ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಹೊಸ ವಿನ್ಯಾಸದ ಕ್ಲಾಸಿಕ್ ಯಜ್ಡಿ ಬೈಕ್‌ಗಳು
ಭಾರತೀಯ ಮಾರುಕಟ್ಟೆಯಲ್ಲಿ ಹೊಸ ರೂಪದೊಂದಿಗೆ ಬಿಡುಗಡೆಯಾಗಿರುವ ಜಾವಾ ಕ್ಲಾಸಿಕ್ ಬೈಕ್‌ಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಜಾವಾ ಬೈಕ್‌ಗಳನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಿ ಯಶಸ್ವಿಯಾಗಿರುವ ಕ್ಲಾಸಿಕ್ ಲೆಜೆಂಡ್ ಕಂಪನಿಯು ಇದೀಗ ಯಜ್ಡಿ ಬೈಕ್‌ಗಳಿಗೂ ಹೊಸ ರೂಪ ನೀಡಲು ಮುಂದಾಗಿದೆ.

ಮಹೀಂದ್ರಾ ಅಂಗಸಂಸ್ಥೆಯಾಗಿರುವ ಕ್ಲಾಸಿಕ್ ಲೆಜೆಂಡ್ ಕಂಪನಿಯು ಜಾವಾ ಮೋಟಾರ್‌ಸೈಕಲ್‌ಗಳ ಬಿಡುಗಡೆ ನಂತರ ಇದೀಗ ಮತ್ತೊಂದು ಜನಪ್ರಿಯ ಕ್ಲಾಸಿಕ್ ಬೈಕ್ ಮಾದರಿಯಾಗಿರುವ ಯಜ್ಡಿ ಬೈಕ್ ಮಾದರಿಗಳನ್ನು ಸಹ ಹೊಸ ಎಂಜಿನ್ ಮತ್ತು ನವೀಕರಿಸಿದ ವಿನ್ಯಾಸದೊಂದಿಗೆ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಕ್ಲಾಸಿಕ್ ಲೆಜೆಂಡ್ ಕಂಪನಿಯು 2022ರ ಆರಂಭದಲ್ಲಿ ಹೊಸ ಯಜ್ಡಿ ಬೈಕ್ ಮಾದರಿಗಳನ್ನು ನವೀಕೃತ ವಿನ್ಯಾಸ ಮತ್ತು ಸುಧಾರಿತ ಎಂಜಿನ್‌ನೊಂದಿಗೆ ಬಿಡುಗಡೆಯ ಸುಳಿವು ನೀಡಿದ್ದು, ಕ್ಲಾಸಿಕ್ ಬೈಕ್ ಪ್ರಿಯರಲ್ಲಿ ಮತ್ತೊಮ್ಮೆ ಕುತೂಹಲ ಹುಟ್ಟುಹಾಕಿದೆ.

ಹೊಸ ಮಾದರಿಯ ಯಜ್ಡಿ ಬೈಕ್ ಬಿಡುಗಡೆಯ ಕುರಿತಂತೆ ಸರಣಿ ಟ್ವಿಟ್‌ಗಳನ್ನು ಮಾಡಿರುವ ಕ್ಲಾಸಿಕ್ ಲೆಜೆಂಡ್ ಸಹ-ಸಂಸ್ಥಾಪಕ ಅನುಪಮ್ ಥರೇಜಾ ಅವರು 1960ರ ದಶಕದಿಂದ ಜನಪ್ರಿಯವಾಗಿದ್ದ ಐಕಾನಿಕ್ ಯೆಜ್ಡಿ ಮೋಟಾರ್‌ಸೈಕಲ್ ಬ್ರಾಂಡ್ ಅನ್ನು ಪುನಾಂಭಿಸುವ ಸುಳಿವು ನೀಡಿದ್ದಾರೆ.

ಸದ್ಯ ಜಾವಾ ಮತ್ತು ಯಜ್ಡಿ ಬೈಕ್‌ಗಳ ಮರು ನಿರ್ಮಾಣ ಮತ್ತು ಮಾರಾಟದ ಹಕ್ಕು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿ ಬಳಿಯಿದ್ದು, ಇದು ಮಹೀಂದ್ರಾ ಅಂಗಸಂಸ್ಥೆಯಾಗಿ ಭಾರತದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಜಾವಾ, ಜಾವಾ 42 ಮತ್ತು ಪೆರಾಕ್ ಬೈಕ್‌ಗಳನ್ನು ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯೇ ಅಭಿವೃದ್ದಿಗೊಳಿಸಿ ನಿರ್ಮಾಣ ಮಾಡುತ್ತಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಅಸಲಿಗೆ ಜಾವಾ ಮತ್ತು ಯೆಜ್ಡಿ ಕಂಪನಿಗಳು 90ರ ದಶಕದಲ್ಲೇ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯ ಪಾಲಾಗಿದ್ದು, ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯು ಭಾರತವನ್ನು ಹೊರತುಪಡಿಸಿ ಯುರೋಪ್ ಮತ್ತು ದಕ್ಷಿಣ ಅಮೆರಿಕದ ಕೆಲವು ರಾಷ್ಟ್ರಗಳಲ್ಲಿ ಮಾತ್ರ ತನ್ನ ಮಾರಾಟ ಜಾಲವನ್ನು ಹೊಂದಿದೆ.

ಹಲವು ಪ್ರಯತ್ನಗಳ ನಂತರ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಯು ಬಿಎಸ್ಎ ಕಂಪನಿಯೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಜಾವಾ ನಂತರ ಯಜ್ಡಿ ಬೈಕ್‌ಗಳನ್ನು ಸಹ ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಯ ಅನುಸಾರ ಉತ್ಪಾದನೆ ಪುನಾರಂಭಿಸುವ ಬಗ್ಗೆ ಯೋಜನೆ ರೂಪಿಸಿವೆ.

ಜಾವಾ ಹೊಸ ಕ್ಲಾಸಿಕ್ ಬೈಕ್‌ಗಳು 300ಸಿಸಿ ವಿಭಾಗದಲ್ಲಿ ಸದ್ದು ಮಾಡಲಿದ್ದರೆ ಯಜ್ಡಿ ಹೊಸ ಬೈಕ್ ಮಾದರಿಗಳು 250ಸಿಸಿ, 650 ಸಿಸಿ ಸಾಮರ್ಥ್ಯ ಎಂಜಿನ್‌ನೊಂದಿಗೆ ಮಾರುಕಟ್ಟೆ ಲಗ್ಗೆಯಿಡಲಿದ್ದು, ರೆಟ್ರೋ ಲುಕ್‌ನೊಂದಿಗೆ ಸುಧಾರಿತ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

ಇದಷ್ಟೇ ಅಲ್ಲದೇ ಬಿಎಸ್ಎ ಮೋಟಾರ್‌ಸೈಕಲ್ ಕಂಪನಿಯು ಕೆಲವು ಪ್ರೀಮಿಯಂ ಬೈಕ್‌ಗಳನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡುವ ನೀರಿಕ್ಷೆಗಳಿದ್ದು, ಸದ್ಯ ವಿದೇಶಿ ಮಾರುಕಟ್ಟೆಯಲ್ಲಿರುವ ಬಿಎಸ್ಎ 550ಸಿಸಿ, 750ಸಿಸಿ ಬೈಕ್‌ಗಳನ್ನೇ ಭಾರತದಲ್ಲೂ ಮಾರಾಟ ಆರಂಭಿಸುವ ಚಿಂತನೆ ನಡೆಸಿದೆ.

ಜೊತೆಗೆ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ಎಲೆಕ್ಟ್ರಿಕ್ ಕ್ಲಾಸಿಕ್ ಬೈಕ್ ಮಾದರಿಯನ್ನು ಅಭಿವೃದ್ದಿಗೊಳಿಸುವ ಯೋಜನೆಯಿದ್ದು, ಜಾವಾ ಬೈಕಿನಲ್ಲೂ ಕೂಡಾ ಎಲೆಕ್ಟ್ರಿಕ್ ಆವೃತ್ತಿಯನ್ನು ಅಭಿವೃದ್ದಿಗೊಳ್ಳುತ್ತಿರುವುದಾಗಿ ಕ್ಲಾಸಿಕ್ ಲೆಜೆಂಡ್ ಕಂಪನಿಯೇ ಖಚಿತಪಡಿಸಿದೆ.


Click it and Unblock the Notifications








