿಸಿದ್ದರು. ನಂತರ ಎರಡು ಸ್ಕೂಟರ್ ಗಳನ್ನು ಒಟ್ಟಿಗೆ ಸೇರಿಸಿ ಮಾಡಿಫೈ ಮಾಡಿದ್ದಾರೆ.

ತಮ್ಮ ನಾಲ್ಕು ಸದಸ್ಯರ ಕುಟುಂಬವು ಸ್ಕೂಟರ್‌ನಲ್ಲಿ ಯಾವುದೇ ಅನಾನುಕೂಲವಿಲ್ಲದಂತೆ ಸಂಚರಿಸಲು ಅವರು ಈ ವಿಶಿಷ್ಟ ಐಡಿಯಾ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅತುಲ್ ದಾಸ್, ಈ ಸ್ಕೂಟರ್ ಅನ್ನು ತಯಾರಿಸುವುದು ನನ್ನ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ನಾನು ಹೆಚ್ಚುವರಿಯಾಗಿ ಏನನ್ನಾದರೂ ಮಾಡುವ ಯೋಜನೆ ಹೊಂದಿದ್ದೇನೆ.

ನಾನು ನನ್ನ ಕೆಲಸವನ್ನು ಮೂರು ವರ್ಷಗಳ ಹಿಂದೆ ಆರಂಭಿಸಿದೆ. ಕೊನೆಗೂ ನನ್ನ ಗುರಿಯನ್ನು ಸಾಧಿಸಿದೆ. ನಾನು ಈಗ ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ. ಅಂದ ಹಾಗೆ ಅತುಲ್ ದಾಸ್ ಈ ಯೋಜನೆಗೆ ರೂ. 30,000 ಖರ್ಚು ಮಾಡಿದ್ದಾರೆ. ಜೊತೆಗೆ ಈ ಕಾರ್ಯವನ್ನು ಸ್ವತಃ ತಾವೇ ಮಾಡಿದ್ದಾರೆ. ಮಾಡಿಫೈಗೊಂಡ ಸ್ಕೂಟರಿನಲ್ಲಿ ಪತ್ನಿ, ಪುತ್ರಿ ಹಾಗೂ ಪುತ್ರನೊಂದಿಗೆ ನಗರದ ಹಲವು ಸ್ಥಳಗಳಿಗೆ ಭೇಟಿ ನೀಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಆದರೆ ಯಾವುದೇ ವಾಹನವನ್ನು ಮಾರ್ಪಾಡು ಮಾಡುವುದು ಭಾರತದಲ್ಲಿ ಕಾನೂನುಬಾಹಿರ ಎಂಬುದನ್ನು ಗಮನಿಸಬೇಕು. ಮಾಡಿಫೈಗೊಂಡಿರುವ ಈ ಸ್ಕೂಟರಿನ ವೀಡಿಯೊ ಇನ್ನೂ ಅಸ್ಸಾಂ ಪೊಲೀಸರ ಗಮನಕ್ಕೆ ಬಂದಿರುವ ಸಾಧ್ಯತೆಗಳಿಲ್ಲ. ಒಂದು ವೇಳೆ ಪೊಲೀಸರ ಗಮನಕ್ಕೆ ಬಂದಿದ್ದರೆ ಅತುಲ್ ದಾಸ್ ರವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ಈ ರೀತಿ ಸ್ಕೂಟರ್ ಮಾಡಿಫೈ ಮಾಡುವುದು ಭಾರತದಲ್ಲಿ ಕಾನೂನು ಬಾಹಿರ ಎಂಬುದು ಇದರ ಹಿಂದಿರುವ ಪ್ರಮುಖ ಕಾರಣ.

ಈಗ ಈ ಸ್ಕೂಟರಿನ ವೀಡಿಯೊ ವೈರಲ್ ಆಗಿದ್ದು, ಅಸ್ಸಾಂ ಪೊಲೀಸರು ಅತುಲ್ ದಾಸ್ ರವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಸುಪ್ರೀಂ ಕೋರ್ಟ್ ಆದೇಶ ಹಾಗೂ ಮೋಟಾರು ವಾಹನ ಕಾಯ್ದೆಯನ್ವಯ ಮಾಡಿಫೈಗೊಂಡಿರುವ ವಾಹನಗಳು ಸಾರ್ವಜನಿಕ ರಸ್ತೆಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ.
ಅಂತಹ ವಾಹನಗಳನ್ನು ಜನರು ರೇಸಿಂಗ್ ಟ್ರ್ಯಾಕ್ ಅಥವಾ ಫಾರಂಹೌಸ್‌ನಂತಹ ಖಾಸಗಿ ಸ್ಥಳಗಳಲ್ಲಿ ಬಳಸಬಹುದು. ಒಂದು ವೇಳೆ ಸಾರ್ವಜನಿಕ ರಸ್ತೆಗಳಲ್ಲಿ ಕಂಡು ಬಂದರೆ ಸಾರಿಗೆ ಇಲಾಖೆ ಅಥವಾ ಸಂಚಾರಿ ಪೊಲೀಸರು ಆ ವಾಹನಗಳನ್ನು ವಶಕ್ಕೆ ಪಡೆಯಬಹುದು. ಇದು ಮಾತ್ರವಲ್ಲದೆ ಆಫ್ಟರ್ ಮಾರ್ಕೆಟ್ ಬಿಡಿ ಭಾಗಗಳಾದ ಬುಲ್‌ಬಾರ್‌ಗಳ ಅಳವಡಿಕೆ ಹಾಗೂ ಇತರ ಬದಲಾವಣೆಗಳನ್ನು ಸಹ ವಾಹನದಲ್ಲಿ ನಿಷೇಧಿಸಲಾಗಿದೆ.

ಇದರ ಜೊತೆಗೆ ಯಾವುದೇ ವಾಹನದಲ್ಲಿ ನಿಗದಿಪಡಿಸಿರುವುದಕ್ಕಿಂತ ದೊಡ್ಡ ಗಾತ್ರದ ಟಯರ್‌ಗಳನ್ನು ಸಹ ಅಳವಡಿಸುವಂತಿಲ್ಲ. ಅಂತಹ ವಾಹನಗಳು ರಸ್ತೆಗಳಲ್ಲಿ ಖಂಡಿತವಾಗಿಯೂ ಸಾರ್ವಜನಿಕರ ಗಮನವನ್ನು ತಮ್ಮತ್ತ ಸೆಳೆಯುತ್ತವೆ. ಸರಿಯಾದ ಉಪಕರಣಗಳಿಲ್ಲದೆ ಸ್ಥಳೀಯ ಗ್ಯಾರೇಜ್‌ನಲ್ಲಿ ಮಾಡಲಾಗುವ ಇಂತಹ ಮಾರ್ಪಾಡುಗಳಿಂದ ಅಪಾಯ ಸಂಭವಿಸುವ ಸಾಧ್ಯತೆಗಳೂ ಇರುತ್ತವೆ.
ಮಾಡಿಫೈಗೊಂಡ ವಾಹನಗಳು ರಸ್ತೆಯಲ್ಲಿ ಚಲಿಸುವಾಗ ಕೆಟ್ಟು ನಿಂತರೆ ಅಪಘಾತಗಳೂ ಸಂಭವಿಸಬಹುದು. ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಈ ಹಿಂದೆ ಇಂತಹ ಮಾಡಿಫೈಗೊಂಡ ವಾಹನಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು ಎಂಬುದು ಗಮನಾರ್ಹ. ಆದರೆ ವಾಹನ ಉತ್ಸಾಹಿಗಳು ಮಾತ್ರ ವಾಹನಗಳನ್ನು ಮಾಡಿಫೈ ಮಾಡುವುದನ್ನು ನಿಲ್ಲಿಸಿಲ್ಲ.
ಕೆಲವೊಮ್ಮೆ ವಾಹನದ ಮಾರ್ಪಾಡುಗಳು ವಿರೋಧಾಭಾಸವಾಗಿ ಕಾಣುತ್ತವೆ. ಇನ್ನೂ ಕೆಲವೊಮ್ಮೆ ಆಕರ್ಷಕವಾಗಿ ಕಾಣುತ್ತವೆ. ಅಂತಹ ವಾಹನಗಳನ್ನು ಪ್ರಶಂಸಿಸದಿರಲು ಸಾಧ್ಯವಿಲ್ಲ. ಹೆಚ್ಚಿನ ಐಷಾರಾಮಿ ಸೌಕರ್ಯ ಹಾಗೂ ಆಕರ್ಷಕ ನೋಟವನ್ನು ಹೊಂದಿರುವ ಅನೇಕ ವಾಹನಗಳು ನಮ್ಮ ದೇಶದ ಆಟೋ ಉತ್ಸಾಹಿಗಳಿಂದ ಮಾಡಿಫೈ ಆಗಿವೆ. ಇತ್ತೀಚೆಗಷ್ಟೇ ಪ್ರವಾಸಿಗರನ್ನು ಆಕರ್ಷಿಸಲು ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಮರು ವಿನ್ಯಾಸಗೊಳಿಸಲಾಗಿತ್ತು.
ಗಮನಿಸಿ: ಈ ಲೇಖನದಲ್ಲಿರುವ ಮೊದಲ ಎರಡು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications








