ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಗೋಜೀರೊ
ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಗೋಜೀರೊ ದೇಶಿಯ ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಸ್ಕೆಲ್ಲಿಗ್ ಲೈಟ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಿದೆ.

ಸ್ಕೆಲ್ಲಿಗ್ ಲೈಟ್ ಎಲೆಕ್ಟ್ರಿಕ್ ಸೈಕಲ್'ನ ಆರಂಭಿಕ ಬೆಲೆ ರೂ.19,999 ಗಳಾಗಿದೆ. ಸ್ಕೆಲ್ಲಿಗ್ ಲೈಟ್ ಎಲೆಕ್ಟ್ರಿಕ್ ಸೈಕಲ್ ಅನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಗೊಳಿಸುವ ಮೂಲಕ ಗೋಜೀರೊ ಕಂಪನಿಯು ಭಾರತದ ಇ-ಸೈಕಲ್ ಪ್ರಿಯರನ್ನು ಆಕರ್ಷಿಸಲು ಮುಂದಾಗಿದೆ.

ಸ್ಕೆಲ್ಲಿಗ್ ಲೈಟ್ ಎಲೆಕ್ಟ್ರಿಕ್ ಸೈಕಲ್ ಪೂರ್ತಿಯಾಗಿ ಚಾರ್ಜ್ ಆದ ನಂತರ 25 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಸೈಕಲ್'ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ. ಈ ಎಲೆಕ್ಟ್ರಿಕ್ ಸೈಕಲ್'ನಲ್ಲಿ 210 ವ್ಯಾ ಲಿಥಿಯಂ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ.

ಈ ಎಲೆಕ್ಟ್ರಿಕ್ ಸೈಕಲ್ ಅನ್ನು 2.5 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಈ ಸೈಕಲ್'ನಲ್ಲಿ ಅಲಾಯ್ ಸ್ಟೆಮ್ ಹ್ಯಾಂಡ್, 26 ಎಕ್ಸ್ 1.95 ಟಯರ್, ವಿ-ಬ್ರೇಕ್ ಹಾಗೂ ಫ್ರಂಟ್ ವ್ಹೀಲ್ ಫೋರ್ಕ್ ಅಳವಡಿಸಲಾಗಿದೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ದಿನ ನಿತ್ಯ ವಾಹನಗಳನ್ನು ಬಳಸುವ ವಾಹನ ಸವಾರರು ಕಂಗಾಲಾಗಿದ್ದಾರೆ.

ಈ ಕಾರಣಕ್ಕೆ ವಾಹನ ಸವಾರರು ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಆರಂಭಿಸಿದ್ದಾರೆ. ಇದರ ಲಾಭ ಪಡೆಯಲು ಗೋಜೀರೊ ದೇಶಿಯ ಮಾರುಕಟ್ಟೆಯಲ್ಲಿ ಸ್ಕೆಲ್ಲಿಗ್ ಲೈಟ್ ಇ ಸೈಕಲ್ ಬಿಡುಗಡೆಗೊಳಿಸಿದೆ.

ಸ್ಕೆಲ್ಲಿಗ್ ಲೈಟ್ ಇ ಸೈಕಲ್ ಅನ್ನು ಭಾರತದ ನಗರವಾಸಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ನಗರವಾಸಿಗಳು ಹತ್ತಿರದಲ್ಲಿರುವ ಸ್ಥಳಗಳಿಗೆ ತೆರಳಲು ಸಹ ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ.

ಸ್ಕೆಲ್ಲಿಗ್ ಲೈಟ್ ಎಲೆಕ್ಟ್ರಿಕ್ ಸೈಕಲ್ ಇಂಧನವನ್ನು ಉಳಿಸಲು ಹಾಗೂ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ನೆರವಾಗುತ್ತದೆ ಎಂದು ಗೋಜೀರೊ ಕಂಪನಿ ಹೇಳಿದೆ. ಅಗತ್ಯವಿದ್ದರೆ ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಸಾಮಾನ್ಯ ಸೈಕಲ್ ಆಗಿಯೂ ಬಳಸಬಹುದು.

ಚಾರ್ಜ್ ಮುಗಿದ ನಂತರ ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಸಾಮಾನ್ಯ ಸೈಕಲ್'ನಂತೆ ಪೆಡಲ್ ಮಾಡುವ ಮೂಲಕ ಚಾಲನೆ ಮಾಡಬಹುದು. ಇದರಿಂದ ಈ ಎಲೆಕ್ಟ್ರಿಕ್ಸೈಕಲ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ನೆರವಾಗಲಿದೆ.


Click it and Unblock the Notifications