TVS Apache RTX 300: ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300 ರಿವ್ಯೂ.. ಬಂಗಾರದಂತಹ ಬೈಕ್‌ಯಿದು!
ಇತ್ತೀಚೆಗೆ ಶಿಮ್ಲಾದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಹೊಚ್ಚ ಹೊಸ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300 (TVS Apache RTX 300) ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಲಾಗಿತ್ತು. ಇದು ಆಕರ್ಷಕವಾದ ವಿನ್ಯಾಸ ಹೊಂದಿದ್ದು, ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ದೊರೆಯಲಿದ್ದು, ರೂ.1.99 ಲಕ್ಷದಿಂದ ರೂ.2.29 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬೇಸ್, ಟಾಪ್ & ಬಿಟಿಒ (ಬಿಲ್ಟ್ ಟು ಆರ್ಡರ್) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೂ ನೂತನ 'ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300' ಬೈಕ್ ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ಈ ಹೊಸ ಮೋಟಾರ್‌ಸೈಕಲ್‌ನ ವಿನ್ಯಾಸವೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ.. ವೈಶಿಷ್ಟ್ಯಗಳೇನು ಎಂಬುದರ ಕುರಿತಂತೆ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

ವಿನ್ಯಾಸ & ಬಣ್ಣಗಳು (Design & Colors):
ಇದು ದೈನಂದಿನ ಪ್ರಯಾಣ ಹಾಗೂ ಆಫ್-ರೋಡ್ ಚಾಲನೆಗೂ ಹೇಳಿ ಮಾಡಿಸಿದ ರೀತಿಯಲಿದೆ. ಅದಕ್ಕೆ ತಕ್ಕಂತೆ ತುಂಬಾ ಚೆನ್ನಾಗಿ ವಿನ್ಯಾಸಗೊಳಿಸಲಾಗಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ವಿಶೇಷವಾಗಿ ಯುವ ಗ್ರಾಹಕರ ಮನ ಸೆಳೆಯುವಂತಿದೆ. ದೃಢವಾದ 'ಬಾಡಿ'ಯನ್ನು ಒಳಗೊಂಡಿದೆ.
ಈ ಬೈಕ್ ವಿನ್ಯಾಸದ ದೃಷ್ಟಿಯಿಂದ ಉತ್ತಮವಾದ ಡುಯಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಸೀಟ್, ಅಗಲವಾದ ಹ್ಯಾಂಡಲ್‌ಬಾರ್, ದೊಡ್ಡ ಗಾತ್ರದ ವಿಂಡ್‌ಸ್ಕ್ರೀನ್ ಟ್ಯಾಂಕ್ ಗಾರ್ಡ್ ಹಾಗೂ ನಕಲ್ ಗಾರ್ಡ್‌ಗಳನ್ನು ಪಡೆದಿದೆ. ಪರ್ಲ್ ವೈಟ್, ಲೈಟ್ನಿಂಗ್ ಬ್ಲ್ಯಾಕ್, ಮೆಟಾಲಿಕ್ ಬ್ಲೂ, ಟಾರ್ನ್ ಬ್ರಾನ್ಜ್ ಮತ್ತು ವೈಪರ್ ಗ್ರೀನ್ ಬಣ್ಣಗಳೊಂದಿಗೂ ಲಭ್ಯವಿದೆ.

ಸುತ್ತಳತೆ (Dimensions):
ಹೊಸ 'ಅಪಾಚೆ ಆರ್‌ಟಿಎಕ್ಸ್ 300' ಮೋಟಾರ್‌ಸೈಕಲ್ ವಿಶಾಲ ಗಾತ್ರದಲ್ಲಿದೆ. 2,120 ಎಂಎಂ ಉದ್ದ, 820 ಎಂಎಂ ಅಗಲ ಹಾಗೂ 1,350 ಎಂಎಂ ಎತ್ತರವಿದೆ. 195 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,420 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಜೊತೆಗಿದು ಸರಿ ಸುಮಾರು 180 ಕೆಜಿ ತೂಕವಿದೆ.
ಕಾರ್ಯಕ್ಷಮತೆ (Performance):
ಇದು ಸಾಕಷ್ಟು ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. 299 ಸಿಸಿ ಲಿಕ್ವಿಡ್-ಆಯಿಲ್ ಕೋಲ್ಡ್, ಸಿಂಗಲ್-ಸಿಲಿಂಡರ್ ಆರ್‌ಟಿ-ಎಕ್ಸ್‌ಡಿ4 ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 9,000 ಆರ್‌ಪಿಎಂನಲ್ಲಿ 35.5 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 7,000 ಆರ್‌ಪಿಎಂನಲ್ಲಿ 28.5 ಎನ್‌ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಲಿದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಈ ಬೈಕ್ ಗರಿಷ್ಠ ಇಂಧನ ದಕ್ಷತೆಗೂ ಸಾಕ್ಷಿಯಾಗಿರಲಿದೆ. 30 ರಿಂದ 35 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ ಎನ್ನಲಾಗಿದೆ. 12.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ. 155 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 7.4 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ವೈಶಿಷ್ಟ್ಯಗಳು (Features):
ನೂತನ 'ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300' ಮೋಟಾರ್‌ಸೈಕಲ್ ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದಿದೆ. ಬೃಹದಾಕಾರದ 5 ಇಂಚಿರುವ ಟಿಎಫ್‌ಟಿ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದು ಸ್ಪೀಡ್, ಕಾಲ್, ಎಸ್‌ಎಂಎಸ್ ಅಲರ್ಟ್, ಸೆಗ್ಮೆಂಟ್ ಫಸ್ಟ್ ಮ್ಯಾಪ್ ಮಿರರಿಂಗ್ ಮತ್ತು ಗೋಪ್ರೋ ಕಂಟ್ರೋಲ್ ಸೇರಿದಂತೆ ಹೆಚ್ಚಿನವುಗಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸುತ್ತದೆ.

ಈ ಬೈಕ್ ಯುಎಸ್‌ಬಿ ಫೋನ್ ಚಾರ್ಜರ್ & ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್‌ನಂತಹ ಮತ್ತಷ್ಟು ವೈಶಿಷ್ಟ್ಯಗಳನ್ನು ಪಡೆದಿದೆ. ಟೂರ್, ರ‍್ಯಾಲಿ, ಅರ್ಬನ್ & ರೈನ್ ಎಂಬ 4 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದರ ಸೀಟ್ ಎತ್ತರವು 835 ಎಂಎಂ ಇದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಇದು ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) 41-ಎಂಎಂ ಇನ್ವರ್ಟೆಡ್ ಫೋರ್ಕ್ ಮತ್ತು ಹಿಂಭಾಗ (ರೇರ್) ಪ್ರಿಲೋಡ್ ಅಡ್ಜಸ್ಟೇಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡುಯಲ್ ಡಿಸ್ಕ್ ಬ್ರೇಕ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಟ್ರಾಕ್ಷನ್ ಕಂಟ್ರೋಲ್‌ನ್ನು ಪಡೆದಿದೆ. 19-ಇಂಚಿನ ವೀಲ್‌ಗಳು, 110/80-19 ಹಾಗೂ 150/70-17 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.

ಚಾಲನಾ ಅನುಭವ (Riding Impressions):
ಹಿಮಾಚಲ ಪ್ರದೇಶದ ರಸ್ತೆಗಳಲ್ಲಿ ಹೊಸ 'ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300' ಮೋಟಾರ್‌ಸೈಕಲ್ ಅದ್ಭುತವಾದ ಚಾಲನಾ ಅನುಭವ ಒದಗಿಸಿತು. ವಿಶೇಷವಾಗಿ ಹಳ್ಳ - ದಿಣ್ಣೆಯಿರುವ ರಸ್ತೆಗಳಲ್ಲೂ ಸುಲಭವಾಗಿ ಚಲಾಯಿಸಬಹುದು. ಸೀಟ್ ಸಹ ತುಂಬಾ ಚೆನ್ನಾಗಿದ್ದು, ಆರಾಮದಾಯಕ ಪ್ರಯಾಣವನ್ನು ಒದಗಿಸಬಲ್ಲದು.
ಇದರ ಸಸ್ಪೆನ್ಷನ್ ಸೆಟಪ್ & ಬ್ರೇಕ್‌ಗಳು ಉತ್ತಮವಾಗಿ ಕೆಲಸ ಮಾಡಿದವು. ಟೈರ್‌ಗಳು ಚೆನಾಗಿದ್ದು, ರಸ್ತೆ ಮೇಲೆ ಗಟ್ಟಿಯಾದ ಹಿಡಿತವನ್ನು ಒದಗಿಸಲು ನೇರವಾಯಿತು. ಈ ಬೈಕ್‌ನ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿವ ಮಿರರ್ ಮ್ಯಾಪಿಂಗ್ ವೈಶಿಷ್ಟ್ಯವು ಅತ್ಯುತ್ತಮವಾಗಿದೆ. ಗೇರ್ ಶಿಫ್ಟರ್ ಕೂಡ ಯಾವುದೇ ರಾಜಿಯಿಲ್ಲದೆ, ಚೆನ್ನಾಗಿಯೇ ಕಾರ್ಯ ನಿರ್ವಹಿಸಿತು.
ಒಟ್ಟಾರೆ ಅಭಿಪ್ರಾಯ (Overall Opinion):
ನೀವು ಬಜೆಟ್‌ನಲ್ಲಿ ಸಾಹಸಮಯ ಮೋಟಾರ್‌ಸೈಕಲ್‌ವೊಂದನ್ನು ಹುಡುಕುತ್ತಿದ್ದರೆ, ಈ 'ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300' ಹೆಚ್ಚು ಸೂಕ್ತವಾಗಬಲ್ಲದು. ಇದಕ್ಕೆ ಕೆಟಿಎಂ 250 ಅಡ್ವೆಂಚರ್, ಯೆಜ್ಡಿ ಅಡ್ವೆಂಚರ್ ಹಾಗೂ ಸುಜುಕಿ ವಿ-ಸ್ಟ್ರೋಮ್ ಎಸ್‌ಎಕ್ಸ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಬಲ್ಲವು. ಇದರ ವಿತರಣೆಗಳು ಶುರುವಾದ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








