ದಕ್ಷಿಣ ಭಾರತದಲ್ಲಿ ಮತ್ತಷ್ಟು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್
ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ರಿವೋಲ್ಟ್ ಮೋಟಾರ್ಸ್(Revolt Motors) ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ದೇಶದ ಪ್ರಮುಖ ನಗರಗಳಿಗೆ ತನ್ನ ಹೊಸ ಇವಿ ಬೈಕ್ ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದ್ದು, ಕಂಪನಿಯು ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ರಿವೋಲ್ಟ್ ಮೋಟಾರ್ಸ್ ಕಂಪನಿಯು ಇವಿ ಬೈಕ್ ಶೋರೂಂಗಳ ಸಂಖ್ಯೆಯನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿಸುತ್ತಿದ್ದು, ದೇಶದ ಪ್ರಮುಖ ಮೆಟ್ರೊ ನಗರಗಳಲ್ಲಿ ಇವಿ ಬೈಕ್ ಮಾರಾಟ ಸೌಲಭ್ಯವನ್ನು ತೆರೆಯುತ್ತಿದೆ. ಕಂಪನಿಯು 2022ರ ಕೊನೆಯಲ್ಲಿ ಒಟ್ಟು 59 ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದಿರುವುದಾಗಿ ಮಾಹಿತಿ ಹಂಚಿಕೊಂಡಿದ್ದು, ಕಂಪನಿಯು ಇತ್ತೀಚೆಗೆ ಬೆಂಗಳೂರಿನಲ್ಲಿ ಹೊಸ ಶೋರೂಂ ಆರಂಭದೊಂದಿಗೆ ಕೊಯಿಮತ್ತೂರು ಮತ್ತು ಮಧುರೈನಲ್ಲಿ ಹೊಸ ಶೋರೂಂ ಆರಂಭಿಸಿದೆ.

ಆರಂಭದಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಮಾರಾಟ ಮಳಿಗೆಗಳನ್ನು ಹೊಂದಿದ್ದ ರಿವೋಲ್ಟ್ ಕಂಪನಿಯು ಇದೀಗ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾರಾಟ ಸಂಖ್ಯೆಯನ್ನು ಹೆಚ್ಚಿಸಿದ್ದು, ಬೆಂಗಳೂರಿನಲ್ಲಿ ಮೊದಲ ಶೋರೂಂ ನಂತರ ಸದ್ಯದಲ್ಲೇ ಮತ್ತೆರಡು ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿದೆ.

ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಿವೋಲ್ಟ್ ಕಂಪನಿಯು ಆರ್‌ವಿ400 ಇವಿ ಬೈಕ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಹೊಸ ಮಾರಾಟ ಮಳಿಗೆಗಳೊಂದಿಗೆ ಕಂಪನಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ಫೇಮ್ 2 ಯೋಜನೆಯಡಿ ಗರಿಷ್ಠ ಸಬ್ಸಡಿಯೊಂದಿಗೆ ರಿವೋಲ್ಟ್ ಬೈಕ್ ಮಾದರಿಗಳು ಮಾರಾಟಗೊಳ್ಳುತ್ತಿದ್ದು, ಆರಂಭದಲ್ಲಿ ಆರ್‌ವಿ300 ಮತ್ತು ಆರ್‌ವಿ400 ಮಾದರಿಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಆಧರಿಸಿ ಆರ್‌ವಿ300 ಮಾದರಿಯನ್ನು ಸ್ಥಗಿತಗೊಳಿಸಿ ಆರ್‌ವಿ400 ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ಕೇಂದ್ರ ಸರ್ಕಾರ ಫೇಮ್ 2 ಸಬ್ಸಡಿ ಒಳಗೊಂಡು ಹೊಸ ಬೈಕ್ ಮಾದರಿಯು ರೂ. 1.25 ಲಕ್ಷ ಬೆಲೆ ಹೊಂದಿದ್ದು, ಕೇಂದ್ರದ ಫೇಮ್ 2 ಸಬ್ಸಡಿ ಜೊತೆಗೆ ಕೆಲವು ರಾಜ್ಯಗಳು ತಮ್ಮ ರಾಜ್ಯದ ವಾಹನ ಖರೀದಿದಾರರಿಗಾಗಿ ಹೆಚ್ಚಿನ ಮಟ್ಟದ ಸಬ್ಸಡಿ ಒದಗಿಸುತ್ತವೆ.

ಹೊಸ ಆರ್‌ವಿ400 ಮಾದರಿಯು ರೆಬಲ್ ರೆಡ್, ಮಿಸ್ಟ್ ಗ್ರೆ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ.

ಆರ್‌ವಿ400 ಮಾದರಿಯು ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡಲಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಈ ಬೈಕಿನಲ್ಲಿವೆ.

ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ಹೊಸ ಇವಿ ಬೈಕ್‌ನಲ್ಲಿ ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ಪ್ರಮುಖವಾಗಿವೆ.

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಇದಲ್ಲದೆ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಅಳವಡಿಸಿದ್ದು, ಹೊಸ ಕೀ ಲೆಸ್ ಎಂಟ್ರಿ ಫೀಚರ್ಸ್ ಮೂಲಕ ಬೈಕ್ ಮಾಲೀಕರು ಕೀ ಇಲ್ಲದೆಯೇ ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್‌ನಲ್ಲಿ 'ಸ್ವೈಪ್ ಟು ಸ್ಮಾರ್ಟ್' ಬಳಸಿ ಬೈಕ್ ಚಾಲನೆ ಮಾಡಬಹುದಾಗಿದೆ.

ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್ ಮೂಲಕ 'ಸ್ವೈಪ್ ಟು ಸ್ಮಾರ್ಟ್' ಮಾತ್ರವಲ್ಲದೇ ಲಾಕ್/ಅನ್‌ಲಾಕ್, ಬ್ಯಾಟರಿ ಲಭ್ಯತೆ, ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆ ಸಲ್ಲಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಇವಿ ವಾಹನಗಳ ಖರೀದಿ ಮೇಲೆ ಈ ಹಿಂದೆ ನೀಡಲಾಗುತ್ತಿದ್ದ ಕೆಲವು ಆಫರ್‌ಗಳು ಇದೀಗ ನಿಧಾನವಾಗಿ ಕಡಿತಗೊಳಿಸಲಾಗುತ್ತಿದ್ದು, ರಿವೋಲ್ಟ್ ಕಂಪನಿಯು ಸಹ ಆರಂಭದಲ್ಲಿ ನೀಡಲಾಗಿದ್ದ ಕೆಲವು ಆಫರ್‌ಗಳನ್ನು ಕಡಿತಗೊಳಿಸಿ ಬೆಲೆ ಹೆಚ್ಚಳ ನಿರ್ಧಾರ ಕೈಗೊಂಡಿದೆ.

ಜೊತೆಗೆ ಕಂಪನಿಯು ಹೊಸ ಬೈಕಿನ ಬ್ಯಾಟರಿ ಮೇಲೆ ನೀಡಲಾಗುತ್ತಿದ್ದ 8 ವರ್ಷ ಅಥವಾ 1.50 ಲಕ್ಷ ಕಿ.ಮೀ ಮೇಲೆ ವಾರಂಟಿ ಅವಧಿಯನ್ನು ಇದೀಗ 6 ವರ್ಷ ಅಥವಾ 1 ಲಕ್ಷ ಕಿ.ಮೀ ಗೆ ವಾರಂಟಿ ಅವಧಿ ಇಳಿಕೆ ಮಾಡಿದ್ದು, ಬೇಡಿಕೆ ಹೆಚ್ಚಿದ್ದಂತೆ ಕೆಲವು ವಿನಾಯ್ತಿಗಳನ್ನು ಹಿಂಪಡೆದಿದೆ.


Click it and Unblock the Notifications








