ಭಾರತದಲ್ಲಿ ಹೊಸ ಯುಗಕ್ಕೆ ನಾಂದಿ.. ಮತ್ತೆ ಇವಿ ರೂಪದಲ್ಲಿ ಬರುತ್ತಿದೆ ಕೈನೆಟಿಕ್‌ ಲೂನಾ!

ಕೆಲ ದಶಕದ ಹಿಂದೆ ಭಾರತದಲ್ಲಿ ಜನಪ್ರಿಯವಾಗಿದ್ದ ಕೈನೆಟಿಕ್‌ ಲೂನಾ ಮೊಪೆಡ್ ಮತ್ತೆ ಮಾರುಕಟ್ಟೆಗೆ ಬರುತ್ತದೆ. ಅದು ಈ ಬಾರಿ ಎಲೆಕ್ಟ್ರಿಕ್ ವಾಹನ (ಇವಿ) ರೂಪದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಇದನ್ನು ಸ್ವತಃ ಕಂಪನಿಯೇ ಘೋಷಣೆ ಮಾಡಿದೆ. ಇ-ಲೂನಾದ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.

50 ವರ್ಷಗಳ ಹಿಂದೆ ಭಾರತದಲ್ಲಿ ಕಾರು ಮತ್ತು ಬೈಕುಗಳೆಂದರೇ ಅವು ಕೈಗೆಟುಕದಂತಹ ದೊಡ್ಡ ವಸ್ತುವಾಗಿದ್ದವು. ಶ್ರೀಮಂತರ ಮನೆಗಳಲ್ಲಿ ಮಾತ್ರ ಕಾರು, ದ್ವಿಚಕ್ರ ವಾಹನಗಳು ನೋಡಲು ಕಾಣಸಿಗುತ್ತಿತ್ತು. ಆಗ ವಾಹನಗಳು ಕೇವಲ ಸಿರಿವಂತಿಕೆಯ ಸಂಕೇತವಾಗಿತ್ತು. ಇದನ್ನು ಬದಲಾಯಿಸಿದ ಮೊದಲ ಕಂಪನಿ ಕೈನೆಟಿಕ್. ಇದು ಮಧ್ಯಮ ವರ್ಗದ ಜನರಿಗೂ ಕೈಗೆಟುಕುವ ಬೆಲೆಯಲ್ಲಿಯೇ ದ್ವಿಚಕ್ರ ವಾಹನ ದೊರೆಯುವಂತೆ ಮಾಡಿತು. ಇದಕ್ಕಾಗಿ ಕಡಿಮೆ ಬೆಲೆಗೆ ದ್ವಿಚಕ್ರ ವಾಹನ ಉತ್ಪಾದನೆಯನ್ನು ಆರಂಭ ಮಾಡಿತು.

ಕೈನೆಟಿಕ್ ಕಂಪನಿ ತಯಾರಿಸಿ, ಬಿಡುಗಡೆ ಮಾಡಿದ ಮೊಪೆಡ್ ಹೆಸರು ಲೂನಾ. ಈ ಮೊಪೆಡ್ ಆ ಕಾಲದಲ್ಲಿ ಕೇವಲ 2 ಸಾವಿರ ರೂ.ಗೆ ಮಾರಾಟವಾಗಿತ್ತು. ಹಲವರು, ಈ ಮೊಪೆಡ್ ಖರೀದಿಸಿ, ಬಳಸುತ್ತಿದ್ದರು. ಪುರುಷರಂತೆ ನಾವೇನೂ ಕಮ್ಮಿಯಿಲ್ಲ ಎಂದು ಮಹಿಳೆಯರು ಇದನ್ನು ಬಳಸಲು ಪ್ರಾರಂಭಿಸಿದರು. ಈ ಮೊಪೆಡ್ ಅನ್ನು ಭಾರತೀಯ ಮಾರುಕಟ್ಟೆಗೆ ಮೊದಲ ಬಾರಿಗೆ 1972ರಲ್ಲಿ ಪರಿಚಯಿಸಲಾಯಿತು. ಈ ಕೈನೆಟಿಕ್ ಲೂನಾವನ್ನು ಕೇವಲ 50 ಸಿಸಿ ಎಂಜಿನ್‌ನೊಂದಿಗೆ ಅಭಿವೃದ್ಧಿಪಡಿಸಲಾಗಿತ್ತು.

ಈ ಲೂನಾ ಮೊಪೆಡ್ ತಯಾರಿಕೆಗೆ ಮೂಲತಃ ಪಿಯಾಜಿಯೊ ಸಿಯಾವೊ ಎಂಬ ಕಂಪನಿಯು ಪೇಟೆಂಟ್ ಪಡೆದುಕೊಂಡಿತು. ನಂತರ, ಅದನ್ನು ಕೈನೆಟಿಕ್ ಸ್ವಾಧೀನಪಡಿಸಿಕೊಂಡು, ಮತ್ತಷ್ಟು ಪರೀಕ್ಷರಣೆ ಮಾಡಿ, ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಸುಮಾರು 22 ವರ್ಷಗಳ ನಂತರ ಅಂದರೆ 2000ನೇ ಇಸವಿಯಲ್ಲಿ ಈ ಮೊಪೆಡ್ ಉತ್ಪಾದನೆಯನ್ನು ನಿಲ್ಲಿಸಲಾಯಿತು. ಈ ಮೊಪೆಡ್ ಹೆಸರನ್ನು ಎಷ್ಟೋ ಜನರು ಮರೆತಿಲ್ಲ. ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಆದರೆ, ಈ ಮೊಪೆಡ್ ಅನ್ನು ಸದ್ಯ ನಮ್ಮ ರಸ್ತೆಗಳಲ್ಲಿ ನೋಡುವುದೇ ಅಪರೂಪವಾಗಿದೆ.

ಇದೀಗ ಕೈನೆಟಿಕ್ ಎಂಜಿನಿಯರಿಂಗ್ ಕಂಪನಿ, ಈ ಲೂನಾವನ್ನು ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅದರಂತೆ, ಕೈನೆಟಿಕ್ ಕಂಪನಿಯ ಅಂಗಸಂಸ್ಥೆಯಾದ ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸೊಲ್ಯೂಷನ್ಸ್ ಈ ಲೂನಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬಿಡುಗಡೆ ಮಾಡಲು ತೀರ್ಮಾನ ಮಾಡಿವೆ. ಕೈನೆಟಿಕ್ ಎಂಜಿನಿಯರಿಂಗ್ ಈ ಲೂನಾ ಇ-ಸ್ಕೂಟರ್‌ಗೆ ಮುಖ್ಯ ಚಾಸಿಸ್, ಸ್ಟ್ಯಾಂಡ್, ಸೈಡ್ ಸ್ಟ್ಯಾಂಡ್, ಸ್ವಿಂಗ್ ಆರ್ಮ್ ಬಿಡಿಭಾಗಗಳನ್ನು ತಯಾರಿಕೆ ಮಾಡುವಲ್ಲಿ ನಿರತವಾಗಿದೆ.

ಕೈನೆಟಿಕ್ ಗ್ರೀನ್ ಎನರ್ಜಿ ಇ-ಲೂನಾಗೆ ಮೋಟಾರ್ ಮತ್ತು ಇತರೆ ಅಗತ್ಯ ವಸ್ತುಗಳನ್ನು ತಯಾರಿಸುತ್ತಿದೆ. ದೇಶದ ಗ್ರಾಹಕರ ಬೇಡಿಕೆಯನ್ನು ಪೂರೈಕೆ ಮಾಡಲು ತಿಂಗಳಿಗೆ 5 ಸಾವಿರ ಇ-ಲೂನಾ ಉತ್ಪಾದಿಸಲು ದೊಡ್ಡದಾದ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕೈನೆಟಿಕ್ ಕಂಪನಿ ನಿರ್ಧಾರ ಮಾಡಿದೆ. ಇದಕ್ಕಾಗಿ ಕೈನೆಟಿಕ್ ಎಂಜಿನಿಯರಿಂಗ್ ಲಿಮಿಟೆಡ್, ಪೇಂಟಿಂಗ್ ಮತ್ತು ಇತರೆ ಫ್ಯಾಬ್ರಿಕೇಶನ್ ವರ್ಕ್‌ಶಾಪ್‌ಗಳನ್ನು ಸ್ಥಾಪಿಸಲು ಮುಂದಾಗಿದ್ದು, ಇ-ಲೂನಾ ತಯಾರಿಸಲು ಮೊದಲ ಭಾಗವಾಗಿ 3 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ.

ಇ-ಲೂನಾವನ್ನು ಮಾರುಕಟ್ಟೆಗೆ ತರುವ ಬಗ್ಗೆ ಕೈನೆಟಿಕ್ ಎಂಜಿನಿಯರಿಂಗ್ ಲಿಮಿಟೆಡ್ ಎಂಡಿ ಅಜಿಂಕ್ಯಾ ಫಿರೋಡಿಯಾ ಮಾತನಾಡಿದ್ದಾರೆ. 'ನಾವು ಲೂನಾ ಪರಂಪರೆಯ ಭಾಗವಾಗಲು ತುಂಬಾ ಹೆಮ್ಮೆಪಡುತ್ತೇವೆ!. ಕಂಪನಿ ಉತ್ತುಂಗದಲ್ಲಿದ್ದಾಗ ದಿನಕ್ಕೆ 2000 (ಯುನಿಟ್‌ಗಳು) ಲೂನಾ ಮೊಪೆಡ್ ಮಾರಾಟವಾಗುತ್ತಿದ್ದವು. ಇದೀಗ ಹೊಸ ಅವತಾರದಲ್ಲಿ ಇ-ಲೂನಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ನಮಗೆ ಖಾತ್ರಿಯಿದೆ' ಎಂದು ಹೇಳಿದ್ದಾರೆ. ಇನ್ನು, ಅನೇಕ ಜನರು ಇದನ್ನು ಇಷ್ಟಪಟ್ಟು ಖರೀದಿಸುವ ಸಾಧ್ಯತೆಯಿದ್ದು, ಬೆಲೆ ಹಾಗೂ ಇದರ ಆಕರ್ಷಕ ಲುಕ್ ವಿಶೇಷವಾಗಿ ಯುವಕರನ್ನು ಆಕರ್ಷಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Kinetic luna is coming back in ev form
Story first published: Tuesday, December 27, 2022, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X