ಬೆಳಗಾವಿಯಲ್ಲಿ ಕರ್ನಾಟಕದ ಐದನೇ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ತೆರೆದ ಎಥರ್ ಎನರ್ಜಿ
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾಗಿರುವ ಎಥರ್ ಎನರ್ಜಿ(Ather Energy) ಗ್ರಾಹಕರ ಬೇಡಿಕೆಯೆಂತೆ ಮಾರಾಟ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಕಂಪನಿಯು ಇದೀಗ ಕರ್ನಾಟಕದಲ್ಲಿ ತನ್ನ ಐದನೇ ಮಾರಾಟ ಮಳಿಗೆಯನ್ನು ಆರಂಭಿಸಿದೆ.

ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆ ನಡುವೆಯೂ ಎಥರ್ ನಿರ್ಮಾಣದ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಕಳೆದ ಕೆಲ ತಿಂಗಳ ಅವಧಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ 15ಕ್ಕೂ ಹೆಚ್ಚು ಹೊಸ ಶೋರೂಂಗಳಿಗೆ ಚಾಲನೆ ನೀಡಿದೆ. ಇತ್ತೀಚೆಗೆ ಕಂಪನಿಯು ಸಾಂಸ್ಕೃತಿಕ ನಗರಿ ಮೈಸೂರು ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೊಸ ಶೋರೂಂ ಆರಂಭಿಸಿದ ನಂತರ ಇದೀಗ ಕುಂದಾನಗರಿ ಬೆಳಗಾವಿಯಲ್ಲಿ ಮೊದಲ ಶೋರೂಂ ತೆರೆದಿದೆ.

ಉತ್ತರ ಕರ್ನಾಟಕದಲ್ಲಿ ಅತ್ಯುತ್ತಮ ವಾಹನ ಮಾರಾಟ ಜಾಲವನ್ನು ಹೊಂದಿರುವ ಬೆಲ್ಲದ್ ಗ್ರೂಪ್ ಜೊತೆಗೂಡಿ ಹೊಸ ಶೋರೂಂ ಆರಂಭಿಸಿರುವ ಎಥರ್ ಕಂಪನಿಯು ಉತ್ತಮ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಬೆಳಗಾವಿಯ ವಿಜಯನಗರದಲ್ಲಿ ಎಥರ್ ಹೊಸ ಎಕ್ಸ್ಪಿರೆನ್ಸ್ ಸೆಂಟರ್ ಆರಂಭಿಸಲಾಗಿದೆ.

ಎಥರ್ ಎನರ್ಜಿ ಈಗಾಗಲೇ ಬೆಂಗಳೂರಿನಲ್ಲಿ ಎರಡು ಶೋರೂಂಗಳನ್ನು ಮತ್ತು ಮೈಸೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ತಲಾ ಒಂದು ಶೋರೂಂ ಹೊಂದುವ ಮೂಲಕ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಬೆಳಗಾವಿಯಲ್ಲಿನ ಹೊಸ ಶೋರೂಂನೊಂದಿಗೆ ಎಥರ್ ಕಂಪನಿಯು ಇದುವರೆಗೆ ದೇಶಾದ್ಯಂತ ಒಟ್ಟು 30 ಶೋರೂಂ ತೆರೆದಂತಾಗಿದೆ.

ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಮಂಗಳೂರು, ದಾವಣಗೆರೆ ಸೇರಿದಂತೆ ಪ್ರಮುಖ ನಗರಗಳಲ್ಲಿ ಇವಿ ಸ್ಕೂಟರ್ ಶೋರೂಂ ತೆರೆಯುವ ಸಿದ್ದತೆಯಲ್ಲಿದ್ದು, ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ಪಡೆದುಕೊಳ್ಳುತ್ತಿರುವ ಎಥರ್ ಎನರ್ಜಿ ಕಂಪನಿಯು ಮುಂಬರುವ ಕೆಲ ತಿಂಗಳಿನಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಎಥರ್ ಕಂಪನಿಯು ಸದ್ಯ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟಗೊಳಿಸುತ್ತಿದ್ದು, ಸಬ್ಸಡಿ ಯೋಜನೆಯೊಂದಿಗೆ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಬೆಲೆ ಹೊಂದಿವೆ.

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಸಾಂಪ್ರಾಯಿಕ ಇಂಧನಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳು ಹೆಚ್ಚಿದಂತೆ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ಸೌಲಭ್ಯಗಳನ್ನು ಸಹ ಹೆಚ್ಚಿಸಲಾಗುತ್ತಿದೆ. ಇವಿ ವಾಹನಗಳ ಮಾರಾಟ ಹೆಚ್ಚಳಕ್ಕೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಪ್ರಮುಖ ಆಕರ್ಷಣೆಯಾಗಿದ್ದು, ಇವಿ ಗ್ರಾಹಕರನ್ನು ಸೆಳೆಯಲು ಎಥರ್ ಎನರ್ಜಿ ಕಂಪನಿಯು ಕರ್ನಾಟಕ ಸರ್ಕಾರದೊಂದಿಗೆ ಬೃಹತ್ ಯೋಜನೆಯೊಂದನ್ನು ಜಾರಿಗೆ ತಂದಿದೆ.

ರಾಜ್ಯದ ಮೂರು ಪ್ರಮುಖ ವಿದ್ಯುತ್ ಸರಬರಾಜು ಕಂಪನಿಗಳನ್ನು ಒಳಗೊಂಡಿರುವ ಎಸ್ಕಾಂ ಜೊತೆಗೆ ಹೊಸ ಸಹಭಾಗಿತ್ವ ಯೋಜನೆ ಘೋಷಣೆ ಮಾಡಿರುವ ಎಥರ್ ಎನರ್ಜಿ ಕಂಪನಿಯು ರಾಜ್ಯಾದ್ಯಂತ 1 ಸಾವಿರ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆಗೆ ಚಾಲನೆ ನೀಡಿದೆ.

ಹೊಸ ಸಹಭಾಗಿತ್ವ ಯೋಜನೆ ಅಡಿಯಲ್ಲಿ ಸ್ಥಾಪನೆಗೊಳ್ಳುವ 1 ಸಾವಿರ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಯ ಸಂಪೂರ್ಣ ವೆಚ್ಚ ಮತ್ತ ನಿರ್ವಹಣೆಯನ್ನು ಎಥರ್ ಎನರ್ಜಿ ಕಂಪನಿಯ ವಹಿಸಿಕೊಳ್ಳಲಿದ್ದರೆ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಗಾಗಿ ಆಯಕಟ್ಟಿನ ಸ್ಥಳವನ್ನು ಗುರುತಿಸುವುದು ಮತ್ತು ವಿದ್ಯುತ್ ಪೂರೈಕೆಯನ್ನು ಎಸ್ಕಾಂ ಕಂಪನಿ ನಿರ್ವಹಿಸಲಿದೆ.

ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಿರುವ ಎಥರ್ ಕಂಪನಿಯು ಮುಂದಿನ ಜೂನ್ ಕೊನೆಯ ತನಕ ಇವಿ ವಾಹನ ಬಳಕೆದಾರರಿಗೆ ಸಂಪೂರ್ಣವಾಗಿ ಉಚಿತ ಚಾರ್ಜಿಂಗ್ ಸೌಲಭ್ಯ ಒದಗಿಸುವುದಾಗಿ ಘೋಷಿಸಿದ್ದು, ತ್ವರಿತವಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಹೆಚ್ಚಿಸಲು ಇದು ನೆರವಾಗಲಿದೆ.

ಇನ್ನು ಎಥರ್ ಎನರ್ಜಿ ಕಂಪನಿಯು ದೇಶಾದ್ಯಂತ ತನ್ನ ಚಾರ್ಜಿಂಗ್ ನೆಟ್‌ವರ್ಕ್ ವಿಸ್ತರಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆ ಅಡಿ ಎಥರ್ ಗ್ರಿಡ್ 2.0 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಿದೆ. ಹೊಸ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಪ್ರಸ್ತುತ ಕಾರ್ಯನಿರ್ವಹಣೆಯಲ್ಲಿರುವ ಚಾರ್ಜಿಂಗ್ ನಿಲ್ದಾಣಗಳಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ಜೊತೆಗೆ ಹೊಸ ಎಥರ್ ಗ್ರಿಡ್ 2.0 ಸೌಲಭ್ಯವು ಹೆಚ್ಚು ಗುಣಮಟ್ಟದಿಂದ ಕೂಡಿದ್ದು, ಹೊಸ ನೆಟ್‌ವರ್ಕ್ ಅನ್ನು ಅತಿಯಾದ ಮಳೆ, ಬಿಸಿಲಿನ ಪರಿಸ್ಥಿತಿಗಳನ್ನು ಒಡ್ಡಿಕೊಳ್ಳುವ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಮಾಡ್ಯುಲರ್ ವಿನ್ಯಾಸದೊಂದಿಗೆ ರಿಮೋಟ್ ಡಯಾಗ್ನೋಸ್ಟಿಕ್ಸ್ ಜೋಡಿಸಲಾಗಿದೆ.

ಎಥರ್ ಕಂಪನಿಯು ಕರ್ನಾಟಕದಲ್ಲಿ ಈಗಾಗಲೇ 58 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳೊಂದಿಗೆ ದೇಶದ ಪ್ರಮುಖ ನಗರಗಳಲ್ಲಿ 200ಕ್ಕೂ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪನೆ ಮಾಡಿದ್ದು, ಇದೀಗ ಹೊಸ ಸಹಭಾಗಿತ್ವ ಯೋಜನೆಯು ಕಂಪನಿಯ ಭವಿಷ್ಯದ ಯೋಜನೆಗಳಿಗೆ ಮಹತ್ವದ ಹೆಜ್ಜೆಯಾಗಲಿದೆ.


Click it and Unblock the Notifications








