ಕರೋನಾ ವೈರಸ್ ಭೀತಿ: ಬೈಕ್ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಹೀರೋ ಮೋಟೊಕಾರ್ಪ್
ದೇಶಾದ್ಯಂತ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಭಾಗಶಃ ಲಾಕ್ಡೌನ್, ಕರ್ಫ್ಯೂ ಕೈಗೊಳ್ಳಲಾಗುತ್ತಿದ್ದು, ಹೊಸ ಸುರಕ್ಷಾ ಕ್ರಮಗಳ ಪರಿಣಾಮ ಆಟೋ ಉದ್ಯಮ ಮತ್ತೆ ನೆಲಕಚ್ಚುವ ಭೀತಿ ಎದುರಿಸುತ್ತಿದೆ.

ಕಳೆದ ವರ್ಷದ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಸುಧಾರಿಸಿಕೊಳ್ಳುತ್ತಿದ್ದ ಆಟೋ ಉದ್ಯಮವು ಇದೀಗ ಮತ್ತೆ ಲಾಕ್‌ಡೌನ್ ಭೀತಿ ಎದುರಿಸುತ್ತಿದ್ದು, ಮಹಾರಾಷ್ಟ್ರದಲ್ಲಿ ನೆಲೆಗೊಂಡಿರುವು ಹಲವು ಆಟೋ ಕಂಪನಿಗಳು ಈಗಾಗಲೇ ಕನಿಷ್ಠ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚಿದ್ದ ಸಂದರ್ಭದಲ್ಲೇ ಮತ್ತೆ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮಗಳೊಂದಿಗೆ ಕನಿಷ್ಠ ಪ್ರಮಾಣದ ಉತ್ಪಾದನೆ ಕೈಗೊಳ್ಳುತ್ತಿವೆ.

ಪುಣೆ ಸುತ್ತುಮತ್ತ ನೆಲೆಗೊಂಡಿರುವ ದೇಶದ ಪ್ರಮುಖ ಆಟೋ ಕಂಪನಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡುತ್ತಿದ್ದು, ವಾಹನ ಮಾರಾಟದಲ್ಲೂ ಕೂಡಾ ಹೊಸ ತಂತ್ರಗಳನ್ನು ಅಳವಡಿಸಿಕೊಂಡು ವೈರಸ್ ಹರಡುವಿಕೆ ತಡೆಯೊಂದಿಗೆ ಉದ್ಯಮ ವ್ಯವಹಾರ ಕೈಗೊಳ್ಳುತ್ತಿವೆ.

ಇದರ ನಡುವೆ ದೇಶದ ಅತಿದೊಡ್ಡ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಕೂಡಾ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದು, ಒಂದು ವಾರಗಳ ಕಾಲ ಸಂಪೂರ್ಣವಾಗಿ ಹೊಸ ವಾಹನ ಉತ್ಪಾದನೆಯನ್ನು ಬಂದ್ ಮಾಡಲಿದೆ.

ಹೊಸ ಸುರಕ್ಷಾ ಮಾರ್ಗಸೂಚಿಗೆ ಅನುಗುಣವಾಗಿ ವಾಹನ ಉತ್ಪಾದನಾ ಘಟಕವನ್ನು ಸ್ಯಾನಿಟೈಜ್ ಮಾಡಲು ನಿರ್ಧರಿಸಿದ್ದು, ಉತ್ಪಾದನೆ ಹೊರತುಪಡಿಸಿ ಕಾರ್ಪೊರೇಟ್ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂದಿದೆ. ಕಾರ್ಪೊರೇಟ್ ವ್ಯವಹಾರಗಳನ್ನು ಸಂಪೂರ್ಣವಾಗಿ ವರ್ಕ್ ಫ್ರಮ್ ಹೋಂ ವಿಧಾನವನ್ನು ಅಳವಡಿಸಿಕೊಂಡಿರುವುದರಿಂದ ಉದ್ಯಮ ವ್ಯವಹಾರಗಳಿಗೆ ತೊಂದರೆಯಿಲ್ಲ ಎಂದಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಮಾರಾಟ ಮಳಿಗೆಗಳಲ್ಲೂ ಅತಿ ಕಡಿಮೆ ಉದ್ಯೋಗಿಗಳೊಂದಿಗೆ ಆನ್‌ಲೈನ್ ವ್ಯವಹಾರಗಳನ್ನು ಕೈಗೊಳ್ಳುತ್ತಿದೆ.

ಕೋವಿಡ್‌ನಿಂದಾಗಿ ಮುಂಜಾಗ್ರತ ಕ್ರಮವಾಗಿ ಲಭ್ಯವಿರುವ ಉದ್ಯೋಗಿಗಳೊಂದಿಗೆ ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಆಟೋ ಉದ್ಯಮವು ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದೆ.

ಬೈಕ್ ಮಾರಾಟವನ್ನು ಸರಳ ಮತ್ತು ಸುರಕ್ಷಿತವಾಗಿಸಲು ಹೀರೋ ಕಂಪನಿಯು ಪ್ರತ್ಯೇಕವಾದ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ಗ್ರಾಹಕರು ಶೋರೂಂಗಳಿಗೆ ಭೇಟಿ ನೀಡದೆ ತಮ್ಮ ಇಷ್ಟದ ವಾಹನಗಳನ್ನು ಆನ್‌ಲೈನ್ ಮೂಲಕವೇ ವಿಕ್ಷಣೆ ಮಾಡುವ ವರ್ಚುವಲ್ ಶೋರೂಂ ಆರಂಭಿಸಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಗ್ರಾಹಕರು ವಾಹನ ಖರೀದಿಗಾಗಿ ನೇರ ಶೋರೂಂ ಭೇಟಿ ನೀಡದೆಯೇ ಶೋರೂಂ ಭೇಟಿಯಾದ ಅನುಭವವನ್ನೇ ನೀಡಲು ವರ್ಚುವಲ್ ಶೋರೂಂ ಸಹಕಾರಿಯಾಗಿದ್ದು, ಕೋವಿಡ್ ಹರಡುವಿಕೆ ಸಂದರ್ಭದಲ್ಲಿ ಇದು ಗ್ರಾಹಕರಿಗೂ ಮತ್ತು ಶೋರೂಂ ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಕ್ರಮವಾಗಿದೆ.

ಹೊಸ ವಾಹನ ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂನಲ್ಲಿ ಭೇಟಿ ನೀಡಿದ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದ್ದು, 3ಡಿ ತಂತ್ರಜ್ಞಾನದ ಮೂಲಕ ನಿಮ್ಮ ಆಯ್ಕೆ ಮಾಡಿದ ವಾಹನದ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೊಸ ಸೌಲಭ್ಯದ ಮೂಲಕ ವಾಹನಗಳ ವಿವಿಧ ವೆರಿಯೆಂಟ್, ತಾಂತ್ರಿಕ ಅಂಶಗಳು ಮತ್ತು ದರ ಮಾಹಿತಿಗಳನ್ನು ಸುಲಭವಾಗಿ ವೀಕ್ಷಣೆ ಮಾಡಬಹುದಾಗಿದ್ದು, ವಾಹನಗಳ ಮಾರಾಟವನ್ನು ಸರಳ ಮತ್ತು ಸುರಕ್ಷಿತವಾಗಿಸಲು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳು ಸಾಕಷ್ಟು ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.


Click it and Unblock the Notifications