Honda QC1 Review: ಹೋಂಡಾ ಕ್ಯೂಸಿ1 ರಿವ್ಯೂ.. ಬೆಲೆಯೂ ಕಮ್ಮಿ, ದಿನಬಳಕೆಗೆ ಹೆಚ್ಚು ಸೂಕ್ತ ಆಗುತ್ತಾ?
ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಹೊಚ್ಚ ಹೊಸ ಕ್ಯೂಸಿ1(QC1) ಹಾಗೂ ಆಕ್ಟಿವಾ ಇ (Activa e) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿತ್ತು ಈ ಮೂಲಕ ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಅದ್ದೂರಿಯಾಗಿ ಪ್ರವೇಶಿಸುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತ್ತು. ಇದೇ ಜನವರಿಯಲ್ಲಿ ನವದೆಹಲಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಈ ನೂತನ ಇ-ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲಾಗಿತ್ತು.
ಬಹುಮುಖ್ಯವಾಗಿ ಹೊಸ ಹೋಂಡಾ ಕ್ಯೂಸಿ1 ಇ-ಸ್ಕೂಟರ್ ರೂ.90,000 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೋಲಿಕೆ ಮಾಡಿದರೆ, ಮನೆಯಲ್ಲಿಯೇ ಸುಲಭವಾಗಿ ಚಾರ್ಜ್ ಮಾಡಲು ಸಾಧ್ಯವಾಗುವಂತೆ 'ಫಿಕ್ಸೆಡ್ ಬ್ಯಾಟರಿ' ಆಯ್ಕೆಯನ್ನು ಹೊಂದಿದೆ. ಇತ್ತೀಚೆಗೆ, ಬೆಂಗಳೂರಿನಲ್ಲಿ ನಮ್ಮ ಡ್ರೈವ್‌ಸ್ಪಾರ್ಕ್ ತಂಡದ ಪ್ರತಿನಿಧಿಗೆ ನೂತನ 'ಕ್ಯೂಸಿ1' ಇ-ಸ್ಕೂಟರ್‌ನ್ನು ಟೆಸ್ಟ್ ರೈಡ್ ನಡೆಸಲು ಅವಕಾಶ ಲಭ್ಯವಾಯಿತು. ಬನ್ನಿ.. ಈ ಸ್ಕೂಟರ್ ವಿನ್ಯಾಸವೇನು.. ಕಾರ್ಯಕ್ಷಮತೆ ಹೇಗಿದೆ & ಏನೆಲ್ಲಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂದು ತಿಳಿಯೋಣ.

ಹೋಂಡಾ ಕ್ಯೂಸಿ1 ವಿನ್ಯಾಸ & ವೈಶಿಷ್ಟ್ಯಗಳು: ಈ ನೂತನ ಎಲೆಕ್ಟ್ರಿಕ್ ಸ್ಕೂಟರ್ ಹಣಕ್ಕೆ ತಕ್ಕ ಉತ್ಪನ್ನವಾಗಿದೆ ಎಂದು ಹೇಳಬಹುದು. ಇದು ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಅದು ಬಹುತೇಕ 'ಆಕ್ಟಿವಾ ಇ'ಗೆ ಹೋಲಿಕೆಯಾಗುತ್ತದೆ. ಆದರೂ ಇವೆರೆಡು ಬೇರೆ-ಬೇರೆ ಎಂದು ತೋರಿಸಲು ವಿನ್ಯಾಸದಲ್ಲಿ ಕೆಲವೊಂದು ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ.
ಈ ಹೋಂಡಾ ಕ್ಯೂಸಿ1 ಇ-ಸ್ಕೂಟರ್, ಮುಂಭಾಗ (ಫ್ರಂಟ್) ಆಕ್ಟಿವಾ ಸ್ಕೂಟರ್‌ನಂತೆಯೇ ಹೆಡ್‌ಲೈಟ್ ಹೊಂದಿದೆ. ಆದರೆ, ಇದರ ಹ್ಯಾಂಡಲ್‌ಬಾರ್‌ನಲ್ಲಿ ಡಿಆರ್‌ಎಲ್‌ಗಳನ್ನು ಕೈಬಿಡಲಾಗಿದ್ದು, ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬದಲಾಗಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ವಿಶೇಷವಾಗಿ ಆಕ್ಟಿವಾ ಇ ಒಳಗೊಂಡಿರುವಂತೆ ಕ್ಯೂಸಿ1 ಸಹ ಲಗೇಜ್ ಹುಕ್ & ಯುಎಸ್‌ಬಿ-ಸಿ ಚಾರ್ಜಿಂಗ್ ಪಾಯಿಂಟ್ ಅನ್ನು ಪಡೆದಿದೆ.

ಹೊಸ ಸ್ಕೂಟರ್, ರೈಡರ್ ಸೀಟ್‌ನ ಕೆಳಭಾಗದಲ್ಲಿಯೂ ಮತ್ತೊಂದು ಚಾರ್ಜಿಂಗ್ ಪಾಯಿಂಟ್ ಹೊಂದಿದೆ. ಇದರಿಂದ ಬ್ಯಾಟರಿ ಪ್ಯಾಕ್‌ನ್ನು ಸುಲಭವಾಗಿ ಚಾರ್ಜ್ ಮಾಡಲು ಸಾಧ್ಯವಾಗಲಿದೆ. ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ 'ಸ್ಮಾರ್ಟ್ ಕೀ' ಆಯ್ಕೆಯನ್ನು ಒಳಗೊಂಡಿದ್ದರೆ ಈ ಕ್ಯೂಸಿ1 ಮಾಡೆಲ್ ಸಾಮಾನ್ಯ 'ಅನಲಾಗ್ ಕೀ'ಯನ್ನು ಒಳಗೊಂಡಿದೆ.
ನೂತನ ಹೋಂಡಾ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್ 26-ಲೀಟರ್ ಸಾಮರ್ಥ್ಯದ ಸ್ಟೋರೇಜ್ ಸ್ಪೇಸ್‌ನ್ನು ಪಡೆದಿದೆ. ಇಲ್ಲಿ ಪುಟ್ಟದ ಹೆಲ್ಮೆಟ್ ಅಥವಾ ಬ್ಯಾಗ್‌ನ್ನು ಸುಲಭವಾಗಿ ಇಡಬಹುದು. ಹಿಂಭಾಗ (ರೇರ್) ಈ ಸ್ಕೂಟರ್ ಅತ್ಯುತ್ತಮವಾದ ಟೈಲ್ ಲೈಟ್ & ಇಂಡಿಕೇಟರ್‌ಗಳನ್ನು ಹೊಂದಿದೆ. ಹಿಂಬದಿಯ ಸವಾರನಿಗೆ ಬಿಗಿಯಾದ ಹಿಡಿತ ಒದಗಿಸಲು ಸಿಂಗಲ್ ಪೀಸ್ ಗ್ರಾಬ್ ಹ್ಯಾಂಡಲ್‌ನ್ನು ಪಡೆದಿದೆ. ಇದು ಮಾತ್ರವಲ್ಲದೆ, ಕ್ಯೂಸಿ1 ಸ್ಕೂಟರ್ ಅಲಾಯ್ ವೀಲ್‌ಗಳ ನೆರವಿನಿಂದ ಚಲಿಸಬಲ್ಲದು.

ಹೋಂಡಾ ಕ್ಯೂಸಿ1 ಕಾರ್ಯಕ್ಷಮತೆ: ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 80 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರ ಬ್ಯಾಟರಿಯು 330ಡಬ್ಲ್ಯೂ ಆಫ್-ಬೋರ್ಡ್ ಚಾರ್ಜರ್ ಬಳಕೆಯಲ್ಲಿ ತುಂಬಾ ನಿಧಾನಗತಿಯಲ್ಲಿ ಚಾರ್ಜ್ ಆಗುತ್ತದೆ. ಶೇಕಡ 0 ರಿಂದ 80% ಚಾರ್ಜ್ ಆಗಲು 4 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ.
ಅದೇ ಬ್ಯಾಟರಿ ಪ್ಯಾಕ್ ಪೂರ್ತಿಯಾಗಿ ಚಾರ್ಜ್ ಆಗುವುದಕ್ಕೆ 6 ಗಂಟೆ 50 ನಿಮಿಷಗಳು ಬೇಕಾಗುತ್ತದೆ. ಈ ಸ್ಕೂಟರ್‌ನಲ್ಲಿ ಹಬ್-ಮೌಂಟೆಡ್ ಬ್ರಷ್‌ಲೆಸ್ ಡಿಸಿ ಮೋಟಾರ್ ಉಪಯೋಗ ಮಾಡಲಾಗಿದೆ. ಇದು 1.8 ಕೆಡಬ್ಲ್ಯೂ (2.4 ಬಿಹೆಚ್‌ಪಿ) ಅಶ್ವ ಶಕ್ತಿ ಹಾಗೂ 77 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದ್ದು, ಕೆಲವೇ 9.1 ಸೆಕೆಂಡುಗಳಲ್ಲಿ 0-40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ನೂತನ ಹೋಂಡಾ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ & ಹಿಂಭಾಗ (ರೇರ್) 5-ಸ್ಟೆಪ್ ಅಡ್ಜಸ್ಟಬಲ್ , ಹೈಡ್ರಾಲಿಕ್ ಟ್ವಿನ್ ಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಒಳಗೊಂಡಿದೆ. ಹಾಗೆಯೇ ಮುಂದೆ 12-ಇಂಚಿನ ವೀಲ್ & 90/100 ಅಳತೆಯ ಟೈರ್‌ನ್ನು ಹೊಂದಿದೆ. ಹಿಂದೆ 10-ಇಂಚಿನ ವೀಲ್ & 90/100 ಅಳತೆಯ ಟೈರ್‌ನ್ನು ಪಡೆದಿದೆ.
ಈ ಸ್ಕೂಟರ್ ಸವಾರರ ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) 130 ಎಂಎಂ ಹಾಗೂ ಹಿಂಭಾಗ (ರೇರ್) 110 ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಇದು 89.5 ಕೆಜಿ ತೂಕವಿದ್ದು, 1,826 ಎಂಎಂ ಉದ್ದ, 701 ಎಂಎಂ ಅಗಲ ಹಾಗೂ 1,129 ಎಂಎಂ ಎತ್ತರ ಕೂಡ ಇದೆ. 1,275 ಎಂಎಂ ಉದ್ದದ ವೀಲ್‌ಬೇಸ್, 169 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 704 ಎಂಎಂ ಉದ್ದವಿರುವ ಸೀಟ್‌ನ್ನು ಒಳಗೊಂಡಿದೆ.
ಚಾಲನಾ ಅನುಭವ: ಹೊಸ ಹೋಂಡಾ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್, ಅದ್ಭುತವಾದ ಚಾಲನಾ ಅನುಭವ ಒದಗಿಸಿತು. ಇದರ ಮೇಲೆ ಸವಾರರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಆದರೂ ಕೆಲವೊಂದು ಎಡರು ತೊಡರುಗಳು ಇದ್ದೆ ಇದೆ. ಪೀಕ್ ಟಾರ್ಕ್ ಕಡಿಮೆ ಉತ್ಪಾದಿಸುವುದರಿಂದ ಓವರ್‌ಟೇಕ್ ಮಾಡುವಾಗ ಕಿರಿಕಿರಿ ಅನುಭವಿಸಬೇಕಾಗಿದೆ.
ಹೋಂಡಾ ಕ್ಯೂಸಿ1 ಸ್ಕೂಟರ್ 50 ಕೆಎಂಪಿಹೆಚ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಅದರ ಹೊರತಾಗಿ ಚಾಲನೆ ವೇಳೆಯಲ್ಲಿ ಈ ವೇಗವನ್ನು ಮುಟ್ಟುವುದು ಕಷ್ಟದ ಕೆಲಸವಾಗಿತ್ತು. ಮೆತ್ತನೆಯ ಸೀಟ್‌ಗಳನ್ನು ಹೊಂದಿರುವುದರಿಂದ ಸುಲಭವಾಗಿ ಸಂಚರಿಸಬಹುದು. ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಚೆನ್ನಾಗಿಯೇ ಕೆಲಸ ಮಾಡಿದವು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನೂತನ ಹೋಂಡಾ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗೆ ತಕ್ಕಂತೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ದಿನಬಳಕೆಗೆ ಸುಲಭವಾಗಿ ಬಳಕೆ ಮಾಡಬಹುದು. ಅದರಲ್ಲೂ ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಹೆಚ್ಚು ಸೂಕ್ತವಾಗಲಿದೆ. ಮುಂಬರಲಿರುವ ದಿನಗಳಲ್ಲಿ ಹೊಸ ಕ್ಯೂಸಿ1ಗೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








