ಕೌಟುಂಬಿಕ ಜೀವನಕ್ಕಿದೋ ಪರ್ಫೆಕ್ಟ್ ಫ್ಯಾಮಿಲಿ ಸ್ಕೂಟರ್: ಏಥರ್ ರಿಜ್ಟಾ ಎಲೆಕ್ಟ್ರಿಕ್ ರಿವ್ಯೂ!
ಭಾರತದಲ್ಲಿನ ಪ್ರಖ್ಯಾತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ನಿರ್ಮಾಣ ಕಂಪನಿ ಯಾವುದೆಂದು ಕೇಳಿದರೆ, ಕಣ್ಣು ಮುಚ್ಚಿ ಹೇಳಬಹುದಾದ ಹೆಸರು ಏಥರ್. ಹೌದು, ಬೆಂಗಳೂರು ಮೂಲದ ಏಥರ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ 450 ಎಕ್ಸ್ ರೀತಿಯ ಸೂಪರ್ ಹಿಟ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಏಥರ್ ಎಲೆಕ್ಟ್ರಿಕ್ ಸ್ಕೂಟರ್‌ಗಳೆದರೆ ಬಾಳಿಕೆ ಮತ್ತು ಗುಣಮಟ್ಟಕ್ಕೆ ಉತ್ತಮ ಉದಾಹರಣೆ. ಏಥರ್ ಕಂಪನಿಯ ಸ್ಕೂಟರ್‌ಗಳನ್ನು ಖರೀದಿಸಿ, ಆನಂತರದಲ್ಲಿ ಈ ಬೈಕ್ ದಾರಿ ಮಧ್ಯೆ ಕೈಕೊಟ್ಟ ಉದಾಹರಣೆ ವಿರಳಾತಿವಿರಳ ಎಂದೇ ಹೆಳಬಹುದು. ಹಲವು ಸಮಯಗಳಿಂದ ಭಾರತೀಯ ಕುಟುಂಬಗಳಿಗೆ ಒಗ್ಗುವಂತಹ ಒಂದು ಸ್ಕೂಟರ್ ತಯಾರಿಸಬೇಕು ಎಂದು ಏಥರ್ ಪಾಳಯದಲ್ಲಿ ಯೋಜನೆ ನಡೆಯುತ್ತಲೇ ಇತ್ತು. ಇದೀಗ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಹೊಸ ಫ್ಯಾಮಿಲಿ ಸ್ಕೂಟರ್ ಅನ್ನು ಏಥರ್ ಗ್ರಾಹಕರ ಮುಂದಿಟ್ಟಿದೆ.

ಹೌದು, ಏಥರ್, ತನ್ನ ಹೊಸ ರಿಜ್ಟಾ (Ather Rizta Electric Scooter) ಎಂಬ ಸ್ಕೂಟರ್ ಅನ್ನು ಭಾರತೀಯರ ಮುಂದಿಟ್ಟಿದೆ. ಹೊಸ ಎಥರ್ ರಿಜ್ಟಾ ಎಂಬುವುದು ಫ್ಯಾಮಿಲಿ ಸ್ಕೂಟರ್ ಆಗಿದ್ದು, ಇದನ್ನು 450X ಗಿಂತ ಹೆಚ್ಚು ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್ ನಲ್ಲಿ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.
ವಿನ್ಯಾಸ: ರಿಜ್ಟಾ ಮಾರುಕಟ್ಟೆಗೆ ಬರುವ ವರೆಗೆ, ಏಥರ್ ಸ್ಕೂಟರ್‌ಗಳೆಂದರೆ ಗಾತ್ರದಲ್ಲಿ ಚಿಕ್ಕದು ಎಂಬ ರೀತಿಯಲ್ಲಿತ್ತು. ಆದರೆ ರಿಜ್ಟಾ ಸ್ಕೂಟರ್ ಮಾರುಕಟ್ಟೆಗೆ ಲಾಂಚ್ ಆಗುವ ಮೂಲಕ ಈ ಮಾತಿಗೆ ತೆರೆ ಬಿದ್ದಿದೆ. ಈ ಬಾರಿ ಏಥರ್ ತನ್ನ ರಿಜ್ಟಾ ಸ್ಕೂಟರ್ ಅನ್ನು ತನ್ನ 450 ಸರಣಿಯ ಸ್ಕೂಟರ್‌ಗಳಿಗಿಂತಲೂ ದೊಡ್ಡದಾಗಿ ನಿರ್ಮಿಸಿದ್ದು, ಹೆಚ್ಚು ಆರಾಮದಾಯಕ ಪ್ರಯಾಣಕ್ಕಾಗಿ ಸೆಗ್ಮೆಂಟ್‌ನಲ್ಲಿಯೇ ದೊಡ್ಡದಾದಾ ಸೀಟ್‌ಗಳನ್ನು ನೀಡಿದೆ.

ಸ್ಕೂಟರ್‌ನ ಮುಂಭಾಗದಲ್ಲಿ ಅಗಲವಾದ ಎಲ್‌ಇಡಿ ಹೆಡ್ ಲ್ಯಾಂಪ್ ಇರುವುದನ್ನು ಕಾಣಬಹುದಾಗಿದೆ. ಹೆಡ್‌ಲೈಟ್‌ನ ಕೊಂಚ ಮೇಲ್ಬಾಗದಲ್ಲಿ ಏಥರ್ ಎಂಬ ಬ್ರಾಂಡಿಂಗ್ ಅನ್ನು ಕಾಣಬಹುದಾಗಿದ್ದು ಇದು ವಿಭಿನ್ನ ಲುಕ್ ನೀಡುತ್ತದೆ. ಹೆಡ್ ಲ್ಯಾಂಪ್ ಜೊತೆಯಲ್ಲಿಯೇ ಇಂಟಿಗ್ರೇಟೆಡ್ ಡಿಆರ್‌ಎಲ್ ಮತ್ತು ಇಂಡಿಕೇಟರ್‌ಗಳನ್ನು ನೀಡಲಾಗಿದೆ. ಇವಿಷ್ಟು ಈ ಸ್ಕೂಟರ್‌ನ ಮುಂಭಾಗವನ್ನು ಅಂದಗಾಣಿಸುತ್ತದೆ.
ಈ ಸ್ಕೂಟರ್‌ನ ಹಿಂಬಾಗಕ್ಕೆ ಬಂದಾಗ ಮುಂಭಾಗದಲ್ಲಿ ಇರುವ ಹೆಡ್ ಲ್ಯಾಂಪ್ ವಿನ್ಯಾಸದ ಟೇಲ್ ಲ್ಯಾಂಪ್ ಹಾಗೂ ಅದರ ಜೊತೆ ಇಂಡಿಕೇಟರ್‌ಗಳನ್ನು ಕಾಣಬಹುದು. ವಿಶಾಲವಾದ ಸೀಟ್‌ಗೆ ಬ್ಯಾಕ್ ರೆಸ್ಟ್‌ಗಳನ್ನು ಅಳವಡಿಸಲಾಗಿದ್ದು, ಇದರ ಸಹಾಯದಿಂದ ಹಿಂಬದಿ ಸವಾರರು ಆರಾಮದಾಯಕ ರೈಡ್ ಅನ್ನು ಪಡೆಯಬಹುದು. ಹಲವಾರು ಸಂಧರ್ಭಗಳಲ್ಲಿ ಈ ಬ್ಯಾಕ್ ರೆಸ್ಟ್ ಹಿಂಬದಿ ಸವಾರರ ಉಪಯೋಗಕ್ಕೆ ಬರುತ್ತವೆ.

ಫೀಚರ್‌ಗಳು: ರಿಜ್ಟಾ ಫ್ಯಾಮಿಲಿ ಸ್ಕೂಟರ್ ಆಗಿದ್ದರೂ, ಏಥರ್ ಈ ಸ್ಕೂಟರ್‌ನಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ಅಳವಡಿಸಿದ್ದಾರೆ. ಹಲವು ಟೆಕ್‌ಗಳಿಂದ ಕೂಡಿರುವ ರಿಜ್ಟಾದ ಪ್ರಮುಖ ಫೀಚರ್ ಎಂದರೆ 7 ಇಂಚ್ ಅಳತೆಯಲ್ಲಿರುವ ಇದರ ಟಿಎಫ್‌ಟಿ ಪರದೆ. ಏಥರ್ ರಿಜ್ಟಾ ಎಸ್ ಆವೃತ್ತಿಯಲ್ಲಿ 450S ನಿಂದ ಎರವಲು ಪಡೆದ ಡೀಪ್ ವ್ಯೂವ್ ಎಲ್‌ಸಿಡಿ ಪರದೆಯನ್ನು ಬಳಸಲಾಗಿದೆ.
ಈ ಪರದೆಯ ಸಹಾಯದಿಂದ ನೀವು ಸಾಕಷ್ಟು ಉಪಯೋಗಗಳನ್ನು ಪಡೆಯಬಹುದಾಗಿದೆ. ಇರದಲ್ಲಿ ನಾವಿಗೇಷನ್, ಫೈಂಡ್ ಮೈ ಸ್ಕೂಟರ್, ಟೋ ಮತ್ತು ತೆಫ್ಟ್ ನೋಟಿಫಿಕೇಷನ್ ಅಲೆಕ್ಸಾ ಮತ್ತು ಇನ್ನೂ ಹಲವು ಪ್ರಮುಖವಾದವು. ಆದರೆ ಇದರ Z ಆವೃತ್ತಿಯಲ್ಲಿ ಗೂಗಲ್ ಮ್ಯಾಪ್ ಮತ್ತು ವಾಟ್ಸ್ಯಾಪ್ ಫೀಚರ್‌ಗಳು ಸಹ ಲಭ್ಯವಿದೆ.

ಸುರಕ್ಷತೆ: ಈ ಸ್ಕೂಟರ್ ನಲ್ಲಿ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದೆ. ಈ ಸ್ಕೂಟರ್ ಡ್ಯಾಶ್‌ಬೋರ್ಡ್‌ನಲ್ಲಿ SkidControl ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ನಿಮ್ಮ ಸ್ಕೂಟರ್‌ನ ಚಕ್ರಗಳು ಯಾವ ವೇಗದಲ್ಲಿ ತಿರುಗುತ್ತಿದೆ ಎಂಬುದರ ಆಧಾರದ ಮೇಲೆ ಇದು ಕಾರ್ಯ ನಿರ್ವಹಿಸುತ್ತದೆ. ಇದು ಮಾತ್ರವಲ್ಲದೇ ಸ್ಕೂಟರ್ ಏನಾದರೂ ಬಿದ್ದರೆ ತನ್ನ ಟೇಲ್ ಲೈಟ್ ವೇಗವಾಗಿ ಬ್ಲಿಂಕ್ ಆಗುವ ಮೂಲಕ ಹಿಂಬದಿ ವಾಹನ ಸವಾರರಿಗೆ ಎಚ್ಚರಿಕೆ ರವಾನಿಸುತ್ತದೆ.
ಏಥರ್ ರಿಜ್ಟಾ ಸ್ಕೂಟರ್‌ನಲ್ಲಿ ಎಂಆರ್‌ಎಫ್ ಕಂಪನಿಯ 90/90-12 ಇಂಚ್‌ನ ಮುಂಭಾಗದ ಟೈರ್ ಮತ್ತು 100/80-12 ಇಂಚ್‌ನ ಹಿಂಭಾಗದ ಟೈರ್‌ಗಳು ಲಭ್ಯವಾಗುತ್ತದೆ. ಸಿಟಿ ಬಳಕೆಗೆ ಹೇಳಿ ಮಾಡಿಸಿದಂತಹ ಟೈರ್ ಇದಾಗಿದ್ದು, ರಸ್ತೆಯಲ್ಲಿ ವೇಗವಾಗಿ ಹೋಗುವ ಸಂಧರ್ಭದಲ್ಲೂ ಯಾವುದೇ ರೀತಿಯ ಗ್ರಿಪ್ ಅನ್ನು ಸಹ ಕಳೆದುಕೊಳ್ಳುವುದಿಲ್ಲ.

ಬ್ಯಾಟರಿ ಮತ್ತು ರೇಂಜ್: ಏಥರ್ ರಿಜ್ಟಾ ಸ್ಕೂಟರ್ ಪ್ರಮುಖವಾಗಿ ಎರಡು ಬ್ಯಾರಿ ಆಯ್ಕೆಗಳನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೇಸ್ ರಿಜ್ಟಾ S ಮತ್ತು Z ರೂಪಾಂತರವು 2.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಮಾದರಿಯು 123 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 80 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಇದರ ಎರಡನೇ ಬ್ಯಾಟರಿ ಆಯ್ಕೆಯನ್ನು ನೋಡುವುದಾದರೆ, ಎಥರ್ ರಿಜ್ಟಾ ಝಡ್ (ಲಾಂಗ್ ರೇಂಜ್) ರೂಪಾಂತರವು 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬಂದಿದೆ. ಇದು 159 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 80 ಪ್ರತಿಶತದಷ್ಟು ಚಾರ್ಜ್ ಆಗಲು ಈಗ ದೊಡ್ಡ ಬ್ಯಾಟರಿ ಪ್ಯಾಕ್ ಹೊರತಾಗಿಯೂ ಕೇವಲ 4 ಗಂಟೆ ಮತ್ತು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಈ ರಿಜ್ಟಾ ಸ್ಕೂಟರ್‌ನ ಬ್ಯಾಟರಿ ಪ್ಯಾಕ್ ವಾರಂಟಿ ಬಗ್ಗೆ ನೊಡುವುದಾದರೆ, ಏಥರ್ ಈ ಸ್ಕೂಟರ್‌ಗೆ ಐದು ವರ್ಷ ಅಥವಾ 60,000km ವಾರಂಟಿಯನ್ನು ನೀಡುತ್ತಿದೆ. ಈ ಸ್ಕೂಟರ್‌ಗೆ ಅಳವಡಿಸಲಾದ ಎಲೆಕ್ಟ್ರಿಕ್ ಮೋಟಾರ್ ಸಹಾಯದಿಂದ .76 bhp ಪವರ್ ಮತ್ತು 22 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 40km/h ವೇಗವನ್ನು 4.7 ಸೆಕೆಂಡ್‌ಗಳಲ್ಲಿ ತಲುಪುತ್ತದೆ.
ರೈಡಿಂಗ್ ಅನುಭವ: ನಾವು ಈ ಹಪಸ ಏಥರ್ ರಿಜ್ಟಾ ಸ್ಕೂಟರ್ ಅನ್ನು ರೈಡ್ ಮಾಡಿದ್ದು, ಇದರ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಮೊದಲಿಗೆ ಈ ಸ್ಕೂಟರ್‌ನ ರೈಡಿಂಗ್ ಮೋಡ್ ಬಗ್ಗೆ ಮಾತನಾಡೋಣ. ಏಥರ್ ಈ ಸ್ಕೂಟರ್‌ನಲ್ಲಿ ಇಕೊ ಮತ್ತು ಝಿಪ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ನೀಡಿದೆ. ಈ ಸ್ಕೂಟರ್‌ನ ಸಂಪೂರ್ಣ ಶಕ್ತಿ ಮತ್ತು ಥ್ರಿಲ್ಲಿಂಗ್ ಅನುಭವಕ್ಕಾಗಿ ನೀವು ಝಿಪ್ ಮೋಡ್ ಅನ್ನು ಅವಲಂಬಿಸಬೇಕಾಗುತ್ತದೆ.

ಇಕೋ ಮೋಡ್‌ನಲ್ಲಿ ನೀವು ಸ್ಕೂಟರ್ ಅನ್ನು ರೈಡ್ ಮಾಡಿದರೆ ಈ ಸ್ಕೂಟರ್‌ನ ಸಂಪೂರ್ಣ ರೇಂಜ್ ಅನ್ನು ಪಡೆಯಬಹುದಾಗಿದೆ. ನಗರ ಪ್ರದೇಶದಲ್ಲಿ ದಿನಂಪ್ರತಿ ಬಳಕೆಗೆ ಇದು ಹೇಳಿ ಮಾಡಿಸಿದ ಸ್ಕೂಟರ್ ಆಗಿದೆ. ಇದರ ಜೊತೆಗೆ ನೀವು ಏಥರ್‌ನ ಮತ್ತಷ್ಟು ಆಕ್ಸಸರೀಸ್ ಅನ್ನು ಖರೀದಿಸಿದರೆ ನಿಮ್ಮ ದೈನಂದಿನ ಜೀವನ ಮತ್ತಷ್ಟು ಸುಲಭವಾಗುತ್ತದೆ. ಇದರಲ್ಲಿ 32 ಲೀಟರ್ ಬೂಟ್ ಸ್ಪೇಸ್ ಜೊತೆಗೆ ಒಟ್ಟಾರೆಯಾಗಿ 54 ಲೀಟರ್‌ನ ಸ್ಟೋರೇಜ್ ದೊರೆಯುತ್ತದೆ.
ಇನ್ನು ಈ ಸ್ಕೂಟರ್‌ನ ಆಕ್ಸಿಲರೇಷನ್ ಬಗ್ಗೆ ನೊಡುವುದಾದರೆ, ಈ ಬೈಕ್ ಅಗತ್ಯಕ್ಕೆ ತಕ್ಕದಾದ ರೀತಿಯಲ್ಲಿನ ಪವರ್ ಅನ್ನು ಉತ್ಪಾದಿಸುತ್ತಿದ್ದು, ಸಿಟಿ ಬಳಕೆಗೆ ಉತ್ತಮವಾಗಿದೆ. ಇದರ ಟಾಪ್ ಸ್ಪೀಡ್ 80km/h ಇದ್ದು, ಎಲ್ಲಿಯೂ ಸಹ ಬೈಕ್‌ಗೆ ಇನ್ನಷ್ಟು ಪವರ್ ಇರಬೇಕಿತ್ತು ಎಂದೆನಿಸುವುದಿಲ್ಲ. ಚಲಿಸುತ್ತಿರುವಾಗ ಯಾವುದೇ ರೀತಿಯ ಗೊಂದಲವಿಲ್ಲದೇ, ಆರಾಮದಾಯಕ ಅನುಭವವನ್ನು ಈ ಸ್ಕೂಟರ್ ನೀಡುತ್ತದೆ.

ಎಥರ್ ರಿಜ್ಟಾ ಎಸ್ ರೂಪಾಂತರದ ಬೆಲೆಯು ರೂ.1.09 ಲಕ್ಷವಾಗಿದೆ. ಈ ಬೆಲೆಯು ಬೆಂಗಳೂರಿನ ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ರೂಪಾಂತರವು ಪ್ಯಾಂಗೊಂಗ್ ಬ್ಲೂ, ಡೆಕ್ಕನ್ ಗ್ರೇ ಮತ್ತು ಸಿಯಾಚಿನ್ ವೈಟ್ ಎಂಬ ಮೂರೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಎಥರ್ ರಿಜ್ಟಾ ಝಡ್ ರೂಪಾಂತರದ ಬಗ್ಗೆ ಹೇಳುವುದಾದರೆ, ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.25 ಲಕ್ಷವಾಗಿದೆ. ಇದು 7 ಬಣ್ಣಗಳ ಆಯ್ಕೆಗಳಲ್ಲ್ಲಿ ಲಭ್ಯವಿರುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಏಥರ್‌ನ ರಿಜ್ಟಾ ಒಂದು ಪರ್ಫೆಕ್ಟ್ ಫ್ಯಾಮಿಲಿ ಸ್ಕೂಟರ್. ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಫ್ಯಾಮಿಲಿ ಸ್ಕೂಟರ್ ಸೆಗ್ಮೆಂಟ್ ಅನ್ನು ಇದು ಭರ್ತಿ ಮಾಡಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಬಿಕರಿಯಾಗುವುದಂತೂ ಸುಳ್ಳಲ್ಲ. ನೀವೇನಾದರೂ ದಿನಂಪ್ರತಿ ಬಳಕೆಗೆ ಒಂದು ಎಲೆಕ್ಟ್ರಿಕ್ ಸ್ಕೂಟರ್‌ನ ಹುಡುಕಾಟದಲ್ಲಿದ್ದರೆ, ನಿಮ್ಮ ಹುಡುಕಾಟ ಇಲ್ಲಿಗೆ ಕೊನೆಯಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








