ಅಟಮ್ 1.0 ಎಲೆಕ್ಟ್ರಿಕ್ ಬೈಕ್ ಮಾದರಿಗಾಗಿ ಪೇಟೆಂಟ್ ಪಡೆದುಕೊಂಡ ಅಟುಮೊಬೈಲ್
ಸ್ಟಾರ್ಟ್-ಅಪ್ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳ ಉತ್ಪಾದನೆ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದು, ಹೈದ್ರಾಬಾದ್ ಮೂಲದ ಅಟುಮೊಬೈಲ್ ಪ್ರೈ.ಲೀ ಕಂಪನಿಯು ಕೂಡಾ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡಬಲ್ಲ ಆಕರ್ಷಕ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಸಿದ್ದಪಡಿಸಿದೆ.

ಅಟುಮೊಬೈಲ್ ಪ್ರೈ.ಲೀ ಕಂಪನಿಯು ಈಗಗಾಲೇ ತನ್ನ ಬಹುನೀರಿಕ್ಷಿತ ಅಟಮ್ 1.0 ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಕೂಡಾ ಮಾಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ಅತ್ಯತ್ತಮ ಬ್ಯಾಟರಿ ಪ್ಯಾಕ್ ಹೊಂದಿರುವ ಹೊಸ ಬೈಕ್ ಶೀಘ್ರದಲ್ಲೇ ದೇಶದ ಪ್ರಮುಖ ನಗರಗಳಲ್ಲಿ ಮಾರಾಟಕ್ಕೆ ಲಭ್ಯವಾಗುತ್ತಿದೆ. ಹೊಸ ಬೈಕ್ ಮಾರಾಟ ಆರಂಭಿಸುವುದಕ್ಕೂ ಮುನ್ನ ಹೊಸ ಬೈಕಿನ ವಿನ್ಯಾಸಕ್ಕಾಗಿ ಕೇಂದ್ರ ಸಾರಿಗೆ ಇಲಾಖೆಯಿಂದ ಪೇಟೆಂಟ್ ಪಡೆದುಕೊಂಡಿದೆ.

ಸದ್ಯ ಬಿಡುಗಡೆಯಾಗಿರುವ ಬೈಕ್ ಮಾದರಿಯಲ್ಲಿ ಹಲವಾರು ಹೊಸ ಮಾದರಿಯ ತಾಂತ್ರಿಕ ಅಂಶಗಳಿದ್ದು, ಹೊಸ ವಿನ್ಯಾಸದ ಅಟಮ್ 1.0 ಬೈಕಿನ ಫ್ಯೂಲ್ ಟ್ಯಾಂಕ್ ಮಾದರಿಯ ಬ್ಯಾಟರಿ ಪ್ಯಾಕ್, ಬಾಡಿ ಪ್ರೇಮ್‌ಗಳಿಗೆ ಕಂಪನಿಯು ಪೇಟೆಂಟ್ ಪಡೆದುಕೊಂಡಿದೆ.

ಹೊಸ ವಿನ್ಯಾಸದ ಅಟಮ್ 1.0 ಎಲೆಕ್ಟ್ರಿಕ್ ಬೈಕಿನಲ್ಲಿ ಹಲವಾರು ಹೊಸ ಫೀಚರ್ಸ್ ಮತ್ತು ಅತ್ಯುತ್ತಮ ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಬಜೆಟ್ ಬೆಲೆಯ ಬೈಕ್ ಮಾದರಿಗಾಗಿ ಕಂಪನಿಯು ಪೇಟೆಂಟ್ ಪಡೆಯುವಲ್ಲಿ ಯಶಸ್ವಿಯಾಗಿದೆ.

ಕಫೆ ರೇಸರ್ ವಿನ್ಯಾಸ ಹೊಂದಿರುವ ಅಟಮ್ 1.0 ಎಲೆಕ್ಟ್ರಿಕ್ ಬೈಕ್ ಮಾದರಿಯಲ್ಲಿ ಆಕರ್ಷಕ ಹೆಡ್‌ಲ್ಯಾಂಪ್, ಆಸನ ಶೈಲಿ, ಫುಟ್ ಪೆಡಲ್ ಮತ್ತು ಸೈಡ್ ಪ್ಯಾನೆಲ್‌ಗಳ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಹೊಸ ಬೈಕ್ ಅನ್ನು ಅಟುಮೊಬೈಲ್ ಪ್ರೈ.ಲೀ ಕಂಪನಿಯು ಶೀಘ್ರದಲ್ಲೇ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಕೋಲ್ಕತಾ ಮತ್ತು ಚೆನ್ನೈ ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.

ಇನ್ನು ಅಟಮ್ 1.0 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಗರಿಷ್ಠ ವೇಗವನ್ನು ಪ್ರತಿ ಗಂಟೆ 25ಕಿ.ಮೀ ಗೆ ಸೀಮಿತಗೊಳಿಸಲಾಗಿದ್ದು, ಹೊಸ ಮೋಟಾರ್ ಸೈಕಲ್ ಬೆಲೆಯು ರೂ. 50 ಸಾವಿರದಿಂದ ಆರಂಭಗೊಳ್ಳುತ್ತದೆ.

ಹೊಸ ಅಟಮ್ 1.0 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಮತ್ತೊಂದು ವಿಶೇಷತೆ ಅಂದ್ರೆ ಲೋ ಸ್ಪೀಡ್ ವಾಹನ ಎಂದು ಪರಿಗಣಿಸಿರುವುದರಿಂದ ಈ ವಾಹನದ ನೋಂದಣಿ ಅವಶ್ಯಕತೆಯಿಲ್ಲ ಮತ್ತು ಈ ಬೈಕ್ ಚಾಲನೆಗೆ ಡ್ರೈವಿಂಗ್ ಲೆಸೆನ್ಸ್ ಕೂಡಾ ಅವಶ್ಯಕತೆ ಇರುವುದಿಲ್ಲ.

ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಟೋಮೆಟಿವ್ ಟೆಕ್ನಾಲಜಿ(ಐಸಿಎಟಿ) ಸಂಸ್ಥೆಯಿಂದ ಹೊಸ ಅಟಮ್ 1.0 ಎಲೆಕ್ಟ್ರಿಕ್ ಬೈಕ್ ಪ್ರಮಾಣೀಕೃತಗೊಂಡಿದ್ದು, ವಾಣಿಜ್ಯ ಬಳಕೆಗೆ ಈಗಾಗಲೇ ಅನುಮತಿ ಪಡೆದುಕೊಂಡಿದೆ.

ಹೊಸ ಬೈಕಿನಲ್ಲಿರುವ 48V 250W ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಪೂರ್ಣಯಾಗಿ ಚಾರ್ಜ್ ಆಗಲು ನಾಲ್ಕು ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಬ್ಯಾಟರಿ ಒಂದು ಬಾರಿ ಪೂರ್ತಿ ಚಾರ್ಜ್ ಆದಲ್ಲಿ ಗರಿಷ್ಠ 100 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಅಟಮ್ 1.0 ಬೈಕಿನಲ್ಲಿರುವ ಬ್ಯಾಟರಿ ಪ್ಯಾಕ್ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲು ಗರಿಷ್ಠ 1 ಯನಿಟ್ ವಿದ್ಯುತ್ ಬಳಕೆ ಮಾಡಿಕೊಳ್ಳಲಿದ್ದು, 1 ಯುನಿಟ್ ವಿದ್ಯುತ್ ಬೆಲೆಯು ರೂ.7 ರಿಂದ ರೂ. 10 ಖರ್ಚು ತಗುಲಿದರೂ 100 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಜೊತೆಗೆ ಹೊಸ ಎಲೆಕ್ಟ್ರಿಕ್ ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್‌ಲೈಟ್, ಎಲ್ಇಡಿ ಟರ್ನ್ ಇಂಡಿಕೇಟರ್, ಸ್ಟೈಲಿಶ್ ಕಫೆ ರೇಸರ್ ವಿನ್ಯಾಸದ ಆಸನ ಸೌಲಭ್ಯ, ಫ್ಯಾಟ್ ಟೈರ್, 280-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್, ಡಿಜಿಟಲ್ ಡಿಸ್‌ಪ್ಲೇ, ಇನ್‌ಸ್ಟ್ರಮೆಂಟ್ ಕ್ಲಸ್ಟರ್ ಸೌಲಭ್ಯಗಳಿವೆ.


Click it and Unblock the Notifications