ಇದೇ ತಿಂಗಳು 19ರಂದು ಬಿಡುಗಡೆಯಾಗಲಿದೆ ಹೈ ರೇಂಜ್ ಹೊಂದಿರುವ ಹೊಸ ಎಥರ್ 450ಎಕ್ಸ್
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಇದೇ ತಿಂಗಳು 19ರಂದು ಅತ್ಯಧಿಕ ಮೈಲೇಜ್ ರೇಂಜ್ ಹೊಂದಿರುವ ಹೊಸ ತಲೆಮಾರಿನ ವೈಶಿಷ್ಟ್ಯತೆಯ 450ಎಕ್ಸ್ ಮಾದರಿಯನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಎಥರ್ ಕಂಪನಿಗೆ ದಿನದಿಂದ ದಿನಕ್ಕೆ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದ್ದು, ಕಂಪನಿಯು ಹೊಸ ಮಾರಾಟ ಮಳಿಗೆ ವಿಸ್ತರಣೆಯೊಂದಿಗೆ ಮುಂಬರುವ ಕೆಲ ತಿಂಗಳಿನಲ್ಲಿ ಮತ್ತೆರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದರಲ್ಲಿ ಒಂದು ಹೊಸ ಮಾದರಿಯು ನಾಳೆ ಮಾರುಕಟ್ಟೆಗೆ ಲಗ್ಗೆಯಿಡಲಿದ್ದರೆ ಮತ್ತೊಂದು ವಿಸ್ತರಿತ ಮೈಲೇಜ್ ರೇಂಜ್ ಆಯ್ಕೆ ಹೊಂದಿರುವ ಮಾದರಿಯು ಈ ವರ್ಷಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸಲಿದೆ.

ಎಥರ್ ಕಂಪನಿಯು ಸದ್ಯ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಸಬ್ಸಡಿ ಯೋಜನೆಯೊಂದಿಗೆ ಮಾರಾಟ ಮಾಡುತ್ತಿದ್ದು, ಇದರಲ್ಲಿ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಮಾರಾಟಗೊಳ್ಳುತ್ತಿವೆ.

ಪ್ರಸ್ತುತ ಖರೀದಿಗೆ ಲಭ್ಯವಿರುವ 450ಎಕ್ಸ್ ಮಾದರಿಯಲ್ಲಿಯೇ ಕಂಪನಿಯು ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಆವೃತ್ತಿಯು ವಿಸ್ತರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಹೆಚ್ಚಿನ ಮಟ್ಟದ ಪ್ರೀಮಿಯಂ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಸದ್ಯ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ 2.9kWh ಬ್ಯಾಟರಿ ಪ್ಯಾಕ್ ಮತ್ತು 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಬಿಡುಗಡೆಯಾಗಲಿರುವ ಹೊಸ ಮಾದರಿಯು ಪ್ರತಿ ಚಾರ್ಜ್‌ಗೆ 146 ಕಿ.ಮೀ ಮೈಲೇಜ್ ಹೊಂದಿರಲಿದೆ ಎನ್ನಲಾಗಿದೆ.

ಹೊಸ 450ಎಕ್ಸ್ ಹೈ ರೇಂಜ್ ಮಾದರಿಗಾಗಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದಿಂದಲೂ(ARAI) ಅನುಮತಿ ಸಿಕ್ಕಿದ್ದು, ಹೊಸ ಮಾದರಿಯು ಕೇಂದ್ರ ಸರ್ಕಾರವು ಇತ್ತೀಚಿಗೆ ನಿಗದಿಪಡಿಸಿರುವ ಹಲವಾರು ಸುರಕ್ಷಾ ಮಾನದಂಡಗಳನ್ನು ಅಭಿವೃದ್ದಿಗೊಂಡಿದೆ.

ಹೊಸ ಎಥರ್ 450ಎಕ್ಸ್ ಮಾದರಿಯಲ್ಲಿ ಕಂಪನಿಯು ಸುಮಾರು ನಾಲ್ಕು ವಿಭಿನ್ನವಾದ ರೈಡಿಂಗ್ ಮೋಡ್‌ಗಳನ್ನು ನೀಡಲಾಗುವುದು ಎಂದು ಹೇಳಲಾಗಿದ್ದು, ಹೊಸ ಮಾದರಿಯೊಂದಿಗೆ ಹಳೆಯ ಮಾದರಿಯ ಮಾರಾಟವು ಸಹ ಮುಂದುವರಿಯಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಎಥರ್ ಇವಿ ಸ್ಕೂಟರ್‌ಗಳ ಪ್ರಮುಖ ಸ್ಪರ್ಧಿ ಮಾದರಿಗಳು ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವುದರಿಂದ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯಂತೆ ವಿಸ್ತರಿತ ಮೈಲೇಜ್ ಪ್ರೇರಿತ ಬ್ಯಾಟರಿ ಆಯ್ಕೆ ನೀಡುತ್ತಿದ್ದು, ವಿಸ್ತರಿತ ಮೈಲೇಜ್ ಪ್ರೇರಿತ ಬ್ಯಾಟರಿ ಆಯ್ಕೆ ಮಾತ್ರವಲ್ಲದೆ ಹಲವಾರು ಸುರಕ್ಷಾ ಫೀಚರ್ಸ್‌ಗಳನ್ನು ಸ್ಕೂಟರ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಲಿದೆ.

ಹೀಗಾಗಿ ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಕಡಿಮೆ ಮೈಲೇಜ್ ಮಾದರಿ ಇಲ್ಲದೇ ವಿಸ್ತರಿತ ಮೈಲೇಜ್ ಪ್ರೇರಿತ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, ವಿಸ್ತರಿತ ಮೈಲೇಜ್ ಪ್ರೇರಿತ ಮಾದರಿಯು ಪ್ರಸ್ತುತ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.

ರೂ.1,50,657ಕ್ಕೆ ಮಾರಾಟಗೊಳಿಸುತ್ತಿರುವ 450 ಎಕ್ಸ್ ಹಳೆಯ ಮಾದರಿಯು ಹೊಸ ಮಾದರಿಯಲ್ಲಿ ಪ್ರಸ್ತುತ ಮಾದರಿಗಿಂತ ರೂ. 10 ಸಾವಿರದಿಂದ ರೂ. 15 ಸಾವಿರದಿಂದ ದುಬಾರಿಯಾಗಲಿದ್ದು, ಇದು ಪ್ರತಿಸ್ಪರ್ಧಿ ಓಲಾ ಇವಿ ಮಾದರಿಗಳಿಂತಲೂ ಕಡಿಮೆ ಮೈಲೇಜ್ ಹೊಂದಿದ್ದರೂ ಪ್ರೀಮಿಯಂ ಫೀಚರ್ಸ್ ಮತ್ತು ಉತ್ಪಾದನಾ ಗುಣಮಟ್ಟವು ಗ್ರಾಹಕರನ್ನು ಸೆಳೆಯಲಿದೆ.

ಇದಲ್ಲದೆ ಎಥರ್ ಕಂಪನಿಯು ಇತರೆ ಇವಿ ಮಾದರಿಗಿಂತಲೂ ತುಸು ದುಬಾರಿಯಾಗಿದ್ದರೂ ಕೂಡಾ ಅತ್ಯುತ್ತಮ ಫೀಚರ್ಸ್ ಮತ್ತು ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳವಲ್ಲಿ ಯಶಸ್ವಿಯಾಗಿದ್ದು, ಹೊಸ ಮಾದರಿಯು ಮುಂದಿನ ಕೆಲವೇ ತಿಂಗಳಿನಲ್ಲಿ ಎಥರ್ ಕಂಪನಿಗೆ ಭಾರೀ ಬೇಡಿಕೆ ತಂದುಕೊಡುವ ನೀರಿಕ್ಷೆಗಳಿವೆ.

ಹೊಸ ಯೋಜನೆಗಳಿಗಾಗಿ ಪೂರಕವಾಗಿ ಎಥರ್ ಎನರ್ಜಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಮೂರನೇ ಉತ್ಪಾದನಾ ಘಟಕ ನಿರ್ಮಾಣ ಯೋಜನೆಯನ್ನು ಆರಂಭಿಸುವ ಸಿದ್ದತೆಯಲ್ಲಿದೆ.

ಹೊಸ ಉತ್ಪನ್ನಗಳ ಬಿಡುಗಡೆಗೂ ಮುನ್ನ ಕಂಪನಿಯು ಉತ್ಪಾದನಾ ಪ್ರಮಾಣವನ್ನು ಹೆಚ್ಚಳ ಮಾಡಲು ಉತ್ಪಾದನಾ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದು, ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದೆ.

ಈ ವರ್ಷಾಂತ್ಯಕ್ಕೆ ಕಂಪನಿಯು ಹೊಸೂರಿನಲ್ಲಿಯೇ ಎರಡನೇ ಘಟಕವನ್ನು ಸಹ ತೆರೆಯುತ್ತಿದ್ದು, ಈ ವರ್ಷದ ಕೊನೆಯಲ್ಲಿ ಕಾರ್ಯಾರಂಭ ನಡೆಸಲಿರುವ ಹೊಸ ಘಟಕವು ವಾರ್ಷಿಕವಾಗಿ 2.80 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಇದರೊಂದಿಗೆ ಎಥರ್ ಕಂಪನಿಯು ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಗುರಿಹೊಂದಿದ್ದು, ಈ ಎರಡು ಘಟಕದಲ್ಲಿ ಮಾತ್ರವಲ್ಲದೇ ಕಂಪನಿಯು ಇನ್ನು ಹೆಚ್ಚಿನ ಮಟ್ಟದ ಉತ್ಪಾದನಾ ಸಾಮರ್ಥ್ಯಕ್ಕಾಗಿ ಮೂರನೇ ಘಟಕವನ್ನು ಸಹ ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ.


Click it and Unblock the Notifications








