ಭಾರತದಲ್ಲಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ ಹೋಂಡಾ ಮೋಟಾರ್‌ಸೈಕಲ್
ಜಪಾನ್ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ಅಡ್ವೆಂಚರ್ ಬೈಕಿನ ಹೆಸರು ಮತ್ತು ಮಾಹಿತಿಯನ್ನು ಹೋಂಡಾ ಕಂಪನಿಯು ಬಹಿರಂಗಪಡಿಸಿಲ್ಲ.

ಹೋಂಡಾ ಹಾರ್ನೆಟ್ 2.0 ಆಧಾರಿತ ಅಡ್ವೆಂಚರ್ ಬೈಕ್ ಆಗಿರಬಹುದು. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಹೋಂಡಾ ಕಂಪನಿಯು ಎನ್‌ಎಕ್ಸ್200 ಎಂಬ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿದ್ದರು. ಮುಂಬರು ಹೊಸ ಹೋಂಡಾ ಅಡ್ವೆಂಚರ್ ಬೈಕ್ ಹಾರ್ನೆಟ್ 2.0 ಮಾದರಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ. ಹೊಸ ಹೋಂಡಾ ಎನ್‌ಎಕ್ಸ್200 ಬೈಕಿನ ವಿನ್ಯಾಸ ಮತ್ತು ಸ್ಟೈಲಿಂಗ್ ಅನ್ನು ಹೋಂಡಾ ಸಿಎಕ್ಸ್-02 ಕಾನ್ಸೆಪ್ಟ್ ಮತ್ತು ಸಿಬಿಎಫ್-190 ಟಿಆರ್ ಮಾದರಿಗಳಂತೆ ಇರಬಹುದು. ಈ ಹೊಂಡಾ ಅಡ್ವೆಂಚರ್ ಬೈಕ್ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳಾಗಿದೆ.

ಮುಂಬರುವ ಹೊಸ ಹೋಂಡಾ ಅಡ್ವೆಂಚರ್ ಬೈಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿರುತ್ತದೆ. ಈ ಮಾದರಿಯು ತನ್ನ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್ ಅನ್ನು ಹೋಂಡಾ ಹಾರ್ನೆಟ್ 2.0 ನೊಂದಿಗೆ ಹಂಚಿಕೊಳ್ಳುವ ಸಾಧ್ಯತೆಯಿದೆ.

ಇದು ಹೊಸ ಡೈಮಂಡ್ ಫ್ರೇಮ್ ಚಾಸಿಸ್ ಮೇಲೆ 184.4 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿರಬಹುದು. ಹೋಂಡಾ ಇಕೋ ಟೆಕ್ನಾಲಜಿ (ಎಚ್‌ಇಟಿ) ಯೊಂದಿಗೆ ಹೋಂಡಾದ ಪ್ರೋಗ್ರಾಮ್ ಮಾಡಲಾದ ಫ್ಯೂಯಲ್ ಇಂಜೆಕ್ಷನ್ (ಪಿಜಿಎಂ-ಎಫ್‌ಐ) ಸಿಸ್ಟಂ ಅನ್ನು ಹೊಂದಿರುತ್ತದೆ.

ಇದು ಬೈಕಿನ ಮೈಲೇಜ್ ಅನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಈ ಎಂಜಿನ್ 8,200 ಆರ್‌ಪಿಎಂನಲ್ಲಿ 17.2 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 16.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮುಂಬರುವ ಹೋಂಡಾ ಎನ್‌ಎಕ್ಸ್200 ಬೈಕ್ 17 ಇಂಚಿನ ಅಲಾಯ್ ವ್ಹೀಲ್ ಗಳ ಜೊತೆಗೆ ಫ್ಯಾಟ್ 110 ಎಂಎಂ ಫ್ರಂಟ್ ಮತ್ತು 140 ಎಂಎಂ ಹಿಂದಿನ ಟೈರ್‌ಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ.

ಇನ್ನು ಈ ಹೊಸ ಹೋಂಡಾ ಎನ್‌ಎಕ್ಸ್200 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸೆಟಪ್ ಅನ್ನು ಹೊಂದಿರಬಹುದು.

ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಸಿಂಗಲ್ ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಹೊಂದಿರುತ್ತದೆ.

ಹೊಸ ಹೋಂಡಾ ಅಡ್ವೆಂಚರ್ ಬೈಕಿನ ಬಗ್ಗೆ ಕಂಪನಿಯು ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಇನ್ನು ಈ ಹೋಂಡಾ ಅಡ್ವೆಂಚರ್ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಬಹುದು ಎಂದು ನಿರೀಕ್ಷಿಸುತ್ತೇವೆ.


Click it and Unblock the Notifications