ದೇಶಾದ್ಯಂತ ಮತ್ತಷ್ಟು ಹೊಸ ಇವಿ ಸ್ಕೂಟರ್ ಶೋರೂಂ ತೆರೆದ ಎಥರ್ ಎನರ್ಜಿ
ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರೀಮಿಯಂ ಸ್ಕೂಟರ್ ತಯಾರಕ ಕಂಪನಿಯಾಗಿರುವ ಎಥರ್ ಎನರ್ಜಿ(Ather Energy) ತನ್ನ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆ ನಡುವೆಯೂ ಎಥರ್ ನಿರ್ಮಾಣದ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಕಳೆದ ಒಂದು ತಿಂಗಳ ಅವಧಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ 15ಕ್ಕೂ ಹೆಚ್ಚು ಹೊಸ ಶೋರೂಂಗಳಿಗೆ ಚಾಲನೆ ನೀಡಿದೆ. ಇತ್ತೀಚೆಗೆ ಕಂಪನಿಯು ಹುಬ್ಬಳ್ಳಿ ಮತ್ತು ಮೈಸೂರಿನ ಎರಡು ಹೊಸ ಶೋರೂಂ ತೆರೆದ ನಂತರ ಹೈದ್ರಾಬಾದ್‌ನಲ್ಲಿ ತನ್ನ ಎರಡನೇ ಶೋರೂಂ ಆರಂಭಿಸಿತು.

ಎಥರ್ ಕಂಪನಿಯು ಇದುವರೆಗೆ ಸುಮಾರು 24 ಹೊಸ ಶೋರೂಂಗಳಿಗೆ ಚಾಲನೆ ನೀಡಿದ್ದು, ಕಂಪನಿಯು ಈ ವರ್ಷಾಂತ್ಯಕ್ಕೆ ಒಟ್ಟು 15 ರಾಜ್ಯಗಳ ಪ್ರಮುಖ 27 ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ತೆರೆಯುವ ಗುರಿಹೊಂದಿದೆ.

ಎಥರ್ ಕಂಪನಿಯು ಕರ್ನಾಟಕದಲ್ಲಿ ಇದುವರೆಗೆ ನಾಲ್ಕು ಮಾರಾಟ ಮಳಿಗೆಗಳನ್ನು ಹೊಂದಿದಂತಾಗಿದ್ದು, ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಮಂಗಳೂರು, ದಾವಣಗೆರೆ ಸೇರಿದಂತೆ ಪ್ರಮುಖ ನಗರಗಳಲ್ಲಿ ಶೋರೂಂ ತೆರೆಯುವ ಸಿದ್ದತೆಯಲ್ಲಿದೆ.

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.

ಸ್ಟ್ಯಾಂಡರ್ಡ್ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು ಸದ್ಯ 450 ಪ್ಲಸ್ ಮತ್ತು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, ಹೊಸ ಸಬ್ಸಡಿ ನಂತರ 450ಎಕ್ಸ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1,45,129ಕ್ಕೆ ಮತ್ತು 450 ಪ್ಲಸ್ ಬೆಲೆಯನ್ನು ರೂ. 1,26,199ಕ್ಕೆ ನಿಗದಿಪಡಿಸಲಾಗಿದೆ.

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇದರೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಗಾಗಿ ಪ್ರೀಮಿಯಂ ಜೊತೆಗೆ ಬಜೆಟ್ ಬೆಲೆಯ ಸ್ಕೂಟರ್‌ಗಳನ್ನು ಸಹ ಪರಿಚಯಸಲು ಸಿದ್ದವಾಗಿರುವ ಎಥರ್ ಕಂಪನಿಯು ಹೊಸ ಹೊಸ ಸ್ಕೂಟರ್ ಮಾದರಿಯನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲ್ಲಿದೆ.

ಹೊಸ ಎಥರ್ ಸ್ಕೂಟರ್ ಮಾದರಿಯು ಶೀಘ್ರದಲ್ಲೇ ಉತ್ಪಾದನಾ ಮಾದರಿಯನ್ನು ಪಡೆದುಕೊಳ್ಳಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಪೂರೈಕೆಯೆಂತೆ ಹೊಸ ಸ್ಕೂಟರ್ ಮಾದರಿಯನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.

ಕಳೆದ ಒಂದು ವರ್ಷದ ಅವಧಿಯ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳು ವಿವಿಧ ಮಾದರಿಯ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ್ದು, ಪೆಟ್ರೋಲ್ ಬೆಲೆ ಏರಿಕೆ ಪರಿಣಾಮ ಹೊಸ ಇವಿ ಸ್ಕೂಟರ್‌ಗಳು ಉತ್ತಮ ಬೇಡಿಕೆ ಪಡೆದುಕೊಂಡಿವೆ.

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ಹೆಚ್ಚು ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಸ್ಕೂಟರ್‌ಗಳ ಗ್ರಾಹಕರು ಆಸಕ್ತಿ ತೋರುತ್ತಿದ್ದು, ಆರಂಭದಲ್ಲಿ ಪ್ರೀಮಿಯಂ ಇವಿ ಸ್ಕೂಟರ್‌ಗಳನ್ನು ಮಾತ್ರ ಅಭಿವೃದ್ದಿ ಮಾಡಲು ನಿರ್ಧರಿಸಿದ್ದ ಎಥರ್ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಮಾದರಿಗಳನ್ನು ಸಹ ಉತ್ಪಾದನೆ ಮಾಡುವ ಆಸಕ್ತಿ ತೋರಿದೆ.

ಹೊಸ ಎಥರ್ ಸ್ಕೂಟರ್ ಮಾದರಿಯು ರೂ. 1 ಲಕ್ಷ ಬೆಲೆಯೊಳಗೆ ಬಿಡುಗಡೆಯಾಗಲಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಅಳವಡಿಸುವ ಸಾಧ್ಯತೆಗಳಿವೆ.


Click it and Unblock the Notifications








