ಶೀಘ್ರದಲ್ಲಿಯೇ ಬಿಡುಗಡೆಯಾಗಲಿವೆ ಎಥರ್ ನಿರ್ಮಾಣದ ಮತ್ತೆರಡು ಹೊಸ ಇವಿ ಸ್ಕೂಟರ್‌ಗಳು
ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ಉತ್ಪನ್ನಗಳ ಸರಣಿ ವಿಸ್ತರಿಸುವ ಯೋಜನೆಯಲ್ಲಿದ್ದು, ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ಮತ್ತೆರಡು ಹೊಸ ಇವಿ ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ದುಬಾರಿ ಇಂಧನ ಪರಿಣಾಮ ಇವಿ ವಾಹನ ಮಾರಾಟ ಹೆಚ್ಚುತ್ತಿರುವುದರಿಂದ ಗ್ರಾಹಕರ ಬೇಡಿಕೆಯೆಂತೆ ವಿವಿಧ ಇವಿ ಸ್ಕೂಟರ್ ಮಾದರಿಗಳನ್ನು ಪರಿಚಯಿಸಲು ಸಿದ್ದವಾಗುತ್ತಿರುವ ಎಥರ್ ಎನರ್ಜಿ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ 450 ಪ್ಲಸ್ ಮತ್ತು 450ಎಕ್ಸ್ ಮಾದರಿಗಳಿಂತಲೂ ವಿಭಿನ್ನವಾದ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಪ್ರೀಮಿಯಂ ಸ್ಥಾನ ಪಡೆದುಕೊಂಡಿರುವ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳು ಪ್ರತಿಸ್ಪರ್ಧಿ ಮಾದರಿಗಿಂತಲೂ ತುಸು ದುಬಾರಿಯಾಗಿದ್ದರೂ ವಿಭಿನ್ನವಾದ ತಾಂತ್ರಿಕ ಸೌಲಭ್ಯ, ಗುಣಮಟ್ಟ ಮತ್ತು ಸುರಕ್ಷತೆಯಲ್ಲಿ ಇತರೆ ಮಾದರಿಗಿಂತಲೂ ಹೆಚ್ಚು ಗ್ರಾಹಕ ವಿಶ್ವಾಸ ಹೊಂದಿವೆ.

ಹೀಗಾಗಿ ಮೂಲ ಮಾದರಿಳಲ್ಲಿನ ಗುಣಮಟ್ಟವನ್ನು ಆಧರಿಸಿ ಕಂಪನಿಯು ಮುಂಬರುವ ದಿನಗಳಲ್ಲಿ ಒಂದು ಬಜೆಟ್ ಬೆಲೆಯ ಸ್ಕೂಟರ್ ಮಾದರಿಯನ್ನು ಮತ್ತೊಂದು 450ಎಕ್ಸ್ ಮಾದರಿಗಿಂತಲೂ ಹೆಚ್ಚಿನ ಶ್ರೇಣಿ ಮತ್ತು ತಂತ್ರಜ್ಞಾನ ಸೌಲಭ್ಯ ಹೊಂದಿರುವ ಮ್ಯಾಕ್ಸಿ ಸ್ಕೂಟರ್ ಪರಿಚಯಿಸಲಿದೆ.

ಬಜೆಟ್ ಬೆಲೆಯ ಇವಿ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಕನಿಷ್ಠ 90 ಕಿ.ಮೀ ನಿಂದ 100 ಕಿ.ಮೀ ಮೈಲೇಜ್ ರೇಂಜ್‌ನೊಂದಿಗೆ ಬಿಡುಗಡೆಯಾಗಲಿದ್ದು, ಇದರಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್ ತೆಗೆದುಹಾಕಲಿರುವ ಕಂಪನಿಯು ರೂ.1 ಲಕ್ಷದೊಳಗೆ ಬಿಡುಗಡೆ ಮಾಡಬಹುದಾಗಿದೆ.

ಮತ್ತೊಂದು ಹೊಸ ಮಾದರಿಯಾದ ಮ್ಯಾಕ್ಸಿ ಇವಿ ಸ್ಕೂಟರ್ ಮಾದರಿಯು 450ಎಕ್ಸ್ ಮಾದರಿಗಿಂತಲೂ ಹೆಚ್ಚು ಫೀಚರ್ಸ್ ಮತ್ತು ಬ್ಯಾಟರಿ ಮಾದರಿಯೊಂದಿಗೆ ಬಿಡುಗಡೆಯಾಗಲಿದ್ದು, ಇದು ಪ್ರತಿ ಚಾರ್ಜ್‌ಗೆ 140 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್‌ನೊಂದಿಗೆ 450ಎಕ್ಸ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.

ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಮಾರಾಟಗೊಳ್ಳುತ್ತಿದ್ದು, ಮುಂಬರುವ ಎರಡು ಹೊಸ ಮಾದರಿಗಳು ವಿಭಿನ್ನ ಗ್ರಾಹಕರ ವರ್ಗವನ್ನು ಸೆಳೆಯಲು ಸಿದ್ದವಾಗುತ್ತಿವೆ.

ಹೊಸ ಯೋಜನೆಗೆ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ಕಂಪನಿಯು ಎರಡನೇ ಉತ್ಪಾದನಾ ಘಟಕವನ್ನು ತೆರೆಯುತ್ತಿದೆ.

ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದ್ದು, ಇದೀಗ ಕಂಪನಿಯು ಎರಡನೇ ಘಟಕವನ್ನು ಸಹ ಹೊಸೂರಿನಲ್ಲಿಯೇ ತೆರೆಯಲು ನಿರ್ಧರಿಸಿದೆ.

ಎರಡನೇ ಘಟಕದ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಈ ವರ್ಷದ ಮಧ್ಯಂತರ ಕಾರ್ಯಾರಂಭ ನಡೆಸಲಿರುವ ಹೊಸ ಘಟಕವು ವಾರ್ಷಿಕವಾಗಿ 2.80 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ.

ಎಥರ್ ಕಂಪನಿಯು ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಗುರಿಹೊಂದಿದ್ದು, ಹೊಸ ಯೋಜನೆಗಳಿಗಾಗಿ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ರೂ. 650 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.

ಹೊಸ ಯೋಜನೆಯೊಂದಿಗೆ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ವಾರ್ಷಿಕವಾಗಿ 1 ಮಿಲಿಯನ್ ಸ್ಕೂಟರ್ ಉತ್ಪಾದನೆ, 5 ಸಾವಿರ ಫಾಸ್ಟ್ ಚಾರ್ಜಿಂಗ್ ಮತ್ತು 600 ಮಾರಾಟ ಮಳಿಗೆಗಳನ್ನು ತೆರೆಯುವ ಗುರಿಹೊಂದಿದೆ.

ಎಥರ್ ಕಂಪನಿಯು ಕಳೆದ ವರ್ಷ 2021ರಲ್ಲಿ 2020ರ ಅವಧಿಗಿಂತಲೂ 12 ಪಟ್ಟು ಹೆಚ್ಚು ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳೊಂದಿಗೆ ಇನ್ನು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.


Click it and Unblock the Notifications








