ಭಾರತದಲ್ಲಿ ಕೆಟಿಎಂ ಮತ್ತು ಹಸ್ಕ್‌ವರ್ನಾ ಬೈಕ್‌ಗಳ ಬೆಲೆಯಲ್ಲಿ ಮತ್ತೆ ಏರಿಕೆ
ಲಾಕ್‌ಡೌನ್ ಪರಿಣಾಮ ವಾಹನ ಬಿಡಿಭಾಗಗಳ ಪೂರೈಕೆಯಲ್ಲಿ ಉಂಟಾಗುತ್ತಿರುವ ಬಿಕ್ಕಟ್ಟಿನಿಂದಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತಿದ್ದು, ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಉತ್ಪಾದನಾ ವೆಚ್ಚ ನಿರ್ವಹಣೆಗಾಗಿ ಹೊಸ ವಾಹನಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿವೆ.

ಬಿಡಿಭಾಗಗಳ ವೆಚ್ಚದಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿರುವ ಪರಿಣಾಮ ಪ್ರೀಮಿಯಂ ಬೈಕ್ ಉತ್ಪಾದನಾ ಕಂಪನಿಯಾಗಿರುವ ಕೆಟಿಎಂ ಇಂಡಿಯಾ ಮತ್ತು ಸಹಸಂಸ್ಥೆಯಾದ ಹಸ್ಕ್‌ವರ್ನಾ ಕೂಡಾ ಭಾರತದಲ್ಲಿ ತಮ್ಮ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ ಮಾಡಿದ್ದು, ಹೊಸ ದರ ಪಟ್ಟಿಯಲ್ಲಿ ಕೆಟಿಎಂ ಮತ್ತು ಹಸ್ಕ್‌ವರ್ನಾ ನಿರ್ಮಾಣದ ಬಹುತೇಕ ದ್ವಿಚಕ್ರ ವಾಹನಗಳು ಬೆಲೆ ಏರಿಕೆ ಪಡೆದುಕೊಂಡಿವೆ.

ಹೊಸ ದರ ಪಟ್ಟಿಯಲ್ಲಿ ಕೆಟಿಎಂ ಮತ್ತು ಹಸ್ಕ್‌ವರ್ನಾ ಬೈಕ್‌ಗಳು ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 256 ಯಿಂದ ರೂ. 11,423 ಬೆಲೆ ಏರಿಕೆ ಪಡೆದುಕೊಂಡಿದ್ದು, 250 ಅಡ್ವೆಂಚರ್ ಮಾದರಿಯ ಬೆಲೆಯಲ್ಲಿ ಅತಿ ಕಡಿಮೆ ಏರಿಕೆ ಮತ್ತು 390 ಅಡ್ವೆಂಚರ್ ಮಾದರಿಯ ಬೆಲೆ ಹೆಚ್ಚು ಏರಿಕೆ ಮಾಡಲಾಗಿದೆ.

ಕೆಟಿಎಂ ನಿರ್ಮಾಣದ ಆರಂಭಿಕ ಬೈಕ್ ಮಾದರಿಯಾದ ಡ್ಯೂಕ್ 125 ಮಾದರಿಯು ಹೊಸ ದರಪಟ್ಟಿಯಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.70 ಲಕ್ಷ ಬೆಲೆ ಹೊಂದಿದ್ದರೆ 390 ಅಡ್ವೆಂಚರ್ ಮಾದರಿಯು ರೂ. 3.28 ಲಕ್ಷ ಬೆಲೆ ಹೊಂದಿದೆ.

ಹಸ್ಕ್‌ವರ್ನಾ ನಿರ್ಮಾಣದ ಬೈಕ್ ಮಾದರಿಗಳಾದ ಸ್ವಾರ್ಟ್‍ಪಿಲೆನ್ 250 ಬೈಕ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.2.10 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ವಿಟ್‍ಪಿಲೆನ್ 250 ಬೈಕ್ ಮಾದರಿಯ ಬೆಲೆಯನ್ನು ಸಹ ರೂ. 2.10 ಲಕ್ಷ ನಿಗದಿಪಡಿಸಲಾಗಿದೆ. ಹೊಸ ದರವು ಈ ವರ್ಷದಲ್ಲಿ ಮೂರನೇ ಬೆಲೆ ಏರಿಕೆ ಇದಾಗಿದ್ದು, ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಹೊಸ ವಾಹನಗಳು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ದುಬಾರಿ ದರ ಏರಿಕೆ ಪಡೆದುಕೊಳ್ಳುತ್ತಿವೆ.
| ಬೈಕ್ ಮಾದರಿಗಳು | ಹೊಸ ದರ | ಹಳೆಯ ದರ | ಹೆಚ್ಚಳವಾದ ದರ |
| ಡ್ಯೂಕ್ 125 | ರೂ. 1,70,515 | ರೂ. 1,60,575 | ರೂ. 9,940 |
| ಡ್ಯೂಕ್ 200 | ರೂ. 1,85,606 | ರೂ. 1,83,584 | ರೂ. 2,022 |
| ಡ್ಯೂಕ್ 250 | ರೂ. 2,28,736 | ರೂ. 2,21,888 | ರೂ. 6,848 |
| ಡ್ಯೂಕ್ 390 | ರೂ. 2,87,545 | ರೂ. 2,76,187 | ರೂ. 11,358 |
| ಆರ್‌ಸಿ 125 | ರೂ. 1,80,538 | ರೂ. 1,70,470 | ರೂ. 10,068 |
| ಆರ್‌ಸಿ 200 | ರೂ. 2,08,602 | ರೂ. 2,06,349 | ರೂ. 2,253 |
| ಆರ್‌ಸಿ 390 | ರೂ. 2,77,517 | ರೂ. 2,66,159 | ರೂ. 11,358 |
| 250 ಅಡ್ವೆಂಚರ್ | ರೂ. 2,54,995 | ರೂ. 2,54,739 | ರೂ. 256 |
| 390 ಅಡ್ವೆಂಚರ್ | ರೂ. 3,28,286 | ರೂ. 3,16,863 | ರೂ. 11,423 |
| ಸ್ವಾರ್ಟ್‍ಪಿಲೆನ್ 250 | ರೂ. 2,10,650 | ರೂ. 1,99,552 | ರೂ. 11,098 |
| ವಿಟ್‍ಪಿಲೆನ್ 250 | ರೂ. 2,10,022 | ರೂ. 1,98,925 | ರೂ. 11,097 |

ಇನ್ನು ಪರ್ಫಾಮೆನ್ಸ್ ಬೈಕ್ ಮಾದರಿಗಳ ಉತ್ಪಾದನೆಯಲ್ಲಿ ಸದ್ಯ ಮುಂಚೂಣಿಯಲ್ಲಿರುವ ಆಸ್ಟ್ರಿಯಾದ ಕೆಟಿಎಂ ಕಂಪನಿಯು ತನ್ನ ಸಹಭಾಗಿತ್ವದ ಕಂಪನಿಯಾದ ಬಜಾಜ್ ಆಟೋ ಜೊತೆಗೂಡಿ ಹೊಸ ಟ್ವಿನ್ ಸಿಲಿಂಡರ್ ಎಂಜಿನ್ ಪ್ರೇರಿತ ಮಧ್ಯಮ ಕ್ರಮಾಂಕದ ಸೂಪರ್ ಬೈಕ್‌ಗಳ ಅಭಿವೃದ್ದಿಗೆ ಮುಂದಾಗಿದ್ದು, ಹೊಸ ಯೋಜನೆಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ಕೆಟಿಎಂ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ 125 ಡ್ಯೂಕ್, 200 ಡ್ಯೂಕ್, ಡ್ಯೂಕ್ 250, ಡ್ಯೂಕ್ 390, ಆರ್‌ಸಿ 125 ಆರ್‌ಸಿ 200, ಆರ್‌ಸಿ 390, 250 ಅಡ್ವೆಂಚರ್, 390 ಅಡ್ವೆಂಚರ್ ಮತ್ತು 790 ಡ್ಯೂಕ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ 790 ಅಡ್ವೆಂಚರ್ ಜೊತೆಗೆ 490ಸಿಸಿ ವಿಭಾಗದಲ್ಲಿ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ.

390ಸಿಸಿ ನಂತರ 790ಸಿಸಿ ಬೈಕ್ ಮಾದರಿಗಳನ್ನು ಹೊಂದಿರುವ ಕೆಟಿಎಂ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ 490ಸಿಸಿ ಸಾಮರ್ಥ್ಯದ ಹೊಸ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸುವ ಯೋಜನೆಯಲ್ಲಿದೆ.

ಹೊಸ ಯೋಜನೆಗೆ ಪೂರಕವಾಗಿ ಈಗಾಗಲೇ ಪುಣೆಯಲ್ಲಿರುವ ಬಜಾಜ್ ಆಟೋ ಬೈಕ್ ಉತ್ಪಾದನಾ ಘಟಕದಲ್ಲಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸುತ್ತಿರುವ ಕೆಟಿಎಂ ಕಂಪನಿಯು ಹೊಸ ಬೈಕ್ ಮಾದರಿಗಳಿಗೆ ಟ್ವಿನ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಿದೆ.


Click it and Unblock the Notifications








