ಕೋವಿಡ್ ಹೆಚ್ಚಳ ಪರಿಣಾಮ ಬೈಕ್ ಉತ್ಪಾದನೆಯನ್ನು ಮತ್ತೆ ಸ್ಥಗಿತಗೊಳಿಸಿದ ಹೀರೋ ಮೋಟೊಕಾರ್ಪ್
ದೇಶಾದ್ಯಂತ ಕೋವಿಡ್ 2ನೇ ಅಲೆ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಭಾಗಶಃ ಲಾಕ್ಡೌನ್, ಕರ್ಫ್ಯೂ ಕೈಗೊಳ್ಳಲಾಗುತ್ತಿದ್ದು, ಹೊಸ ಸುರಕ್ಷಾ ಕ್ರಮಗಳ ಪರಿಣಾಮ ಆಟೋ ಉದ್ಯಮವು ಸ್ತಬ್ಧವಾಗಿದೆ.

ಕಳೆದ ವರ್ಷದ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಸುಧಾರಿಸಿಕೊಳ್ಳುತ್ತಿದ್ದ ಆಟೋ ಉದ್ಯಮವು ಇದೀಗ ಮತ್ತೊಮ್ಮೆ ಲಾಕ್‌ಡೌನ್ ಪರಿಣಾಮ ನಷ್ಟ ಭೀತಿ ಎದುರಿಸುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ನೆಲ ಕಚ್ಚಿದೆ. ಕೋವಿಡ್ ಹೆಚ್ಚಳ ನಡುವೆಯೂ ದೇಶದ ಪ್ರಮುಖ ಆಟೋ ಕಂಪನಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡುತ್ತಿದ್ದು, ವಾಹನ ಮಾರಾಟದಲ್ಲೂ ಕೂಡಾ ಹೊಸ ತಂತ್ರಗಳೊಂದಿಗೆ ಉದ್ಯಮ ವ್ಯವಹಾರ ಕೈಗೊಳ್ಳುತ್ತಿವೆ.

ದೇಶದ ಅತಿದೊಡ್ಡ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಪರಿಸ್ಥಿತಿಗೆ ಅನುಗುಣವಾಗಿ ಕಳೆದ ವಾರವಷ್ಟೇ ಹೊಸ ವಾಹನ ಉತ್ಪಾದನೆಯನ್ನು 4 ದಿನಗಳ ಕಾಲ ತಾತ್ಕಾಲಿಕವಾಗಿ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ಇಂದಿನಿಂದ ಆರಂಭವಾಗಬೇಕಿದ್ದ ಬೈಕ್ ಉತ್ಪಾದನೆಯನ್ನು ಮತ್ತೆ ಐದು ದಿನಗಳ ಕಾಲ ಮುಂದೂಡಿಕೆ ಮಾಡಲಾಗಿದ್ದು, ಹೊಸ ಮಾರ್ಗಸೂಚಿಯೆಂತೆ ವಾಹನ ಉತ್ಪಾದನೆಗಾಗಿ ತಯಾರಿ ನಡೆಸಲಾಗಿದೆ. ಈ ತಿಂಗಳು 16ರ ನಂತರವಷ್ಟೇ ಹೊಸ ವಾಹನ ಉತ್ಪಾದನೆಯನ್ನು ಪುನಾರಂಭ ಮಾಡಲಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಸಂಕಷ್ಟದಲ್ಲೂ ಸರ್ಕಾರದ ಜೊತೆ ಕೈಜೋಡಿಸಿದೆ.

ಕೋವಿಡ್ ತಗ್ಗಿಸಲು ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‍ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ದೇಶದ ಅತಿ ದೊಡ್ದ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಕೂಡಾ ಕೋವಿಡ್ ಸೋಂಕಿತರಿಗೆ ಸರಿಯಾದ ಸಮಯಕ್ಕೆ ವೈದ್ಯಕೀಯ ಸೇವೆ ಒದಗಿಸಲು ಕೋವಿಡ್ ಕೇರ್ ತೆರದಿದೆ.

ಉತ್ತರಾಖಂಡನಲ್ಲಿರುವ ಹರಿದ್ವಾರದ ರಾಮಕೃಷ್ಣ ಮಿಷನ್ ಸೇವಾಶ್ರಮ ಮತ್ತು ಹರಿದ್ವಾರ ಜಿಲ್ಲಾಡಳಿತ ಜೊತೆಗೂಡಿ ಕೋವಿಡ್ ಕೇರ್ ಆರಂಭಿಸಿದ್ದು, 122 ಹಾಸಿಗೆಗಳ ಸೌಲಭ್ಯದ ಕೋವಿಡ್ ಕೇರ್ ಕೇಂದ್ರದಲ್ಲಿ ಹಲವಾರು ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿದೆ.

ಹೀರೋ ಮೋಟೊಕಾರ್ಪ್ ಕಂಪನಿಯು 'ಹೀರೋ ವಿ ಕೇರ್' ಸಾಮಾಜಿಕ ಕಾರ್ಯಕ್ರಮದಡಿಯಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು, ಹರಿದ್ವಾರ ಜಿಲ್ಲಾಡಳಿತವು ವೈದ್ಯಕೀಯ ಸೇವೆಗಳನ್ನು ನಿರ್ವಹಣೆ ಮಾಡುತ್ತಿದೆ.

ರಾಮಕೃಷ್ಣ ಮಿಷನ್ ಸೇವಾಶ್ರಮದಲ್ಲಿ ಸಿದ್ದಗೊಂಡಿರುವ 122 ಹಾಸಿಗೆಗಳ ಸೌಲಭ್ಯದ ಕೋವಿಡ್ ಕೇರ್ ಸೆಂಟರ್‌ನಲ್ಲಿ ಆಕ್ಸಿಜನ್ ಸಹಿತ 90 ಹಾಸಿಗೆಗಳಿವೆ. ಹಾಗೆಯೇ ಎಮರ್ಜನ್ಸಿ ವಾರ್ಡ್‍ನಲ್ಲಿ ಆಕ್ಸಿಜನ್ ಮತ್ತು ಪೋರ್ಟಬಲ್ ವೆಂಟಿಲೇಟರ್ ಸೌಲಭ್ಯವಿರುವ 16 ಹಾಸಿಗೆಗಳಿವೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಕೋವಿಡ್ ಐಸಿಯು ವಿಭಾಗದಲ್ಲಿ ಆಕ್ಸಿಜನ್ ಮತ್ತು ಬಿಐಪಿಎಪಿ ಯಂತ್ರದ ಸಹಿತ 08 ಹಾಸಿಗೆಗಳು ಲಭ್ಯವಿದ್ದು, 24x7 ಲ್ಯಾಬ್, ಸಿಟಿ ಸ್ಕ್ಯಾನ್ ಮತ್ತು 05 ಆಪರೇಷನ್ ಥಿಯೇಟರ್‌ಗಳನ್ನು ತೆರೆಯುವ ಮೂಲಕ ಸಮುದಾಯದ ರಕ್ಷಣೆಗೆ ಗರಿಷ್ಠ ಸಹಕಾರ ನೀಡಲಾಗುತ್ತಿದೆ.

ಕೋವಿಕ್ ಕೇರ್ ಜೊತೆಗೆ ಹೀರೋ ಮೋಟೊಕಾರ್ಪ್ ಕಂಪನಿಯು ದೆಹಲಿ ಮತ್ತು ಎನ್‍ಸಿಆರ್, ಹರಿಯಾಣ, ಉತ್ತರಾಖಂಡ್, ರಾಜಸ್ತಾನ ಮತ್ತು ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗಾಗಿ ವೈಯಕ್ತಿಕ ಪ್ರಯಾಣಕ್ಕಾಗಿ ಕಂಪನಿಯು ತನ್ನ ಮೋಟಾರ್‌ಸೈಕಲ್‌ಗಳ ಜೊತೆ ಬೈಕ್ ಆ್ಯಂಬುಲೆನ್ಸ್ ಸಹ ಒದಗಿಸುತ್ತಿದೆ.
MOST READ: ಕೋವಿಡ್ ಭೀತಿ: ಕಾರು ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಎಂಜಿ ಮೋಟಾರ್

ದೆಹಲಿ ಮತ್ತು ಹರಿಯಾಣದ ಕೆಲವು ಸರ್ಕಾರಿ ಆಸ್ಪತ್ರೆಗಳಿಗೆ ತುರ್ತು ವೈದ್ಯಕೀಯ ಬಳಕೆಗಾಗಿ ಮೆಡಿಕಲ್ ಆಕ್ಸಿಜನ್ ಸಿಲಿಂಡರ್ ಮತ್ತು ಆರೋಗ್ಯ ಕಾರ್ಯಕರ್ತರ ಬಳಕೆಗಾಗಿ ಪಿಪಿಇ ಕಿಟ್‍ಗಳನ್ನು ವಿವಿಧ ರಾಜ್ಯಗಳ ಆರೋಗ್ಯ ಅಧಿಕಾರಿಗಳಿಗೆ ಒದಗಿಸುತ್ತಿದ್ದು, ಸಾಂಕ್ರಾಮಿಕ ರೋಗದಿಂದ ಉಂಟಾಗುತ್ತಿರುವ ಸವಾಲುಗಳನ್ನು ಎದುರಿಸಲು ಹೀರೋ ಮೋಟೊಕಾರ್ಪ್ ಮತ್ತು ರಾಮಕೃಷ್ಣ ಮಿಷನ್ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications








