ಭಾರತದಲ್ಲಿ ಬಿಡುಗಡೆಯಾಗಲಿದೆ ಸಿಎಫ್‌ಮೊಟೊ ಮೊದಲ ಇವಿ ಸ್ಕೂಟರ್
ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವು ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಹಲವು ಆಟೋ ಕಂಪನಿಗಳು ಗ್ರಾಹಕರ ಬೇಡಿಕೆ ಅನುಸಾರವಾಗಿ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿವೆ.

ಚೀನಿ ಮಾರುಕಟ್ಟೆಯಲ್ಲಿ ಕೆಟಿಎಂ ಪಾಲುದಾರ ಕಂಪನಿಯಾಗಿರುವ ಸಿಎಫ್‌ಮೊಟೊ ಭಾರತದಲ್ಲೂ ಸಹ ವಿವಿಧ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಮಧ್ಯಮ ಗಾತ್ರದ ಪ್ರೀಮಿಯಂ ಬೈಕ್ ಮಾದರಿಗಳ ಜೊತೆಗೆ ಭವಿಷ್ಯದ ವಾಹನ ಮಾದರಿಗಳಾದ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ ಮೇಲೂ ಗಮನಹರಿಸಿದೆ.

ಸಿಎಫ್ ಮೊಟೊ ಕಂಪನಿಯ ಈಗಾಗಲೇ ತನ್ನ ಹೊಸ ಇವಿ ಉತ್ಪನ್ನಗಳನ್ನು ಚೀನಿ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದ್ದು, ಪ್ರೀಮಿಯಂ ಇವಿ ಸ್ಕೂಟರ್ ಅನ್ನು ಕಂಪನಿಯು ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿದೆ.

ಸದ್ಯ ಚೀನಿ ಮಾರುಕಟ್ಟೆಯಲ್ಲಿ ಸಿಎಫ್‌ಮೊಟೊ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಹೊ ಕಂಪನಿಯು ಸಿಎಫ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಅಭಿವೃದ್ದಿಪಡಿಸಿದ್ದು, ಭಾರತದಲ್ಲಿ ಸಿಎಫ್‌ಮೊಟೊ ಹೆಸರಿನಲ್ಲಿಯೇ ಮಾರಾಟವಾಗಲಿರುವ ಹೊಸ ಇವಿ ಸ್ಕೂಟರ್ ಎಥರ್ 450ಎಕ್ಸ್ ಸ್ಕೂಟರ್‌ಗೆ ಉತ್ತಮ ಪೈಪೋಟಿ ನೀಡಲಿದೆ.

ಹೊಸ ಇವಿ ವಾಹನಗಳಿಗೆ ಜಿಹೊ ಕಂಪನಿಯೇ ವಿವಿಧ ರೇಂಜ್ ಹೊಂದಿರುವ ಹಲವು ಬ್ಯಾಟರಿ ಪ್ಯಾಕ್ ಸಿದ್ದಪಡಿಸಿದ್ದು, ಸೈಬರ್ ಕಾನ್ಸೆಪ್ಟ್ ಇವಿ ಸ್ಕೂಟರ್ ಮಾದರಿಯಲ್ಲಿ 4kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ.

ಜಿಹೊ ಇವಿ ಸ್ಕೂಟರ್ ಮಾದರಿಯಲ್ಲಿ ಅತ್ಯತ್ತಮ ಪರ್ಫಾಮೆನ್ಸ್‌ನೊಂದಿಗೆ ಅಧಿಕ ಮಟ್ಟದ ಮೈಲೇಜ್ ರೇಂಜ್ ಹೊಂದಿದ್ದು, ಪ್ರತಿ ಗಂಟೆಗೆ 110ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಈ ಇವಿ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 130 ಕಿ.ಮೀ ನಿಂದ 150 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಗ್ರಾಹಕರನ್ನು ಸೆಳೆಯಲು ಹೊಸ ಸ್ಕೂಟರ್‌ನಲ್ಲಿರುವ ಮತ್ತೊಂದು ಪ್ರಮುಖ ಅಂಶವೆಂದರೆ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದ್ದು, ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಕನೆಕ್ಟೆಡ್ ಫೀಚರ್ಸ್‌ಗಳಿದ್ದು, ಹೊಸ ಕನೆಕ್ಟೆಡ್ ಫೀಚರ್ಸ್ ಮೂಲಕ ಹೊಸ ವಾಹನಕ್ಕೆ ಗರಿಷ್ಠ ಭದ್ರತೆ ನೀಡುತ್ತವೆ.

ಹೀಗಾಗಿ ಸಿಎಫ್‌ಮೊಟೊ ಕಂಪನಿಯು ತನ್ನ ಸಹ ಬ್ರಾಂಡ್ ಮಾದರಿಯನ್ನು ಭಾರತದಲ್ಲೂ ಬಿಡುಗಡೆಗೆ ಉತ್ಸುಕವಾಗಿದ್ದು, ಗರಿಷ್ಠ ಮಟ್ಟದ ಗ್ರಾಹಕನ್ನು ತಲುಪಲು ದೇಶಾದ್ಯಂತ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ.

ಸದ್ಯ ಬೆಂಗಳೂರು, ಮುಂಬೈ, ಪುಣೆ ಮತ್ತು ದೆಹಲಿ ಸೇರಿದಂತೆ ಕೆಲವೇ ಮಾಹಾನಗರಗಳಲ್ಲಿ ಮಾತ್ರ ಮಾರಾಟ ಮಳಿಗೆ ಹೊಂದಿರುವ ಸಿಎಫ್‌ಮೊಟೊ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ನಗರಗಳಲ್ಲಿ ಮಾರುಕಟ್ಟೆ ವಿಸ್ತರಿಸಲಿದ್ದು, ಪ್ರೀಮಿಯಂ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ.

ಸಿಎಫ್‌ಮೊಟೊ ಕಂಪನಿಯು ಭಾರತದಲ್ಲಿ 2022ರ ವೇಳೆಗೆ ತನ್ನ ಮೊದಲ ಇವಿ ಸ್ಕೂಟರ್ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಭಾರತದಲ್ಲಿ ಸಹಭಾಗಿತ್ವದ ಕಂಪನಿಯಾದ ಎಎಂಡಬ್ಲ್ಯು ಮೋಟಾರ್‌ಸೈಕಲ್ ಕಂಪನಿ ಜೊತೆಗೂಡಿ ಹೊಸ ವಾಹನಗಳನ್ನು ಮಾರಾಟ ಮಾಡುತ್ತಿದೆ.

ಚೀನಿ ಮಾರುಕಟ್ಟೆಯಲ್ಲಿ ಸಿಎಫ್‌ಮೊಟೊ ಜೊತೆಗೆ ಕೆಟಿಎಂ ಕಂಪನಿಯು ಬೃಹತ್ ಪ್ರಮಾಣದ ಯೋಜನೆಗಾಗಿ ಸಹಭಾಗೀತ್ವ ಹೊಂದಿದ್ದರೂ ಕೂಡಾ ಭಾರತದಲ್ಲಿ ಪ್ರತ್ಯೇಕವಾಗಿ ವ್ಯವಹಾರ ಕೈಗೊಳ್ಳುತ್ತಿದ್ದು, ಕೆಟಿಎಂ ಕಂಪನಿಯು ಭಾರತದಲ್ಲಿ ಬಜಾಜ್ ಅಧೀನ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಭಾರತದಲ್ಲಿ ಕೆಟಿಎಂ ನಿಂದ ಅಂತರ ಕಾಯ್ದುಕೊಂಡಿರುವ ಸಿಎಫ್‌ಮೊಟೊ ಎಎಂಡಬ್ಲ್ಯು ಮೋಟಾರ್‌ಸೈಕಲ್ ಕಂಪನಿ ಜೊತೆಗೂಡಿ ಹೊಸ ವಾಹನಗಳನ್ನು ಭಾರತದಲ್ಲೇ ಅಭಿವೃದ್ದಿಪಡಿಸುವ ಯೋಜನೆ ಹೊಂದಿದೆ.


Click it and Unblock the Notifications








